ಬೆಂಗಳೂರು,ಜ.2-ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು ಜನವರಿ 5ರಿಂದ 7ರವರೆಗೆ ಮೂರು ದಿನಗಳ ಕಾಲ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.5ರಂದು ಬೆಳಗ್ಗೆ 11 ಗಂಟೆಗೆ ಮೇಳ ಉದ್ಘಾಟನೆಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಿರಿಧಾನ್ಯಗಳಿಂದ ಮೇಳದಲ್ಲಿ ಆಹಾರವನ್ನು ಸಿದ್ದಪಡಿಸಲಾಗುತ್ತದೆ. ಇದರಲ್ಲಿ ಗ್ರಾಹಕರು, ಸಾರ್ವಜನಿಕರು ಭಾಗವಹಿಸಬಹುದು ಎಂದು ತಿಳಿಸಿದರು. ಮೂರು ದಿನಗಳ ಕಾಲ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ಚರ್ಚಾ ಗೋಷ್ಟಿಗಳು ನಡೆಯಲಿವೆ. ಸಿರಿಧಾನ್ಯಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳುವ ಅವಕಾಶ ದೊರೆಯಲಿದೆ. ಸಾವಯವ ಸಿರಿಧಾನ್ಯಗಳು ಬೆಳೆಯುವುದರ ಜೊತೆಗೆ ಅವುಗಳ ಮೌಲ್ಯ ವರ್ಧನೆ ಮಾಡುವುದು, ಆಹಾರವಾಗಿ ಬಳಕೆ ಮಾಡುವುದು ಮೊದಲಾದ ವಿಚಾರಗಳ ಬಗ್ಗೆ ಮೇಳದಲ್ಲಿ ಬೆಳಕು ಚೆಲ್ಲಲಾಗುತ್ತದೆ ಎಂದರು.
ಸಿರಿಧಾನ್ಯವನ್ನು ಬೆಳೆಯುವುದಷ್ಟೇ ಅಲ್ಲ. ಮೌಲ್ಯವರ್ಧನೆ ಮಾಡಿ ರಫ್ತು ಮಾಡಬೇಕು. ಸಿರಿಧಾನ್ಯ ಉತ್ಪಾದನೆಯಲ್ಲಿ ರಾಜ್ಯ 4ನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಬರಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು. ಕಳೆದ 2017ರಿಂದಲೂ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ಮೇಳಕ್ಕೆ 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. 300 ಮಳಿಗೆಗಳನ್ನು ತೆರೆಯಲಾಗುತ್ತದೆ.
ಸಿರಿಧಾನ್ಯಗಳಿಗೆ ಉತ್ತೇಜನ ಸಿಗುವುದರಿಂದ ರೈತರಿಗೆ ಅನುಕೂಲ ಸಿಗಲಿದೆ. ರೋಗನಿರೋಧಕ ಗುಣವನ್ನು ಹೊಂದಿರುವುದರಿಂದ ಸಿರಿಧಾನ್ಯಗಳು ಆರೋಗ್ಯ ಸುಧಾರಣೆಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಜರ್ಮನ್, ಸೌದಿ ಅರೇಬಿಯಾ, ಒಮನ್, ಆಸ್ಟ್ರೇಲಿಯಾ ಸೇರಿದಂತೆ ಏಳೆಂಟು ರಾಷ್ಟ್ರಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಅಲ್ಲದೆ ಆಂಧ್ರಪ್ರದೇಶ, ಕೇರಳ, ಒಡಿಶಾ, ಮೇಘಾಲಯ, ಉತ್ತರಪ್ರದೇಶ ಮೊದಲಾದ ರಾಜ್ಯಗಳು ಭಾಗವಹಿಸಲಿವೆ ಎಂದರು.
