Homeಅಂತಾರಾಷ್ಟ್ರೀಯಬೊಲಿವಿಯಾದ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ : 10ಕ್ಕೂ ಹೆಚ್ಚು ಮಂದಿ ಸಾವು

ಬೊಲಿವಿಯಾದ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ : 10ಕ್ಕೂ ಹೆಚ್ಚು ಮಂದಿ ಸಾವು

ಲಾ ಪಾಜ್‌, ಸೆ.5- ದಕ್ಷಿಣ ಅಮೆರಿಕದ ಬೊಲಿವಿಯಾದ ರಾಜಧಾನಿ ಲಾ ಪಾಜ್‌ ಸಮೀಪದ ಸೇನಾ ನೆಲೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದ ಸೇನಾ ಬ್ಯಾರಕ್‌ನಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹಣಾ ವಿಭಾಗದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸೇನಾ ನೆಲೆಯ ಸುತ್ತಮುತ್ತಲಿನ ಹಲವು ಮನೆಗಳು ಹಾಗೂ ಕಟ್ಟಡಗಳು ಹಾನಿಗೊಳಗಾಗಿದ್ದು, ಅವಶೇಷಗಳಡಿ ಸಿಲುಕಿರುವ ಇತರ ಏಳು ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಸ್ಥಳೀಯ ಕಾಲಮಾನ ಮಧ್ಯಾಹ್ನ ಸುಮಾರು 2.30ಕ್ಕೆ ಪಟಾಕಿ ಹಾಗೂ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿದ್ದ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದೆ. ಕ್ಷಣಾರ್ಧದಲ್ಲೇ ದಟ್ಟ ಕಪ್ಪು ಹೊಗೆ ಆಕಾಶದೆತ್ತರಕ್ಕೆ ವ್ಯಾಪಿಸಿದ್ದು, ಸ್ಫೋಟದ ಸದ್ದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ.

ಸ್ಥಳೀಯ ಆರೋಗ್ಯ ನಿರ್ದೇಶಕಿ ರೀಟಾ ನೆಬ್ರಸ್ಕಾ ಅವರ ಪ್ರಕಾರ, ಘಟನೆಯಲ್ಲಿ ಇದುವರೆಗೆ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಗಾಯಗೊಂಡ 62 ಮಂದಿಯಲ್ಲಿ 52 ಮಂದಿ ನಾಗರಿಕರಾಗಿದ್ದು, ಉಳಿದವರು ಕರ್ತವ್ಯದಲ್ಲಿದ್ದ ಯೋಧರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಟ್ಟ ಬಾಲಕಿ ಸೇರಿದಂತೆ ಸ್ಥಿತಿ ಗಂಭೀರವಾಗಿರುವ 14 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಾ ಪಾಜ್‌ನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಶಾಖ ಹಾಗೂ ಸ್ಫೋಟಿಸದೆ ಉಳಿದಿರುವ ಸ್ಫೋಟಕಗಳಿರುವ ಹಿನ್ನೆಲೆಯಲ್ಲಿ ಮತ್ತೊಂದು ಸ್ಫೋಟ ಸಂಭವಿಸುವ ಸಾಧ್ಯತೆಯಿದೆ ಎಂದು ರಕ್ಷಣಾ ಪಡೆಗಳು ಎಚ್ಚರಿಕೆ ನೀಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ಸೇನಾ ನೆಲೆಯಿಂದ ಕನಿಷ್ಠ 150 ಮೀಟರ್‌ ದೂರ ಇರುವಂತೆ ಸೂಚಿಸಲಾಗಿದೆ. ಸೇನಾ ನೆಲೆಯ ಗೋಡೆಗೆ ಹೊಂದಿಕೊಂಡಿದ್ದ ಒಂದು ಡಜನ್‌ಗೂ ಹೆಚ್ಚು ವಸತಿ ಕಟ್ಟಡಗಳ ಕಿಟಕಿ ಗಾಜುಗಳು ಹಾಗೂ ಛಾವಣಿಗಳು ಸ್ಫೋಟದ ತೀವ್ರ ಒತ್ತಡಕ್ಕೆ ಹಾನಿಗೊಳಗಾಗಿವೆ.

ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಮಿಲಿಟರಿ ಹಾಗೂ ನಾಗರಿಕ ಪೊಲೀಸರು ಜಂಟಿಯಾಗಿ ತನಿಖೆ ನಡೆಸುವಂತೆ ಬೊಲಿವಿಯಾದ ರಕ್ಷಣಾ ಸಚಿವ ಅರ್ನೆಸ್ಟೊ ಜಸ್ಟಿನಿಯಾನೊ ಆದೇಶಿಸಿದ್ದಾರೆ. ಸುಮಾರು 1 ಲಕ್ಷ ಜನಸಂಖ್ಯೆ ಹೊಂದಿರುವ ವಿಯಾಚಾ ನಗರವು ಬೊಲಿವಿಯಾದ ಆಡಳಿತ ರಾಜಧಾನಿ ಲಾ ಪಾಜ್‌ನಿಂದ ಸುಮಾರು 30 ಕಿ.ಮೀ. (19 ಮೈಲಿ) ದೂರದಲ್ಲಿದೆ.

RELATED ARTICLES
spot_img

Latest News