Sunday, September 8, 2024
Homeರಾಜ್ಯಜು.1 ರಿಂದ ನೂತನ ಕಾನೂನುಗಳ ಅನುಷ್ಠಾನ : ಬಿ.ದಯಾನಂದ

ಜು.1 ರಿಂದ ನೂತನ ಕಾನೂನುಗಳ ಅನುಷ್ಠಾನ : ಬಿ.ದಯಾನಂದ

ಬೆಂಗಳೂರು,ಮೇ 17- ಐಪಿಸಿ, ಸಿಆರ್‌ಪಿಸಿ ಸೇರಿದಂತೆ ದೇಶದ ಕಾನೂನುಗಳು ಬದಲಾವಣೆಯಾಗಿದ್ದು, ಜುಲೈ 1 ರಿಂದ ಜಾರಿಯಾಗಲಿರುವ ನೂತನ ಕಾನೂನುಗಳ ಅನುಷ್ಠಾನಕ್ಕೆ ನಗರದ ಎಲ್ಲಾ ಪೊಲೀಸ್‌‍ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಿದ್ಧರಾಗಬೇಕೆಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ನಗರದ ಆಡುಗೋಡಿಯಲ್ಲಿನ ಸಿಎಆರ್‌ ಸೌತ್‌ ಕವಾಯತು ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಮಾಸಿಕ ಕವಾಯತಿನಲ್ಲಿ ವಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವದಿಂದಲೂ ಜಾರಿಯಲ್ಲಿದ್ದ ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆ ಬದಲಾಗಿ ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಸಂಹಿತೆಯನ್ನು ರಚಿಸಿದ್ದು, ಅವು ಕಾನೂನಿನ ಸ್ವರೂಪ ಪಡೆದುಕೊಂಡು ಜು.1 ರಿಂದ ಅನುಷ್ಠಾನಗೊಳ್ಳಲಿವೆ ಎಂದರು.

ಈ ನೂತನ ಕಾನೂನುಗಳ ಪರಿಕರಗಳಲ್ಲಿ ಹೊಸ ಸೆಕ್ಷನ್‌ಗಳೇನು? ಹೊಸ ಮತ್ತು ಹಳೆ ಸೆಕ್ಷನ್‌ಗಳಲ್ಲಿನ ಬದಲಾವಣೆ ಹಾಗೂ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಬೇಕು. ದೇಶದಲ್ಲಿ ಒಂದು ಬಾರಿ ಕಾನೂನು ಅನುಷ್ಠಾನವಾದ ಮೇಲೆ ಅದನ್ನು ಸಂಪೂರ್ಣವಾಗಿ ಪರಿಪಾಲನೆ ಮಾಡಬೇಕಾಗಿರುವುದು ನಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.

ಜುಲೈ 1 ರ ಪೂರ್ವವಾಗಿಯೇ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಬೆಂಗಳೂರು ನಗರದ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ಕೊಡಲಾಗಿದೆ. ಮುಂದಿನ 15 ದಿನಗಳಲ್ಲಿ ಮತ್ತಷ್ಟು ಜನರಿಗೆ ತರಬೇತಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಇದರಲ್ಲಿ ಮುಖ್ಯವಾಗಿ ಎಸಿಪಿ ಮಟ್ಟದ ಅಧಿಕಾರಿಗಳು ತಮ ಉಪವಿಭಾಗದ ಅಧೀನದಲ್ಲಿರುವ ಎಲ್ಲಾ ಪೊಲೀಸ್‌‍ ಠಾಣೆಗಳ ಮತ್ತು ಫೋಕಸ್‌‍ ಗ್ರೂಪ್‌ ಅಧಿಕಾರಿಗಳಿಗೆ, ಸಬ್‌ ಇನ್‌್ಸಪೆಕ್ಟರ್‌ಗಳಿಗೆ ಐಒ ಮತ್ತು ಐಒ ಅಸಿಸ್ಟೆಂಟ್‌ಗಳು ಮತ್ತು ಸ್ಟೇಷನ್‌ ರೈಟರ್‌ಗಳಾದ ನಾಲ್ಕು ಅಥವಾ ಐದು ಸಿಬ್ಬಂದಿಗಳಿಗೆ ಅರಿವು ಮೂಡಿಸಬೇಕಾಗುತ್ತದೆ ಎಂದರು.

ಅಭಿಯೋಜನಾ ಅಧಿಕಾರಿಗಳು, ನ್ಯಾಯಾಲಯದ ಅಧಿಕಾರಿಗಳು ಅಥವಾ ಸ್ಥಳೀಯವಾಗಿರುವ ಕಾನೂನು ಕಾಲೇಜುಗಳ ನೆರವು ಪಡೆದು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇದರ ಜೊತೆಗೆ ಸೆಲ್‌್ಫ ಲರ್ನಿಂಗ್‌ ಮೂಲಕ ಈ ಕಾನೂನುಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಇದು ಈಗಾಗಲೇ ಸಾರ್ವಜನಿಕವಾಗಿ ಮಾಹಿತಿ ಇದ್ದು, ಯುಟ್ಯೂಬ್‌ ಮತ್ತು ಇತರೆ ಆ್ಯಪ್‌ಗಳಲ್ಲೂ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಜೊತೆಗೆ ಕರ್ನಾಟಕ ಪೊಲೀಸ್‌‍ ಅಕಾಡೆಮಿ ಕೂಡ ಇದರ ಬಗ್ಗೆ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಿದ್ದು, ಇದು ಎಲ್ಲಾ ಪೊಲೀಸ್‌‍ ಠಾಣೆಗಳಿಗೆ ನೀಡಲಾಗಿದೆ. ಅವುಗಳನ್ನು ಓದಿ ಅರ್ಥೈಸಿಕೊಳ್ಳಿ. ಏನಾದರೂ ಸಂಶಯಗಳಿದ್ದರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು.

ಜು.1 ರಿಂದ ಸಾರ್ವಜನಿಕರು ಪೊಲೀಸ್‌‍ ಠಾಣೆಗೆ ಬಂದು ದೂರು ನೀಡಿದರೆ, ನೂತನ ಕಾನೂನು ಮೂಲಕ ಪ್ರಕರಣ ದಾಖಲಿಸಬೇಕಾಗುತ್ತದೆ. ಯಾವ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂಬುದರ ಸಮಗ್ರ ಮಾಹಿತಿ ಜು.1 ರೊಳಗಾಗಿ ಯಾವುದೇ ಸಂಶಯವಿಲ್ಲದೆ ಎಲ್ಲಾ ಪೊಲೀಸ್‌‍ ಅಧಿಕಾರಿಗಳು ತಿಳಿದುಕೊಂಡಿರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರಿಗೆ ಇದರಿಂದ ಯಾವುದೇ ಅನಾನಕೂಲ ಅಥವಾ ತೊಂದರೆಯಾಗದಂತೆ ಎಫ್‌ಐಆರ್‌ ದಾಖಲಿಸಬೇಕು. ಈ ಸಂಬಂಧ ನ್ಯಾಯಾಲಯಗಳಲ್ಲಿ ಇಲಾಖೆಗೆ ಯಾವುದೇ ಮುಜುಗರ ಉಂಟುಮಾಡದಂತೆ ಎಸಿಪಿ ಮಟ್ಟದ ಅಧಿಕಾರಿಗಳು ಗಮನ ವಹಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ನ್ಯೂಡಲ್‌ ಅಧಿಕಾರಿಗಳು, ಡಿಸಿಪಿ, ಎಸಿಪಿ ಅಧಿಕಾರಿಗಳ ಉತ್ತಮ ಸಂಯೋಜನೆ ಕಾರಣವಾಗಿದೆ. ಈ ಎಲ್ಲಾ ಅಧಿಕಾರಿಗಳಿಗೆ ಆಯುಕ್ತರು ಅಭಿನಂದನೆ ಸಲ್ಲಿಸಿದರು.

RELATED ARTICLES

Latest News