Thursday, September 19, 2024
Homeರಾಜ್ಯನಾನು ಯಾವುದೇ ತಪ್ಪು ಮಾಡಿಲ್ಲ, ಕಾನೂನು ಸಮರದಲ್ಲಿ ನ್ಯಾಯ ಸಿಗುತ್ತೆ : ಸಿಎಂ

ನಾನು ಯಾವುದೇ ತಪ್ಪು ಮಾಡಿಲ್ಲ, ಕಾನೂನು ಸಮರದಲ್ಲಿ ನ್ಯಾಯ ಸಿಗುತ್ತೆ : ಸಿಎಂ

ಬೆಂಗಳೂರು,ಆ.19– ಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಸಮರದಲ್ಲಿ ನ್ಯಾಯ ಸಿಗುವ ಉದ್ದೇಶವಿದೆ ಎಂದರು.

ಚಿತ್ರಕಲಾ ಪರಿಷತ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಜನರಿಗೆ ಗೊತ್ತಿದೆ. ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ-ಜೆಡಿಎಸ್‌‍ನವರು ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಪ್ರಜ್ಞೆ ಸ್ಪಷ್ಟವಾಗಿದೆ. 1984 ರಿಂದ ಈವರೆಗೆ 40 ವರ್ಷಗಳಲ್ಲಿ ಸಚಿವನಾಗಿ, ಉಪಮುಖ್ಯಮಂತ್ರಿ ಯಾಗಿ, ಮುಖ್ಯಮಂತ್ರಿಯಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಜನರ ಸೇವೆ ಮಾಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು.

ರಾಜಕೀಯ ಹೋರಾಟ ಮಾಡುವಾಗ ನನಗೆ ಇನ್ನೂ ಹೆಚ್ಚು ಉತ್ಸಾಹ ಬರುತ್ತದೆ. ಹೀಗಾಗಿ ಮಾನಸಿಕವಾಗಿ ಹಾಗೂ ನೈತಿಕವಾಗಿ ಕುಗ್ಗಿಲ್ಲ ಎಂದರು.ಮೊದಲಿನಿಂದಲೂ ಈ ರೀತಿಯ ರಾಜಕೀಯ ಸಂಘರ್ಷಗಳನ್ನು ಎದುರಿಸಿ ಅಭ್ಯಾಸವಿದೆ. ಹೋರಾಟ ಮಾಡುವಾಗ ಹೆಚ್ಚು ಜೋಶ್‌ ಬರುತ್ತದೆ. ಭೂತ, ಭವಿಷ್ಯ ಹಾಗೂ ವರ್ತಮಾನ ಎಲ್ಲಾ ಕಾಲದಲ್ಲೂ ರಾಜಕೀಯ ಹೋರಾಟ ಗಳನ್ನು ಮುಂದುವರೆಸಿ ದ್ದೇನೆ ಎಂದರು.

ತಾವು ಬಡವರ ಪರವಾಗಿರು ವುದರಿಂದ ವಿರೋಧಪಕ್ಷ ಗಳಿಗೆ ತಮನ್ನುಕಂಡರೆ ಭಯ. ಅದಕ್ಕಾಗಿ ನನ್ನನ್ನು ರಾಜಕೀಯವಾಗಿ ಮುಗಿಸಿದರೆ ಇಡೀ ಕಾಂಗ್ರೆಸ್‌‍ ಪಕ್ಷವನ್ನು ರಾಜಕೀಯವಾಗಿ ಮುಗಿಸಬಹುದು ಎಂಬ ಭ್ರಮೆ ವಿರೋಧಪಕ್ಷಗಳಲ್ಲಿವೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್‌‍ನವರು ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ರಾಜಕೀಯವಾಗಿ ಉತ್ತರ ನೀಡುತ್ತೇವೆ. ಜೊತೆಗೆ ಕಾನೂನು ಸಮರವನ್ನು ಮುಂದುವರೆಸುತ್ತೇವೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಬಂದಿದ್ದರು. ಅವರೊಂದಿಗೆ ಚರ್ಚೆ ಮಾಡುವ ವೇಳೆ ದೆಹಲಿಗೆ ಬರುತ್ತೇನೆ ಎಂದು ಹೇಳಿದ್ದೇನೆ. ಹೀಗಾಗಿ ಇದೇ 23 ರಂದು ದೆಹಲಿಗೆ ತೆರಳುವ ಸಾಧ್ಯತೆಯಿದೆ.ಗುರುವಾರ ಕಾಂಗ್ರೆಸ್‌‍ ಶಾಸಕಾಂಗ ಸಭೆ ಕರೆದಿದ್ದೇವೆ. ಅಲ್ಲಿನ ವಿಚಾರಗಳ ಚರ್ಚೆಯ ಬಗ್ಗೆ ಸದ್ಯಕ್ಕೆ ಮಾಹಿತಿ ನೀಡುವುದಿಲ್ಲ ಎಂದು ಹೇಳಿದರು.

ರಾಜ್ಯಪಾಲರು ಅಭಿಯೋಜನೆಗೆ ಪೂರ್ವಾನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್‌ ಪಿಟೀಶನ್‌ ಸಲ್ಲಿಸಲಾಗಿದೆ. ಅಲ್ಲಿ ರಾಜ್ಯಪಾಲರ ಆದೇಶವನ್ನು ರದ್ದುಗೊಳಿಸಬೇಕು ಹಾಗೂ ಮಧ್ಯಂತರ ತೀರ್ಪು ನೀಡಬೇಕು ಎಂದು ಮನವಿ ಮಾಡಲಾಗಿದೆ.ತಮ ಪರವಾಗಿ ವಾದಿಸಲು ಅಭಿಷೇಕ್‌ ಸಿಂಗ್‌ ಮನ್ವಿ ಹೊರಟಿದ್ದಾರೆ. ನ್ಯಾಯಾಲಯದಿಂದ ಪರಿಹಾರ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದರು.

RELATED ARTICLES

Latest News