Homeರಾಜ್ಯರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ 'ಭಾರತ್‌ ಜೋಡೋ'ದ ಲಾಂಛನ ಅನಾವರಣ

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಭಾರತ್‌ ಜೋಡೋ’ದ ಲಾಂಛನ ಅನಾವರಣ

ಬೆಂಗಳೂರು, ಸೆ.5- ರಾಜ್ಯದ ಯುವಶಕ್ತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ‘ಭಾರತ್‌ ಜೋಡೋ’ ಯೋಜನೆಯ ಲಾಂಛನವನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಇಂದು ಅನಾವರಣಗೊಳಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅನುಮೋದನೆ ಪಡೆದಿರುವ ಈ ಲಾಂಛನವನ್ನು ಕಲಾವಿದರ ಸೃಜನಶೀಲತೆಯ ಆಧಾರದ ಮೇಲೆ ರೂಪಿಸಲಾಗಿದೆ. ರಾಜ್ಯದ ಯುವಜನರನ್ನು ಒಂದೆಡೆ ಸೇರಿಸಿ, ಒಗ್ಗಟ್ಟು, ಸಾಮಾಜಿಕ ಸೌಹಾರ್ದತೆ, ಜವಾಬ್ದಾರಿಯುತ ಪೌರತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

‘ಭಾರತ್‌ ಜೋಡೋ’ ಯೋಜನೆಗೆ ವಿಶಿಷ್ಟ ಗುರುತನ್ನು ನೀಡುವ ಉದ್ದೇಶದಿಂದ ಲಾಂಛನ ವಿನ್ಯಾಸಕ್ಕಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 255 ಲಾಂಛನ ವಿನ್ಯಾಸಗಳು ಸಲ್ಲಿಕೆಯಾಗಿದ್ದವು.

ಸಲ್ಲಿಕೆಯಾದ ವಿನ್ಯಾಸಗಳ ಪರಿಶೀಲನೆ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ನಿಷ್ಪಕ್ಷಪಾತವಾಗಿ ಮತ್ತು ವೃತ್ತಿಪರವಾಗಿ ನಡೆಸಲು ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ಜವಾಬ್ದಾರಿ ವಹಿಸಲಾಗಿತ್ತು. ವಿವರವಾದ ಮೌಲ್ಯಮಾಪನದ ಬಳಿಕ ಎರಡು ಲಾಂಛನ ವಿನ್ಯಾಸಗಳನ್ನು ಅಂತಿಮಗೊಳಿಸಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಅಂತಿಮ ಅನುಮೋದನೆಗೆ ಸಲ್ಲಿಸಲಾಗಿತ್ತು.

ಅಂತಿಮವಾಗಿ ಅನಾವರಣಗೊಂಡಿರುವ ‘ಭಾರತ್‌ ಜೋಡೋ’ ಲಾಂಛನವು ಆಯ್ಕೆಯಾದ ಎರಡೂ ವಿನ್ಯಾಸಗಳ ಪ್ರಮುಖ ಅಂಶಗಳು ಹಾಗೂ ಆಲೋಚನೆಗಳ ಸೃಜನಶೀಲ ಸಮಿಲನವಾಗಿದೆ. ಇದು ಕಾರ್ಯಕ್ರಮಕ್ಕೆ ಅರ್ಥಪೂರ್ಣ ಹಾಗೂ ವಿಶಿಷ್ಟವಾದ ದೃಶ್ಯ ಗುರುತನ್ನು ಒದಗಿಸಲಿದೆ.

ಒಗ್ಗಟ್ಟು, ಸಹಬಾಳ್ವೆ, ಯುವಜನರ ಸಕ್ರಿಯ ಭಾಗವಹಿಸುವಿಕೆ ಹಾಗೂ ಕರ್ನಾಟಕದ ಜನರ ಸಾಮೂಹಿಕ ಶಕ್ತಿಯ ಸಂಕೇತವಾಗಿ ಈ ಲಾಂಛನ ರೂಪುಗೊಂಡಿದ್ದು, ‘ಭಾರತ್‌ ಜೋಡೋ’ ಕಾರ್ಯಕ್ರಮದ ಮೂಲ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್‌.ಅನುಚೇತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
spot_img

Latest News