Thursday, December 7, 2023
Homeರಾಷ್ಟ್ರೀಯಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ

ಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ

ನವದೆಹಲಿ,ಅ.20- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದಾಗಲು ಮುಂದಾಗುತ್ತಿರುವ ಇಂಡಿಯ ಮೈತ್ರಿಕೂಟಕ್ಕೆ ಜೆಡಿಯು ಮತ್ತು ಎಸ್‍ಪಿ ಮರ್ಮಾಘಾತ ಕೊಟ್ಟಿದೆ. ಏಕೆಂದರೆ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹಾಗೂ ಉತ್ತರಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಖಿಲೇಶ್ ಯಾದವ್ ಅವರು ಇಂಡಿಯ ಮೈತ್ರಿಕೂಟದಲ್ಲಿ ಮುಂದುವರೆಯುವ ಬಗ್ಗೆ ಮರುಚಿಂತನೆ ನಡೆಸುವ ಸುಳಿವನ್ನು ಕೊಟ್ಟಿದ್ದಾರೆ.

ಈ ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ನೀಡಿರುವ ಹೇಳಿಕೆಯಿಂದಾಗಿ ಎನ್‍ಡಿಎ ಮೈತ್ರಿಕೂಟದ ವಿರುದ್ಧ ಪ್ರಬಲ ಹೋರಾಟಕ್ಕಿಳಿಯಲು ಮುಂದಾಗಿದ್ದ ಇಂಡಿಯಾ ಕೂಟಕ್ಕೆ ಭಾರೀ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ. ಮುಂದಿನ ತಿಂಗಳು ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತೀಸ್‍ಘಡ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಐದೂ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಇಂಡಿಯ ಕೂಟದ ಲೆಕ್ಕಾಚಾರ ತಪ್ಪಿರುವುದೇ ನಿತೀಶ್‍ಕುಮಾರ್ ಮತ್ತು ಅಖಿಲೇಶ್ ಯಾದವ್ ಮುನಿಸಿಗೆ ಕಾರಣ ಎನ್ನಲಾಗುತ್ತಿದೆ.

ನಿಜ್ಜರ್ ಹತ್ಯೆ ಹೇಳಿಕೆ ಮುನ್ನ ಭಾರತದೊಂದಿಗೆ ಚರ್ಚೆ ನಡೆಸಿದ್ದೇವೆ ; ಕೆನಡಾ

ಈ ಐದು ರಾಜ್ಯಗಳಿಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ತನ್ನ ಮಿತ್ರ ಪಕ್ಷಗಳನ್ನು ಸೌಜನ್ಯಕ್ಕಾದರೂ ಕೇಳದೆ ಏಕಪಕ್ಷೀಯವಾಗಿ ಟಿಕೆಟ್ ಘೋಷಣೆ ಮಾಡಿರುವುದು ಮೈತ್ರಿಕೂಟದ ಎರಡು ಪ್ರಬಲ ಪಕ್ಷಗಳಾದ ಜೆಡಿಯು ಮತ್ತು ಎಸ್‍ಪಿ ಕಣ್ಣು ಕೆಂಪಾಗುವಂತೆ ಮಾಡಿದೆ.

ಕಾಂಗ್ರೆಸ್ ಇತರೆ ಪಕ್ಷಗಳನ್ನು ಲಘವಾಗಿ ಪರಿಗಣಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಇದೇ ಮನೋಧರ್ಮವನ್ನು ಕಾಂಗ್ರೆಸ್ ಮುಂದುವರಿಸಿದರೆ ಮೈತ್ರಿಯಲ್ಲಿ ಮುಂದುವರಿಯುವ ಬಗ್ಗೆ ಮರು ಚಿಂತನೆ ನಡೆಸಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಸಮಾಜವಾದಿ ಪಕ್ಷದ ಬಗ್ಗೆ ಕಾಂಗ್ರೆಸ್ ತೆಗೆದಿರುವ ತಕರಾರಿಗೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕರ ಧೋರಣೆ ಐಎನ್‍ಡಿಐಎ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಎಂಬಂತಿದೆ. ಕಾಂಗ್ರೆಸ್ ಚಿಂತನೆ ಇದೇ ಆಗಿದ್ದರೆ ವಿಧಾನಸಭಾ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆಗಳ ಚುನಾವಣೆಯಲ್ಲಿ ಸ್ಥಾನ ಹಂಚಿಕೆಗೆ ಕಾಂಗ್ರೆಸ್ ನಿರಾಕರಿಸಿದರೆ 2024ರ ಲೋಕಸಭೆಗೆ ಸಮಾಜವಾದಿ ಪಕ್ಷ ಉತ್ತರಪ್ರದೇಶದ ಎಲ್ಲಾ 80 ಸ್ಥಾನಗಳಿಗೆ ಸ್ಪರ್ಧೆ ಮಾಡಲಿದೆಎಂದು ಅಖಿಲೇಶ್ ತಿಳಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯುಪಿಎ ಒಕ್ಕೂಟದ ಸರಕಾರಕ್ಕಿಂತ ಎನ್‍ಡಿಎ ಸರಕಾರವೇ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹೊಸ ರಾಜಕೀಯ ಸಮೀಕರಣದ ಸುಳಿವು ನೀಡಿದ್ದಾರೆ.

2014ರಲ್ಲಿ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬರುವವರೆಗೂ ಬಿಹಾರ ಸರಕಾರದ ಬೇಡಿಕೆಯನ್ನು ಹಿಂದೆಯಿದ್ದ ಯುಪಿಎ ಸರಕಾರ ಪರಿಗಣಿಸಿರಲಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಮೈತ್ರಿ ಸರಕಾರ 10 ವರ್ಷಗಳ ಕಾಲ ನಮ್ಮ ಪ್ರಸ್ತಾಪಕ್ಕೆ ಪೂರಕವಾಗಿ ಸ್ಪಂದಿಸಿರಲಿಲ್ಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಚುನಾವಣೆ : ಫೈನಲ್ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ನಿತೀಶ್ ಕುಮಾರ್ ಮತ್ತೆ ಎನ್‍ಡಿಎ ತೆಕ್ಕೆಗೆ ಮರಳಲಿದ್ದಾರೆ ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ರಾಜಕೀಯವೇ ಬೇರೆ ಸ್ನೇಹವೇ ಬೇರೆ, ಕೆಲಸ ಮಾಡಿದವರನ್ನು ಹೊಗಳುವುದರಲ್ಲಿ ತಪ್ಪಿಲ್ಲ. ಅದು ಮೋದಿಯಾದರೂ ಸರಿ ಬೇರೆ ಯಾರಾದರೂ ಸರಿ. ಉತ್ತಮ ಕೆಲಸ ಮಾಡಿದ ವ್ಯಕ್ತಿಗಳನ್ನು ನೆನೆಯಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ನಾವು ಒಂದು ಕಡೆ ಇದ್ದೇವೆ, ನೀವು ಮತ್ತೊಂದು ಕಡೆ ಇದ್ದೀರಿ. ಆದರೆ ಬದುಕಿರುವವರೆಗೂ ನಮ್ಮ ವೈಯಕ್ತಿಕ ಸ್ನೇಹ ಮುಂದುವರಿಯಲಿ ಎಂದು ಬಿಜೆಪಿ ನಾಯಕರ ಜತೆಗಿನ ಗೆಳೆತನ ಮುರಿಯಲಾರದು ಎಂದು ಹೇಳಿದ್ದಾರೆ.

RELATED ARTICLES

Latest News