ನವದೆಹಲಿ, ಅ.4- ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ದಾಳಿಯ ವೇಳೆ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆ ತೋರಿದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ.
ಮಚ್ಚರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನೆತನ್ಯಾಹು, ಅವರ ಸಾಹಸವನ್ನು ಪ್ರಶಂಸಿಸಿ, ಮುಂಬರುವ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭಕ್ಕೆ ಮಚ್ಚರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ.
ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆಯಲ್ಲಿ ಕಾಕ್‌ಪಿಟ್ ಬಾಗಿಲಿನ ಸುರಕ್ಷತಾ ವ್ಯವಸ್ಥೆಯ ಬಗ್ಗೆಯೂ ಮಚ್ಚರ್ ವಿವರಿಸಿದರು. ಹೊರಗಿನಿಂದ ಬಾಗಿಲು ತೆರೆಯಲು ಭದ್ರತಾ ಕೋಡ್ ಅಗತ್ಯವಿದ್ದರೂ, ಒಳಗಿನಿಂದ ಮ್ಯಾನುವಲ್ ನಾಬ್ ಬಳಸಿ ಬಾಗಿಲು ತೆರೆಯಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.
ಮಚ್ಚರ್ ಅವರ ಧೈರ್ಯವನ್ನು ಶ್ಲಾಘಿಸಿದ ನೆತನ್ಯಾಹು, ಸಂಕಷ್ಟದ ಸಂದರ್ಭದಲ್ಲಿ ಅವರು ತೋರಿದ ನಿರ್ಣಾಯಕ ಕ್ರಮವು ಅನೇಕ ಜೀವಗಳನ್ನು ರಕ್ಷಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, ಇಸ್ರೇಲ್‌ನ ಮುಂಬರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಚ್ಚರ್ ಹಾಗೂ ಪ್ರಧಾನಿ ಮೋದಿಗೆ ಆಹ್ವಾನ ನೀಡಿರುವುದು ಘಟನೆಯ ಅಂತರರಾಷ್ಟ್ರೀಯ ಗಮನಕ್ಕೆ ಮತ್ತಷ್ಟು ಮಹತ್ವ ನೀಡಿದೆ.
ಮಚ್ಚರ್‌ಗೆ ನೆತನ್ಯಾಹು ವಿಶೇಷ ಆಹ್ವಾನ: ಈ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮಚ್ಚರ್ ಅವರನ್ನು ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಡೆಯುವ ಜ್ಯೋತಿ ಬೆಳಗಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಮಚ್ಚರ್ ಅವರನ್ನು ಇಸ್ರೇಲ್, ಭಾರತ ಮತ್ತು ಇಡೀ ಜಗತ್ತಿನ ನಾಯಕ ಎಂದು ಬಣ್ಣಿಸಿದ ನೆತನ್ಯಾಹು, ಪ್ರಧಾನಿ ನರೇಂದ್ರ ಮೋದಿ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
