ಬೆಂಗಳೂರು,ಏ.20- ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲಿ ತಮ್ಮ ಹೇಳಿಕೆಯಿಂದ ಪೋಷಕರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಕ್ಷಮೆ ಯಾಚಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಎಬಿವಿಪಿಯವರಿಗೆ ಸತ್ಯಾಸತ್ಯತೆ ಗೊತ್ತಿಲ್ಲ. ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ತಾವು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೇವೆ, ಬೇಜವಾಬ್ದಾರಿಯಿಂದ ಹೇಳಿಕೆ ನೀಡಿಲ್ಲ. ನಮಗೆ ಬಂದ ವರದಿಯನ್ನು ತಿಳಿಸಿದ್ದೇನೆ. ಪ್ರಕರಣದ ಬಗ್ಗೆ ತನಿಖೆಯಾಗಲಿದೆ. ಆ ವೇಳೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು. ನನ್ನ ಹೇಳಿಕೆಯಿಂದ ತಂದೆ-ತಾಯಿಯವರಿಗೆ, ಕುಟುಂಬದ ಸದಸ್ಯರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ತನಿಖೆಯ ನಂತರ ಸತ್ಯಾಂಶ ತಿಳಿದುಬರಲಿದೆ ಎಂದು ಹೇಳಿದರು.
ಈ ಹಿಂದೆ ಮತದಾನದ ವೇಳೆ ಏನೆಲ್ಲಾ ನಡೆಯುತ್ತಿತ್ತು ಎಂಬುದನ್ನು ನಾನು ವಿಶ್ಲೇಷಣೆ ಮಾಡಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನೇ ನಿಂತು ಚುನಾವಣಾ ಅಕ್ರಮ ಮಾಡಿಸಿದ್ದೇನೆ ಎಂದರ್ಥವಲ್ಲ. ಇದರ ಹಿಂದೆ ಮತಪೆಟ್ಟಿಗೆಗಳು ಅಪಹರಣವಾಗುತ್ತಿದ್ದವು. ಬೇರೆ ಬೇರೆ ಕ್ರಮಗಳು ನಡೆಯುತ್ತಿದ್ದವು. ಆ ಕಾರಣಕ್ಕಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳು ಜಾರಿಗೆ ಬಂದವು ಎಂದು ಹೇಳಿದ್ದೇನೆ. ಈಗ ಮತಯಂತ್ರಗಳಲ್ಲೂ ಲೋಪಗಳಾಗುತ್ತಿವೆ.
ಮೊನ್ನೆ ಕಾಸರಗೋಡಿನಲ್ಲಿ ಮಾಕ್‍ಡ್ರಿಲ್ ಮಾಡಿದಾಗ ಯಾವುದೇ ಬಟನ್ ಒತ್ತಿದರೂ ಮತಗಳು ಬಿಜೆಪಿಗೆ ಮತ ಬೀಳುತ್ತಿತ್ತು ಎಂಬುದು ಗೊತ್ತಾಗಿದೆ. ಇದನ್ನು ಸರಿಮಾಡಿಕೊಳ್ಳಬೇಕೆಂದು ನಾನು ಹೇಳಿದ್ದೇನೆ. ಆದರೆ ಚುನಾವಣಾ ಸಂದರ್ಭದಲ್ಲಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದರು.
ಚುನಾವಣಾ ಕರ್ತವ್ಯಕ್ಕೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದರಿಂದಾಗಿ ಬೆಂಗಳೂರಿನಲ್ಲಿ ರೌಡಿ ಚಟುವಟಿಕೆಗಳು ಹೆಚ್ಚಾಗಿವೆ ಎಂಬುದು ಸರಿಯಲ್ಲ. ಒಂದೆಡೆ ಚುನಾವಣಾ ಕರ್ತವ್ಯವೂ ನಡೆಯಬೇಕು, ಮತ್ತೊಂದೆಡೆ ಕಾನೂನು ಸುವ್ಯವಸ್ಥೆಯೂ ಪಾಲನೆಯಾಗಬೇಕು. ಸಿಬ್ಬಂದಿಯ ಲಭ್ಯತೆಯನ್ನು ನೋಡಿಕೊಂಡು ಪರಸ್ಪರ ರಾಜ್ಯಗಳ ನಡುವೆ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಎರಡನೇ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ಬರುತ್ತಿದ್ದಾರೆ. ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ನಾವು ಹಲವು ಪ್ರಶ್ನೆಗಳನ್ನು ಕೇಳಿದ್ದೇವೆ. ಈ ಹಿಂದೆ ನೆರೆ, ಪ್ರಸಕ್ತ ಬರ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಿಲ್ಲ. ಬರ ಅಧ್ಯಯನಕ್ಕಾಗಿ ಕೇಂದ್ರದ ಅಧ್ಯಯನ ತಂಡ ಶಿಫಾರಸ್ಸು ಮಾಡಿದ್ದ ನೆರವನ್ನು ಕೊಟ್ಟಿಲ್ಲ.
ರಾಜ್ಯಕ್ಕೆ ಹೊಸದಾಗಿ ಯಾವುದೇ ಹೊಸ ಯೋಜನೆಗಳನ್ನು ಕೊಟ್ಟಿಲ್ಲ. ತೆರಿಗೆ ಪಾಲಿನಲ್ಲೂ ನ್ಯಾಯಯುತ ಪಾಲು ಕೊಟ್ಟಿಲ್ಲ. ಭದ್ರಾ ಮೇಲ್ದಂಡೆಗೆ ಭರವಸೆ ನೀಡಿದಷ್ಟು ಹಣವನ್ನೂ ಬಿಡುಗಡೆ ಮಾಡಿಲ್ಲ. 26 ಮಂದಿ ಬಿಜೆಪಿಯ ಸಂಸದರಿದ್ದರು. ರಾಜ್ಯಕ್ಕೆ ಯಾವುದೇ ನೆರವು ದೊರೆಯದೇ ಇರುವ ಬಗ್ಗೆ ಪ್ರಧಾನಿಯವರು ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದರು.