ಬೆಂಗಳೂರು,ಮೇ.4- ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಇಂದು ಸಂಜೆಯವರೆಗೂ ಕಾಲಾವಕಾಶವಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ.ರೇವಣ್ಣ ಅವರಿಬ್ಬರಿಗೂ ಸೇರಿ ಆರಂಭದಲ್ಲೇ ಲುಕ್ ಔಟ್ ನೋಟೀಸ್ ನೀಡಲಾಗಿದೆ. ರೇವಣ್ಣ ಅವರು ವಿದೇಶಕ್ಕೆ ತೆರಳುವ ಅವಕಾಶವಿರಬಾರದು ಎಂಬ ಕಾರಣಕ್ಕೆ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟೀಸ್ ಜಾರಿ ಮಾಡಿದ್ದಾರೆ ಎಂದು ತಿಳಿಸಿದರು.
ಈಗಾಗಲೇ 2ನೇ ನೋಟಿಸ್ ಅನ್ನು ನೀಡಲಾಗಿದೆ. ಅದರ ಪ್ರಕಾರ ವಿಚಾರಣೆಗೆ ಹಾಜರಾಗಲು ಇಂದು ಸಂಜೆವರೆಗೂ ಕಾಲಾವಕಾಶವಿದ್ದು, ಆ ಬಳಿಕ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ನಡುವೆ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿಸಿದರು. ಇದೇ ಅಪಹರಣ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಸತೀಶ್ ಬಾಬು ಅವರ ಬಂಧನವಾಗಿದೆ. ಸಾಮಾನ್ಯವಾಗಿ ಪೊಲೀಸರು ಇಂತಹ ಪ್ರಕ್ರಿಯೆಗಳನ್ನು ನಿರಂತರವಾಗಿ ಚಾಲ್ತಿಯಲ್ಲಿಟ್ಟಿರುತ್ತಾರೆ. ಬಂಧನ, ವಿಚಾರಣೆ ಎಲ್ಲವೂ ಸಾಮಾನ್ಯ. ಪ್ರತಿಯೊಂದನ್ನೂ ಸಾರ್ವಜನಿಕವಾಗಿ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ. ರೇವಣ್ಣ ಅವರಿಗೆ ಸಿಆರ್‌ಪಿಸಿ ಸೆಕ್ಷನ್ 47 ಎ ಅಡಿ ನೋಟೀಸ್ ನೀಡಲಾಗಿದೆ. ಅವರು ಖುದ್ದು ವಿಚಾರಣೆಗೆ ಹಾಜರಾಗಲೇಬೇಕು ಎಂದರು.
ಪ್ರಜ್ವಲ್ ರೇವಣ್ಣ ಸದ್ಯಕ್ಕೆ ಭಾರತಕ್ಕೆ ಮರಳುವ ಸಾಧ್ಯತೆಯಿಲ್ಲ ಎಂಬ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು ಇಂದಲ್ಲಾ ನಾಳೆ ಭಾರತಕ್ಕೆ ಮರಳಲೇಬೇಕು ಎಂದು ಹೇಳಿದರು.ಲೋಕಸಭಾ ಚುನಾವಣೆ ಮುಗಿದ ಬಳಿಕ ಪ್ರಕರಣವನ್ನು ಕಡೆಗಣಿಸಲಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಅವರ ಅಭಿಪ್ರಾಯ. ಪ್ರಕರಣದ ನಂತರ ಏನಾಗುತ್ತದೆ ಎಂಬುದನ್ನು ಕಾದು ನೋಡಲಿ. ಪ್ರಸ್ತುತ ನಡೆಯುತ್ತಿರುವ ಚರ್ಚೆಗಳನ್ನು ಮತದಾರರು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ನಡೆದಿದೆ ಎಂಬ ಕುರಿತ ಪ್ರಶ್ನೆಗೆ ಸಿಡಿಮಿಡಿಗೊಂಡ ಗೃಹಸಚಿವರು, ಲವ್ ಜಿಹಾದ್ ನಡೆದಿದೆ ಎಂದು ನಿಮಗೆ ಗೊತ್ತಿದೆಯೇ? ಸಾಕ್ಷಿ ಇದೆಯೇ? ಪ್ರಶ್ನೆಗಳನ್ನು ಕೇಳುವಾಗ ಸೂಕ್ಷ್ಮತೆ ಇರಬೇಕು ಎಂದು ಆಕ್ಷೇಪಿಸಿದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ರಾಹುಲ್‌ಗಾಂಧಿ ಗೆ ನೋಟೀಸ್ ನೀಡುವಂತೆ ಎಚ್.ಡಿ.ಕುಮಾರಸ್ವಾಮಿಯವರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಅವರನ್ನೇ ಕೇಳಿಯೇ ಎಲ್ಲಾ ಕೆಲಸ ಮಾಡೋಣ ಎಂದು ಟಾಂಗ್ ನೀಡಿದರು.