Homeಅಂತಾರಾಷ್ಟ್ರೀಯಕೃತಕ ಸರೋವರಗಳು ಒಡೆಯುವ ಆತಂಕ ; ನೇಪಾಳ-ಚೀನಾ ಗಡಿಯಲ್ಲಿ ಮತ್ತೆ ಪ್ರವಾಹ ಭೀತಿ

ಕೃತಕ ಸರೋವರಗಳು ಒಡೆಯುವ ಆತಂಕ ; ನೇಪಾಳ-ಚೀನಾ ಗಡಿಯಲ್ಲಿ ಮತ್ತೆ ಪ್ರವಾಹ ಭೀತಿ

Fears of a Second Flood Grow as Rescue Efforts Continue in Nepal

ಕಠಂಡು/ಬೀಜಿಂಗ್‌, ಆ.28- ಹಿಮಾಲಯ ಪ್ರದೇಶದಲ್ಲಿ ಸಂಭವಿಸಿರುವ ಭೀಕರ ಪ್ರಾಕೃತಿಕ ವಿಕೋಪದ ಪರಿಣಾಮವಾಗಿ ನೇಪಾಳ-ಚೀನಾ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಿಮನದಿ ಕುಸಿತದಿಂದ ಉಂಟಾದ ಹಠಾತ್‌ ಪ್ರವಾಹದ ಬಳಿಕ ನದಿಪಾತ್ರದಲ್ಲಿ ಶಿಲಾಖಂಡರಾಶಿಗಳು ಅಡ್ಡವಾಗಿ ನಿಂತು ಕೃತಕ ಸರೋವರಗಳು ನಿರ್ಮಾಣಗೊಂಡಿದ್ದು, ಅವು ಯಾವುದೇ ಕ್ಷಣದಲ್ಲಿ ಒಡೆದುಹೋಗುವ ಗಂಭೀರ ಅಪಾಯವಿದೆ ಎಂದು ನೇಪಾಳ ಮತ್ತು ಚೀನಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಹಿಮನದಿ ಕುಸಿತದಿಂದ ಬಂಡೆಗಳು, ಮಂಜುಗಡ್ಡೆ, ಮಣ್ಣು ಹಾಗೂ ಅಪಾರ ಪ್ರಮಾಣದ ಶಿಲಾಖಂಡರಾಶಿಗಳು ನದಿ ವ್ಯವಸ್ಥೆಗೆ ನುಗ್ಗಿರುವುದೇ ಭೀಕರ ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ. ಶಿಲಾಖಂಡರಾಶಿಗಳು ನದಿಯ ಹರಿವಿಗೆ ಅಣೆಕಟ್ಟಿನಂತೆ ಅಡ್ಡಿಯಾಗಿರುವುದರಿಂದ ಮೇಲ್ಭಾಗದಲ್ಲಿ ನೀರು ಸಂಗ್ರಹಗೊಂಡು ಸರೋವರದ ನೀರಿನ ಮಟ್ಟ ವೇಗವಾಗಿ ಏರುತ್ತಿದೆ.

ಚೀನಾದ ಜಲಸಂಪನ್ಮೂಲ ಸಚಿವಾಲಯ ಹಾಗೂ ಕಠಂಡು ಮೂಲದ ಅಂತರರಾಷ್ಟ್ರೀಯ ಸಮಗ್ರ ಪರ್ವತ ಅಭಿವೃದ್ಧಿ ಕೇಂದ್ರದ ತಜ್ಞರ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಸರೋವರಕ್ಕೆ ಸುಮಾರು 3 ದಶಲಕ್ಷ ಘನ ಮೀಟರ್‌ ನೀರು ಹರಿದುಬರುವ ಸಾಧ್ಯತೆಯಿದೆ. ಇದು ಅಂದಾಜು 1,200 ಒಲಿಂಪಿಕ್‌ ಗಾತ್ರದ ಈಜುಕೊಳಗಳಷ್ಟು ನೀರಿಗೆ ಸಮನಾಗಿದೆ. ಸೆಪ್ಟೆಂಬರ್‌ 1ರ ಸುಮಾರಿಗೆ ನೀರಿನ ಹರಿವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಚೀನಾದ ಸರ್ಕಾರಿ ಪ್ರಸಾರಕ ಸಿಜಿಟಿಎನ್‌ ಬಿಡುಗಡೆ ಮಾಡಿರುವ ವೈಮಾನಿಕ ದೃಶ್ಯಾವಳಿಗಳಲ್ಲಿ ಕಂದು ಬಣ್ಣದ ಪ್ರವಾಹದ ನೀರು ಮರ-ಗಿಡಗಳನ್ನು ಮುಳುಗಿಸಿರುವುದು ಹಾಗೂ ಶಿಲಾಖಂಡರಾಶಿಗಳಿಂದ ನಿರ್ಮಾಣವಾಗಿರುವ ತಡೆಗೋಡೆಯ ಮೇಲೆ ಭಾರಿ ಒತ್ತಡ ಉಂಟಾಗಿರುವುದು ಕಂಡುಬಂದಿದೆ.

ಎರಡನೇ ಹಂತದ ಪ್ರವಾಹದ ಅಪಾಯವನ್ನು ಮನಗಂಡು ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರವು ನದಿಪಾತ್ರದ ಕೆಳಭಾಗದಲ್ಲಿ ವಾಸಿಸುವ ನಿವಾಸಿಗಳು, ಪ್ರಯಾಣಿಕರು ಹಾಗೂ ರಕ್ಷಣಾ ಕಾರ್ಯಕರ್ತರು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮುಂಬರುವ ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯೂ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಹೀಗಾಗಿ ನೇಪಾಳ-ಚೀನಾ ಗಡಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ರಕ್ಷಣಾ ತಂಡಗಳನ್ನು ಹೈಅಲರ್ಟ್‌ನಲ್ಲಿ ಇರಿಸಲಾಗಿದೆ.

RELATED ARTICLES
spot_img

Latest News