ಸೇಂಟ್ ಲೂಯಿಸ್, ಆ.28- ಭಾರತದ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಅಮೆರಿಕದ ಸೇಂಟ್ ಲೂಯಿಸ್ನಲ್ಲಿ ನಡೆದ ಗ್ರ್ಯಾಂಡ್ ಚೆಸ್ ಟೂರ್ (ಜಿಸಿಟಿ) ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇಲ್ಲಿನ ಗ್ರ್ಯಾಂಡ್ ಫಿನಾಲೆಯಲ್ಲಿ ಅಮೆರಿಕದ ಗ್ರ್ಯಾಂಡ್ಮಾಸ್ಟರ್ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸುವ ಮೂಲಕ ಪ್ರಜ್ಞಾನಂದ ಅವರು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಆರಂಭದಲ್ಲಿ ಕರುವಾನಾ ವಿರುದ್ಧ ಹಿನ್ನಡೆ ಅನುಭವಿಸಿದ ಪ್ರಜ್ಞಾನಂದ, ಬಳಿಕ ಅದ್ಭುತ ಪ್ರದರ್ಶನ ನೀಡಿ ಪಂದ್ಯದಲ್ಲಿ ಭರ್ಜರಿ ತಿರುಗೇಟು ನೀಡಿದರು. ಅಂತಿಮವಾಗಿ ಕರುವಾನಾ ಅವರನ್ನು 15-13 ಅಂಕಗಳಿಂದ ಮಣಿಸಿ ಚೊಚ್ಚಲ ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಈ ಗೆಲುವಿನೊಂದಿಗೆ ಪ್ರಜ್ಞಾನಂದ ಅವರು 2 ಲಕ್ಷ ಅಮೆರಿಕನ್ ಡಾಲರ್ ಬಹುಮಾನವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಸಾಧನೆ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.