ಮೇಳದಲ್ಲಿ ಹತ್ತು ವಿವಿಧ ಸಿರಿಧಾನ್ಯ ಹೋಟೆಲ್‍ಗಳು ಇರಲಿದ್ದು, ವೈವಿಧ್ಯ ಮತ್ತು ರುಚಿಕರವಾದ ಸಿರಿಧಾನ್ಯ ಊಟ ಮತ್ತು ಉಪಹಾರ ಸವಿಯುವ ಅವಕಾಶವಿದೆ ಎಂದರು. 35ಕ್ಕೂ ಹೆಚ್ಚು ಪ್ರಖ್ಯಾತ ಉಪನ್ಯಾಸಕರು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾಹಿತಿ ನೀಡಲಿದ್ದಾರೆ. ರೈತರಿಗೂ ಕೃಷಿ ವಿವಿಯಿಂದ ಕಾರ್ಯಗಾರ ಆಯೋಜಿಸಲಾಗುತ್ತಿದೆ. ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಿಕೊಡಲು ಮೇಳದಲ್ಲಿ ಉತ್ಪಾದಕರ, ಮಾರುಕಟ್ಟೆದಾರರ ಸಮಾಲೋಚನೆ ಸಭೆಗಳನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.
ಮೇಳದಲ್ಲಿ ಚಿಲ್ಲರೆ ಮಾರಾಟಗಾರರು, ರಫ್ತುದಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು ಭಾಗವಹಿಸಲಿವೆ. ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನೋಡಲ್ ಏಜೆನ್ಸಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಗಳಾದ ಜಿಐಜೆಡ್, ಐಐಎಂಆರ್ ಮೊದಲಾದ ಸಂಸ್ಥೆಗಳು ಭಾಗವಹಿಸಲಿವೆ ಎಂದರು.
ಬಾಬ್ರಿ ಮಸೀದಿ ಕಳೆದುಕೊಂಡ ಬೇಸರ ಇಲ್ಲವೇ: ಮುಸ್ಲಿಂ ಯುವಕರಿಗೆ ಓವೈಸಿ ಪ್ರಶ್ನೆ
ಇದಕ್ಕೂ ಮುನ್ನ ರಫ್ತುದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತ ನಾಡಿದ ಸಚಿವ ಚಲುವರಾಯಸ್ವಾಮಿ ಅವರು ಸಿರಿಧಾನ್ಯಗಳ ಬಗ್ಗೆ ಯುವ ಸಮುದಾಯಕ್ಕೆ ಸಾಕಷ್ಟು ಅರಿವಿದೆ. ತಾರಾ ಹೋಟೆಲ್‍ಗಳಲ್ಲೂ ಸಿರಿಧಾನ್ಯದ ಆಹಾರ ಲಭ್ಯವಾಗುತ್ತಿದೆ. ಸಿರಿಧಾನ್ಯದ ರಫ್ತಿನ ನಿರ್ಬಂಧ ಸಡಿಲ ಮಾಡಿ ಉತ್ತೇಜನ ನೀಡಬೇಕು.
ಮುಂದಿನ ವರ್ಷದಲ್ಲಿ ರಫ್ತು ಎರಡುಮೂರು ಪಟ್ಟು ಹೆಚ್ಚಾಗಬೇಕು, ಸಿರಿಧಾನ್ಯ ಬೆಳೆಯುವುದು ಮತ್ತು ರಫ್ತಿನಲ್ಲಿ ರಾಜ್ಯ ಮೊದಲ ಸ್ಥಾನಕ್ಕೆ ಬರಬೇಕು, ಹೆಕ್ಟೇರ್‍ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು ಮುಂದಿನ ವರ್ಷ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಿರಿಧಾನ್ಯಗಳ ಮೌಲ್ಯ ರ್ವತ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಕೆಫೆಕ್‍ನ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಕೃಷಿ ಇಲಾಖೆ ನಿರ್ದೇಶಕ ಡಾ.ಪುತ್ರ.ಜಿ.ಟಿ, ಅಪರ ಕೃಷಿ ನಿರ್ದೇಶಕ ವೆಂಕಟರಾಮ ರೆಡ್ಡಿ, ಜೆ.ಪಾಟೀಲ್, ಕೆಫೆಕ್ ವ್ಯವಸ್ಥಾಪಕ ನಿರ್ದೇಶಕ ಎನ್.ಎಚ್.ಭಂತನಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.