ದುಬೈ,ಮಾ.10- ಇನ್ನು ಆಟ ಬಾಕಿ ಇದ್ದು, ನಾನು ನಿವೃತಿ ಹೊಂದುತ್ತಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ. ಇಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಅಮೋಘ ಸಂಘಟಿತ ಆಟದಿಂದ ಗೆದ್ದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರೆಯಲಿದ್ದೇನೆ ಎಂದು ನಿವೃತ್ತಿ ಬಗ್ಗೆ ಹರಿದಾಡುತ್ತಿರುವ ಎಲ್ಲಾ ವದಂತಿಗೆ ತೆರೆ ಎಳೆದಿದ್ದಾರೆ.
ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಹೊಂದುತ್ತಿಲ್ಲ. ದಯವಿಟ್ಟು ಇಂತಹ ವದಂತಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಭವಿಷ್ಯದ ಬಗ್ಗೆ ಯಾವುದೇ ಯೋಜನೆಗಳಿಲ್ಲ, ಏನು ಆಗುತ್ತಿದೆಯೋ ಅದು ಮುಂದುವರಿಯುತ್ತದೆ ಎಂದಿದ್ದಾರೆ.
ಸದ್ಯ ನಿವೃತ್ತಿ ನೀಡುತ್ತಿಲ್ಲ ಎಂದಿರುವ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಪ್ರಶ್ನೆ ಎದ್ದಿದೆ ಏಕೆಂದರೆ ಮುಂದಿನ ಎರಡು ವರ್ಷಗಳಲ್ಲಿ ಅವರ ವಯಸ್ಸು 39 ಆಗಿರಲಿದೆ. ಅತ್ತ ಏಕದಿನ ವಿಶ್ವಕಪ್ ಗೆಲ್ಲದಿರುವ ಕೊರಗು ಹೊಂದಿರುವ ಹಿಟ್‌ಮ್ಯಾನ್ ಅವರ ಮುಂದಿನ ಟಾರ್ಗೆಟ್ ಕೂಡ 50 ಓವರ್‌ಗಳ ವಿಶ್ವಕಪ್ ಎಂದು ಈಗ ಮಾತುಗಳು ಕೇಳಿಬರುತ್ತಿದೆ.
ಹೀಗಾಗಿ ಪ್ರಸ್ತುತ ಒಳ್ಳೆಯ ಆಟವನ್ನು ಮುಂದಿನ ಎರಡು ವರ್ಷಗಳ ಕಾಲ ಮುಂದುವರೆಸಿ ಏಕದಿನ ವಿಶ್ವಕಪ್‌ನೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳಲು ಪ್ಲಾನ್ ರೂಪಿಸಿದ್ದಾರೆ. ನಮ್ಮ ತಂಡ ಇಡೀ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದೆ. ಆದರೆ ಕ್ಷೇತ್ರ ರಕ್ಷಣೆಯಲ್ಲಿ ಮತ್ತಷ್ಟು ಸುಧಾರಿಸಬೇಕಿದೆ ಯುವ ಅನುಭವಿ ಆಟಗಾರರು ಭವಿಷ್ಯ ಉತ್ತಮವಾಗಿದೆ ಎಂದರು.