Homeಅಂತಾರಾಷ್ಟ್ರೀಯಮೆಕ್ಕಾ ಮಸೀದಿಯಲ್ಲಿ ಅಸಭ್ಯ ಕೃತ್ಯ ಎಸಗಿದ ಇಬ್ಬರು ಬಾಂಗ್ಲಾದೇಶಿಯರಿಗೆ ಮರಣದಂಡನೆ

ಮೆಕ್ಕಾ ಮಸೀದಿಯಲ್ಲಿ ಅಸಭ್ಯ ಕೃತ್ಯ ಎಸಗಿದ ಇಬ್ಬರು ಬಾಂಗ್ಲಾದೇಶಿಯರಿಗೆ ಮರಣದಂಡನೆ

ದುಬೈ,ಅ.19- ಪವಿತ್ರ ನಗರವಾದ ಮೆಕ್ಕಾದಲ್ಲಿರುವ ಮಸೀದಿಯೊಳಗೆ ಅಸಭ್ಯ ಕೃತ್ಯ ಎಸಗಿದ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸೌದಿ ಅರೇಬಿಯಾ ಮರಣದಂಡನೆ ಜಾರಿಗೊಳಿಸಿದೆ.ನ್ಯಾಯಾಂಗದ ಅಂತಿಮ ಅನುಮೋದನೆಗಳು ದೊರೆತ ಬಳಿಕ ಮತ್ತು ರಾಜಾಜ್ಞೆ ಹೊರಡಿಸಿದ ನಂತರ ಮೆಕ್ಕಾ ಪ್ರದೇಶದಲ್ಲಿ ಮರಣದಂಡನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ದೃಢಪಡಿಸಿದೆ.

ಮರಣದಂಡನೆಗೆ ಒಳಗಾದವರನ್ನು ಬಾಂಗ್ಲಾದೇಶದ ಪ್ರಜೆಗಳಾದ ನಜ್ರುಲ್‌ ಇಸ್ಲಾಂ ಅಬ್ದುಲ್‌ ಬಾಸಿರ್‌ ಮತ್ತು ಸಿತಿ ಅಖ್ತರ್‌ ಎಂದು ಸಚಿವಾಲಯ ಗುರುತಿಸಿದೆ. ಇಬ್ಬರೂ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದರು.ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಪ್ರಕಟಿಸಿರುವ ಅಧಿಕೃತ ಹೇಳಿಕೆಗಳ ಪ್ರಕಾರ, ಪವಿತ್ರ ಮಸೀದಿಯ ಆವರಣದಲ್ಲಿ ಗಂಭೀರ ನೈತಿಕ ಉಲ್ಲಂಘನೆಗಳನ್ನು ಎಸಗಿರುವುದು ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಇಬ್ಬರನ್ನೂ ಬಂಧಿಸಿದ್ದವು.

ನಂತರ ಪ್ರಕರಣವನ್ನು ಸಂಬಂಧಿತ ಕ್ರಿಮಿನಲ್‌ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರನ್ನೂ ದೋಷಿಗಳೆಂದು ಘೋಷಿಸಿ, ಇಸ್ಲಾಮಿಕ್‌ ಕಾನೂನಿನಡಿ ಮರಣದಂಡನೆ ವಿಧಿಸಿದರು.ಇಸ್ಲಾಮಿಕ್‌ ಕಾನೂನಿನಲ್ಲಿ, ಕುರಾನ್‌ನಲ್ಲಿ ನಿರ್ದಿಷ್ಟ ಶಿಕ್ಷೆಯನ್ನು ಸ್ಪಷ್ಟವಾಗಿ ನಿಗದಿಪಡಿಸದ ಅಪರಾಧಗಳಿಗೆ ನ್ಯಾಯಾಂಗದ ವಿವೇಚನೆಯ ಆಧಾರದ ಮೇಲೆ ಶಿಕ್ಷೆ ವಿಧಿಸುವ ವ್ಯವಸ್ಥೆಯನ್ನು ತಅ್‌‍ರ್ಝೀ ಎಂದು ಕರೆಯಲಾಗುತ್ತದೆ.

ತೀರ್ಪು ಪ್ರಕಟಿಸುವಾಗ, ಮಸೀದಿಯ ಪವಿತ್ರತೆಯನ್ನು ಉಲ್ಲಂಘಿಸಿರುವ ಗಂಭೀರತೆ ಮತ್ತು ಅಪರಾಧಕ್ಕೆ ಸಂಬಂಧಿಸಿದ ವಿಶೇಷ ಸಂದರ್ಭಗಳನ್ನು ನ್ಯಾಯಾಲಯ ಒತ್ತಿಹೇಳಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.ಆರಂಭದಲ್ಲಿ ಮರಣದಂಡನೆ ವಿಧಿಸಿದ ಬಳಿಕ, ತೀರ್ಪನ್ನು ಹಲವು ಹಂತಗಳ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಯಿತು.

ನಂತರ ಮೇಲ್ಮನವಿ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್‌ ಎರಡೂ ಶಿಕ್ಷೆಯನ್ನು ಎತ್ತಿಹಿಡಿದವು. ಇದರಿಂದ ಮರಣದಂಡನೆಯ ತೀರ್ಪು ಅಂತಿಮವಾಯಿತು.ಮೇಲ್ವಿಚಾರಣೆಯಲ್ಲಿ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.ಧಾರ್ಮಿಕ ನಿಯಮಗಳ ಉಲ್ಲಂಘನೆಯ ವಿರುದ್ಧ ತನ್ನ ಕಠಿಣ ನಿಲುವನ್ನು ಪುನರುಚ್ಚರಿಸಿರುವ ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ, ದೇಶದ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕ ನೈತಿಕತೆ ಮತ್ತು ದಂಡನಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಭದ್ರತಾ ಸಂಸ್ಥೆಗಳು ಮುಂದುವರಿಸಲಿವೆ ಎಂದು ತಿಳಿಸಿದೆ.

RELATED ARTICLES
spot_img

Latest News