ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ

Social Share

ಬೆಂಗಳೂರು, ಅ.15- ರಾಜ್ಯದಲ್ಲಿ ವರುಣ ಮತ್ತೆ ಆರ್ಭಟಿಸುತ್ತಿದ್ದು, ವಿವಿಧೆಡೆ ಭಾರೀ ಅನಾಹುತಗಳನ್ನೇ ಸೃಷ್ಟಿಸಿದೆ.
ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ದಾವಣಗೆರೆ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ಕೆರೆಗಳು ಎರಡು ಹಾಗೂ ಮೂರನೆ ಬಾರಿ ಕೋಡಿ ಹರಿಯುತ್ತಿವೆ.

ಮಂಡ್ಯ: ಮಳವಳ್ಳಿ ತಾಲೂಕಿನ ಮಾರ್ಕಾಲು ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ಕೈಗೆ ಬಂದ ಬೆಳೆ ನಾಶವಾಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಮಾರ್ಕಾಲು, ಆಲದಹಳ್ಳಿ, ಮಿಕ್ಕೆರೆ, ಇಟ್ಟನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡು ಕೆಲವು ಕಡೆ ರಸ್ತೆಗಳೇ ಕೊಚ್ಚಿ ಹೋಗಿದ್ದರಿಂದ ಸಂಪರ್ಕ ಕಡಿತವಾಗಿದೆ.

ಶಾಸಕ ಅನ್ನದಾನಿ, ತಹಸೀಲ್ದಾರ್ ವಿಜಯಣ್ಣ, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಸುತ್ತಮುತ್ತ ವರುಣನ ಆರ್ಭಟ ಜೋರಾಗಿದ್ದು, ಕೆರೆ-ಕೊಡಿ ಒಡೆದು ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ. ಅಲ್ಲದೆ, ಕೆರೆ ಒಡೆದು ಗ್ರಾಮಗಳಿಗೆ ನೀರು ನುಗ್ಗಿ ಗ್ರಾಮಗಳು ಜಲಾವೃತವಾಗಿವೆ. ಮನೆಗಳಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿ ನಷ್ಟ ಉಂಟುಮಾಡಿದೆ.

ತಾಲೂಕಿನ ಯಲಾದಹಳ್ಳಿ ಗ್ರಾಮದಲ್ಲಿ 40 ವರ್ಷಗಳ ಬಳಿಕ ಕೆರೆಕೋಡಿ ಒಡೆದು ಸುಮಾರು 50 ಎಕರೆ ಜಮೀನಿನಲ್ಲಿ ಭತ್ತ ಹಾಗೂ ಕಟಾವಿಗೆ ಬಂದ ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿ ರೈತರಿಗೆ ನಷ್ಟ ಉಂಟಾಗಿದ್ದು, ರೈತರನ್ನು ಕಂಗಾಲಾಗಿ ಮಾಡಿದೆ.

ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಕೆರೆ ಕೋಡಿ ಒಡೆದು ಗ್ರಾಮದ ಮನೆಗಳಿಗೆ ನೀರು ತುಂಬಿ ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿದೆ. ಮನೆಗಳಲ್ಲಿ ನೀರು ತುಂಬಿ ಮನೆಗಳಲ್ಲಿದ್ದ ಅಪಾರ ಪ್ರಮಾಣದ ಆಹಾರ ಪದಾರ್ಥಗಳು ಹಾನಿಯಾಗಿವೆ.

ತುಮಕೂರು: ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುರುವೇಕೆರೆ, ಪಾವಗಡ, ಶಿರಾ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿತ್ತು. ಎಂಎಚ್ ಪಟ್ಟಣದ ಬಳಿ ಅಡಿಕೆ ತೋಟಗಳು ಜಲಾವೃತಗೊಂಡಿದ್ದವು. ಇಂದು ಬೆಳ್ಳಂಬೆಳಗ್ಗೆ ಕೊರಟಗೆರೆ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯವ್ಯಸ್ತವಾಗಿತ್ತು.

ಹೆದ್ದಾರಿ ಸಂಚಾರ ಸ್ಥಗಿತ: ಬೆಣ್ಣೆನಗರಿ ದಾವಣಗೆರೆಯಲ್ಲೂ ಸಹ ಮಳೆ ಜೋರಾಗಿದ್ದು, ತಾಲೂಕಿನ ಅಣಚಿಕೆರೆ ಕೋಡಿ ಹರಿಯುತ್ತಿದ್ದು, ರಾಜ್ಯ ಹೆದ್ದಾರಿ ಸಂಚಾರ ನಿಷೇಧಿಸಲಾಗಿದೆ. ಅಣಚಿ ಮಾರ್ಗವಾಗಿ ಜಗಳೂರಿಗೆ ತೆರಳುವ ಮಾರ್ಗವನ್ನು ನಿಷೇಧಿಸಲಾಗಿದೆ. ನಿರಂತರ ಮಳೆಗೆ 75 ವರ್ಷದ ಬಳಿಕ ತಾಲೂಕಿನ ಆಲೂರು ಗ್ರಾಮದ ಪುರಾತನ ಹಿರೇಬಾವಿ ತುಂಬಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

ಬಾಗಲಕೋಟೆ: ಜಿಲ್ಲೆಯ ಬಿಳಗಿ ಪಟ್ಟಣದ ಕಾಟಕರ ಓಣಿ, ದೇಸಾಯಿ ಗಲ್ಲಿಯಲ್ಲಿ 10 ಮನೆಗಳು ಕುಸಿದು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜಾಲಹಳ್ಳಿ ಇಡಗೂರು ಗ್ರಾಮದ ಹಳ್ಳವನ್ನು ಬೈಕ್‍ನಲ್ಲಿ ದಾಟುತ್ತಿದ್ದಾಗ ಸವಾರರು ಕೊಚ್ಚಿ ಹೋಗಿದ್ದು, ಸ್ಥಳೀಯರು ರಕ್ಷಿಸಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನೂ ನಾಲ್ಕು ದಿನ ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Articles You Might Like

Share This Article