ಬೆಂಗಳೂರು, ಏ.2- ಅನುದಾನ ಮುಖ್ಯವಲ್ಲ, ಆದರೆ ಅನುಷ್ಠಾನ ಮುಖ್ಯ. ಅದಕ್ಕಾಗಿಯೇ ನಮ್ಮ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಗಳಿಂದ ಇಂದು ಉಜ್ವಲ ಭಾರತದ ಗುರಿಯನ್ನು ಹೊಂದಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ನಾನು ಹೃದ್ರೋಗ ಚಿಕಿತ್ಸಾ ವೈದ್ಯನಾಗಿ ಹೇಳುವುದಾದರೆ, ಆರೋಗ್ಯ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಆಗಿರುವ ಬದಲಾವಣೆ ಅಪ್ರತಿಮವಾಗಿದೆ. ಈ ಹಿಂದೆ ರಕ್ತನಾಳದಲ್ಲಿ ಸಮಸ್ಯೆ ಕಂಡುಬಂದಾಗ ನಾವು ಸ್ಟೆಂಟ್‍ಗಳನ್ನು ಅಳವಡಿಸುತ್ತಿದ್ದೆವು. ಆಗ ಅದು ಒಂದು ಲಕ್ಷ ರೂ.ನಿಂದ 70 ಸಾವಿರದವರೆಗೆ ಇತ್ತು. ಆದರೆ, ಇಂದು 20 ರಿಂದ 25 ಸಾವಿರ ರೂ.ಗಳಿಗೆ ದೊರೆಯುತ್ತದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಗಳೇ ಕಾರಣ ಎಂದು ಹೇಳಿದರು.
ಕೇವಲ ಆರೋಗ್ಯ, ಸ್ವಚ್ಛ ಭಾರತ, ಉಜ್ವಲ ಯೋಜನೆ, ಕಿಸಾನ್ ಸಮೃದ್ಧಿ ಯೋಜನೆ ಸೇರಿದಂತೆ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಜನರ ಬದುಕಿನಲ್ಲಿ ಹೊಸ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.
ರಕ್ಷಣಾ ವಲಯದಲ್ಲೂ ಶೇ.49ರಷ್ಟು ಹೂಡಿಕೆಗೆ ಮುಕ್ತ ಅವಕಾಶ ನೀಡಿರುವುದರಿಂದ ಸ್ವಾವಲಂಬಿ ಭಾರತಕ್ಕೆ ದೊಡ್ಡ ಆಯಾಮ ಸಿಕ್ಕಿದೆ. ಹಿಂದೆ ನಾವು ಶಸ್ತ್ರಾಸ್ತ್ರಗಳಿಗಾಗಿ ವಿದೇಶಗಳನ್ನು ಅವಲಂಬಿಸುತ್ತಿದ್ದೆವು. ಆದರೆ, ಈಗ ನಾವು ನಮ್ಮಲ್ಲಿ ಉತ್ಪಾದಿಸಿದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳು ನೇರವಾಗಿ ಸಾಮಾನ್ಯರಿಗೆ ಮುಟ್ಟಿವೆ. ಇದನ್ನು ಜನರಿಗೆ ತಿಳಿಸಿ ಮತ ಕೇಳೋಣ ಎಂದು ನುಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿ 400ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದಾರೆ. ಅದರಲ್ಲಿ ನಮ್ಮ ಬೆಂಗಳೂರು ದಕ್ಷಿಣ, ಕೇಂದ್ರ, ಉತ್ತರ, ಚಿಕ್ಕಬಳ್ಳಾಪುರ ಅಭ್ಯರ್ಥಿಗಳು ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ನಾನು ಕೂಡ ಗೆದ್ದು ಆ ಪಟ್ಟಿಯಲ್ಲಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಯಾವಾಗಲೂ ಚಿಕಿತ್ಸೆ ಮೊದಲು, ಹಣ ಪಾವತಿ ನಂತರ ಎನ್ನುತ್ತಿದ್ದೆ. ಆದರೆ, ಈಗ ಸಾರ್ವತ್ರಿಕ ಜೀವನ ಆರಂಭಿಸಿದ್ದೇನೆ. ಮತ ಮೊದಲು, ಸೇವೆ ನಿರಂತರ ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡಿದ್ದೇನೆ. ಇದೇ ವೇಳೆ ನಾವು ಹೆಚ್ಚು ಟೀಕೆಗಳನ್ನು ಮಾಡದೆ ನಮ್ಮ ಸಾಧನೆಗಳನ್ನು ಜನರಿಗೆ ತಿಳಿಸೋಣ. ಏಕೆಂದರೆ, ಟೀಕೆಗಳು ಸಾಯುತ್ತವೆ, ಆದರೆ ಸಾಧನೆ ಜೀವಂತವಾಗಿರುತ್ತದೆ ಎಂದು ಡಾ.ಮಂಜುನಾಥ್ ಹೇಳಿದರು.