ಬೆಂಗಳೂರು,ಮೇ.4- ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಚದುರಿದಂತೆ ಮಳೆಯಾಗಿದ್ದರೆ ಕಲ್ಯಾಣ ಕರ್ನಾಟಕ ಕಿತ್ತೂರು ಕರ್ನಾಟಕದ ಭಾಗದಲ್ಲಿ ಬಿಸಿಲ ಬೇಗೆ ತೀವ್ರಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಕಳೆದ 2 ದಿನಗಳಿಂದ ಚದುರಿದಂತೆ ಮಳೆಯಾಗುತ್ತಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ನಾಲ್ಕೈದು ದಿನ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಮೇ 6 ಮತ್ತು 7 ರಂದು ಬೆಂಗಳೂರು ಸುತ್ತಮುತ್ತ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ನಿನ್ನೆ ಮಧ್ಯಾಹ್ನ ಹಾಗೂ ಸಂಜೆ ಹೊಸಕೋಟೆ 6, ಬೆಂಗಳೂರು 2, ಮೈಸೂರು 5, ಮಂಡ್ಯ 3, ಸರಗೂರು 3, ನಂಜನಗೂಡು, ಕುಶಾಲನಗರ, ಕಣ್ಣಾನೂರು ತಲಾ 1 ಮಿಲಿಮೀಟರ್‌ನಷ್ಟು ಅತ್ಯಲ್ಪ ಪ್ರಮಾಣದ ಮಳೆಯಾಗಿದೆ.
ಗುಡುಗು, ಸಿಡಿಲು, ಮಿಂಚಿನ ಆರ್ಭಟದೊಂದಿಗೆ ಕೆಲವೆಡೆ ಮಳೆಯಾಗಿದ್ದು, ಹಲವೆಡೆ ಬಾಳೆ ಬೆಳೆಗೆ ಹಾನಿಯಾಗಿದೆ. ಕೆಲವೆಡೆ ಮರಗಳು ಮುರಿದುಬಿದ್ದ ವರದಿಯಾಗಿದೆ. ಭರಣಿ ಮಳೆ ಬಿದ್ದಿದ್ದರಿಂದ ರೈತರು ಸಂತುಷ್ಟಗೊಂಡಿದ್ದಾರೆ. ಆದರೆ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗದೆ ಒಣಹವೆ ಮುಂದುವರೆದಿದೆ.
44 ಡಿ.ಸೆಂ. ತಲುಪಿದ ಗರಿಷ್ಠ ತಾಪಮಾನ :
ರಾಯಚೂರು, ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 44 ಡಿ.ಸೆಂ. ದಾಟಿದೆ. ಕಲ್ಯಾಣ ಕರ್ನಾಟಕ ಅಕ್ಷರಶಃ ಬಿಸಿಲ ನಾಡಾಗಿ ಕಂಡುಬರುತ್ತಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಂ. ಗಿಂತ ಹೆಚ್ಚಾಗಿದೆ.
ಬೀದರ್ 41, ವಿಜಯಪುರ 41.5, ಬಾಗಲಕೋಟೆ 41.7, ಧಾರವಾಡ 39.8, ಗದಗ 40.6, ಕೊಪ್ಪಳ 43.5 ಸೆಂ.ನಷ್ಟು ದಾಖಲಾಗಿದೆ.ಬೆಂಗಳೂರು 37, ಚಾಮರಾಜನಗರ 37.7, ಚಿತ್ರದುರ್ಗ ಹಾಗೂ ದಾವಣಗೆರೆ 38.8, ಹಾಸನ 37, ಮಂಡ್ಯ 38.6, ಮೈಸೂರು 38.2, ಶಿವಮೊಗ್ಗ 38.6, ಹಾವೇರಿ 37.6, ಬೆಳಗಾವಿ ನಗರ 37.5 ಡಿ.ಸೆಂ.ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ.