ಬೆಂಗಳೂರು, ಅ.5- ಬಿಬಿಎಂಪಿ ವ್ಯಾಪ್ತಿಯಲ್ಲಿ ಆದಾಯ ಸಂಪನ್ಮೂಲ ಕ್ರೂಢೀಕರಣವನ್ನು ಹೆಚ್ಚಿಸುವ ಸಲುವಾಗಿ ತೆರಿಗೆ ಪದ್ಧತಿಯನ್ನು ಪರಿಷ್ಕರಣೆ ಮಾಡಲು ಚಿಂತನೆ ನಡೆದಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯ ತೆರಿಗೆ ಸಂಗ್ರಹ ನನಗೆ ತೃಪ್ತಿ ನೀಡಿಲ್ಲ. ಸಂಗ್ರಹವಾಗುತ್ತಿರುವುದು ಕೇವಲ 3 ಸಾವಿರ ಕೋಟಿ ರೂ.ಗಳು ಮಾತ್ರ. ಇಷ್ಟು ಹಣದಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಪದೇಪದೇ ಹಣ ನೀಡಲಾಗುವುದಿಲ್ಲ. ಅದಕ್ಕಾಗಿ ಪರಿಣಾಮಕಾರಿ ತೆರಿಗೆ ಸಂಗ್ರಹಕ್ಕೆ ಹೊಸ ಚಿಂತನೆ ನಡೆಸಲಾಗುತ್ತಿದೆ ಎಂದರು.
ಕೇಂದ್ರ, ರಾಜ್ಯ ಸರ್ಕಾರಗಳ ಕಟ್ಟಡಗಳು ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ವಸೂಲಿ ಮಾಡಲು ಸೂಚಿಸಲಾಗಿದೆ. ತಾವೇ ಖುದ್ದಾಗಿ ಎಲ್ಲಾ ಇಲಾಖೆಗಳಿಗೂ, ಸಂಸ್ಥೆಗಳಿಗೂ ಪತ್ರ ಬರೆದಿದ್ದೇನೆ. ಎಚ್‍ಎಎಎಲ್‍ನವರು 93 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಮೊದಲು ಸರ್ಕಾರದಿಂದ ಬಾಕಿ ಇರುವ ತೆರಿಗೆ ವಸೂಲಿ ಮಾಡಲಾಗುವುದು. ನಂತರ ಖಾಸಗಿ ಆಸ್ತಿಗಳ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಕ್ಕಿಂ ಮೇಘಸ್ಪೋಟ : 14 ಜನ ಸಾವು, 102 ಮಂದಿ ನಾಪತ್ತೆ
ಸ್ವಯಂ ಘೋಷಿತ ತೆರಿಗೆ ಪದ್ಧತಿಯಲ್ಲಿ ಜನ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿಲ್ಲ. ಪ್ಲಾನ್ ಅಪ್ರೂವಲ್ ಪಡೆದಿರುವ ನಿರ್ಮಾಣಕ್ಕೆ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಹೆಚ್ಚುವರಿ ನಿರ್ಮಾಣಗಳು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ವಾಣಿಜ್ಯ ಕಟ್ಟಡಗಳಲ್ಲೂ ಜನವಸತಿ ತೆರಿಗೆಯನ್ನೇ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಪ್ರತಿ ಮನೆಯ ತೆರಿಗೆಯನ್ನು ಪುನರ್ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಬ್ರಾಂಡ್ ಬೆಂಗಳೂರಿಗೆ ಸಂಬಂಧಪಟ್ಟಂತೆ 70 ಸಾವಿರ ಸಲಹೆಗಳು ಬಂದಿವೆ. ಅವುಗಳನ್ನು ಏಳೆಂಟು ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದ್ದು, ಸಲಹೆಗಳ ಮೇಲೆ ಕಾರ್ಯಾನುಷ್ಠಾನ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಇದೇ 9 ರಂದು ಈ ಕುರಿತು ಬೃಹತ್ ಕಾರ್ಯಾಗಾರ ನಡೆಸಲಾಗುವುದು. ಬಳಿಕ ವಿವಿಧ ಗುಂಪುಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಹೇಳಿದರು.
ಗುತ್ತಿಗೆದಾರರ ಬಿಲ್ ಪಾವತಿ :
ಅಮೃತ ನಗರ ಯೋಜನೆಯಡಿ ತಡೆಹಿಡಿಯಲಾಗಿದ್ದ ಯೋಜನೆಗಳನ್ನು ಮುಂದುವರೆಸಲು ಸೂಚಿಸಲಾಗಿದೆ. ಮಳೆನೀರು ಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಗುತ್ತಿಗೆದಾರರ ಬಾಕಿಯನ್ನು 2021 ರ ಸೆಪ್ಟೆಂಬರ್ ವೇಳೆಗೆ 432 ಕೋಟಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಪ್ರಕರಣಗಳ ತನಿಖೆಗಳು ಚಾಲ್ತಿಯಲ್ಲಿವೆ. ಅದರ ನಡುವೆ ಶೇ.50 ರಷ್ಟು ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಮೊದಲ ಹಂತದಲ್ಲಿ 675 ಕೋಟಿ ಒದಗಿಸಲಾಗಿದ್ದು, ಕೆಲವೇ ದಿನಗಳಲ್ಲಿ 750 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದರು.
ನಗರದಲ್ಲಿನ ರಸ್ತೆಗುಂಡಿಗಳನ್ನು ನವೆಂಬರ್ 31 ರೊಳಗೆ ಮುಚ್ಚಲು ಗುರಿ ಇಡಲಾಗಿದೆ. ಸಾರ್ವಜನಿಕರು ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಮಾಹಿತಿ ನೀಡಬಹುದು. 350 ಕಿ.ಮೀ. ಟೆಂಡರ್‍ಶೂರ್ ರಸ್ತೆ ನಿರ್ಮಿಸಲಾಗಿದೆ. ಅದರಲ್ಲಿ ಅಕ್ಕಪಕ್ಕ ಸುರಂಗಮಾರ್ಗಗಳನ್ನು ನಿರ್ಮಿಸಲಾಗಿದೆ. ಆ ಭಾಗದಲ್ಲಿ ಅಪ್ಟಿಕಲ್ ಕೇಬಲ್‍ಗಳು ಮೇಲ್ಭಾಗದಲ್ಲೇ ತೂಗಾಡುತ್ತಿರುವುದು ಸರಿಯಲ್ಲ. ಹೀಗಾಗಿ ಸುರಂಗಮಾರ್ಗದಲ್ಲೇ ಅವುಗಳನ್ನು ಅಳವಡಿಸಬೇಕು ಎಂದರು.
ಪ್ರಕೃತಿ ವಿಕೋಪ ನಿರ್ವಹಣೆಯಡಿ ವಿಶ್ವಬ್ಯಾಂಕ್‍ನಿಂದ 3 ಸಾವಿರ ಕೋಟಿ ರೂ.ಗಳ ಆರ್ಥಿಕ ನೆರವಿಗೆ ಮನವಿ ಸಲ್ಲಿಸಲಾಗಿತ್ತು. ಅದು ಅಂಗೀಕಾರಗೊಳ್ಳುತ್ತಿದೆ. ಇದರಿಂದ ಮಳೆನೀರು ಹಾಗೂ ಪ್ರವಾಹದ ಸಮಸ್ಯೆಗಳ ನಿವಾರಣೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಗೆ 250 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಕಾವೇರಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಮಧ್ಯಪ್ರವೇಶಿಸಬೇಕು : ಸಚಿವ ಚಲುವರಾಯಸ್ವಾಮಿ
ಕಾವೇರಿ ನೀರು ಬಿಡಲು ಸಾಧ್ಯವಿಲ್ಲ :
ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ಪ್ರಸ್ತುತ 56 ಟಿಎಂಸಿ ನೀರು ಮಾತ್ರ ಲಭ್ಯವಿದೆ. 106 ಟಿಎಂಸಿಯ ಅಗತ್ಯವಿದೆ. ಕಳೆದ ಎರಡು ದಿನಗಳಲ್ಲಿ ಮಳೆ ಸುರಿದಿದ್ದರಿಂದ ಒಳಹರಿವು ಸುಧಾರಣೆಯಾಗಿತ್ತು. ಅ.1 ರಂದು 13 ಸಾವಿರ, 2 ರಂದು 26 ಸಾವಿರ, 3 ರಂದು 20 ಸಾವಿರ, 4 ರಂದು 15 ಸಾವಿರ, ಇಂದು 10 ಸಾವಿರ ಕ್ಯೂಸೆಕ್ಸ್ ಒಳಹರಿವಿದೆ ಎಂದು ವಿವರಿಸಿದರು.
ರಾಜ್ಯಸರ್ಕಾರ ಪ್ರಸ್ತುತ ರೈತರ ಬೆಳೆಗಳನ್ನು ರಕ್ಷಣೆ ಮಾಡಿದ್ದೇವೆ. ರಾಜ್ಯದಲ್ಲಿ ಬರಗಾಲ ಷಣೆಯಾಗಿರುವುದರಿಂದ ಮುಂದೆ ಯಾವುದೇ ಬೆಳೆ ಬೆಳೆಯಬಾರದು. ಮಳೆ ಬಂದಾಗ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಬೇರೆ ಬೆಳೆಗಳಿಗೆ ಅವಕಾಶ ಇಲ್ಲ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮುಂದಿನ ತಿಂಗಳು ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಈ ವರ್ಷ ಸಂಕಷ್ಟದ ವರ್ಷ. ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಳೆದ ವರ್ಷ ಈ ವೇಳೆಗೆ ಒಳಹರಿವು ಹೆಚ್ಚಿತ್ತು. ಪ್ರತಿದಿನ ತಾವು ಮಳೆ ಬರಲಿ ಎಂದು ದೇವರಿಗೆ ಕೈಮುಗಿಯುತ್ತಿದ್ದೇನೆ. ಪ್ರತಿಭಟನೆ ಮಾಡುವವರು ಮಾಡಲಿ, ಅದನ್ನು ನಾವು ಅಡಗಿಸುವುದಿಲ್ಲ ಎಂದರು.