Homeಅಂತಾರಾಷ್ಟ್ರೀಯಫ್ರಾನ್ಸ್ ನಲ್ಲಿ ನಿಲ್ಲದ ದಂಗೆ, ಅಲ್ಬೇನಿಯಾದಲ್ಲೂ ಭಾರಿ ಹಿಂಸಾತ್ಮಕ ಪ್ರತಿಭಟನೆ

ಫ್ರಾನ್ಸ್ ನಲ್ಲಿ ನಿಲ್ಲದ ದಂಗೆ, ಅಲ್ಬೇನಿಯಾದಲ್ಲೂ ಭಾರಿ ಹಿಂಸಾತ್ಮಕ ಪ್ರತಿಭಟನೆ

ಪ್ಯಾರಿಸ್, ಅ.19: ಇಂಧನ ಬೆಲೆ ಏರಿಕೆ, ಜೀವನ ವೆಚ್ಚ ಹೆಚ್ಚಳ ಹಾಗೂ ಸಾರ್ವಜನಿಕ ಸೇವೆಗಳ ಕುಸಿತವನ್ನು ವಿರೋಧಿಸಿ ಫ್ರಾನ್ಸ್‌ನಲ್ಲಿ ನಡೆದ ಬೃಹತ್‌ ಪ್ರತಿಭಟನೆಗಳು ಹಿಂಸಾಚಾರ ಮತ್ತು ಲೂಟಿಗೆ ತಿರುಗಿದ್ದು, ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಮನವಿ ಮಾಡಿದ್ದಾರೆ.

ಎಲಿಸೀ ಅರಮನೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಮ್ಯಾಕ್ರನ್‌, ಪ್ರತಿಭಟನಾಕಾರರು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಬಾರದು ಎಂದು ಎಚ್ಚರಿಸಿದರು. “ನಾವೆಲ್ಲರೂ ಕೋಪ ಮತ್ತು ನಾಚಿಕೆಯನ್ನು ಅನುಭವಿಸುತ್ತಿದ್ದೇವೆ” ಎಂದು ಅವರು ಹೇಳಿದರು.

ಈ ನಡುವೆ ಪ್ಯಾರಿಸ್‌ನ ಕೆಲವು ಭಾಗಗಳಲ್ಲಿ ಅಶಾಂತಿ ಮುಂದುವರಿದಿದ್ದು, ಜೀವನ ವೆಚ್ಚದ ಹೆಚ್ಚಳ ಹಾಗೂ ಶಾಲೆಗಳು ಸೇರಿದಂತೆ ಸಾರ್ವಜನಿಕ ಸೇವೆಗಳ ಗುಣಮಟ್ಟ ಕುಸಿಯುತ್ತಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು ಆರಂಭದಲ್ಲಿ ಬಹುತೇಕ ಶಾಂತಿಯುತವಾಗಿದ್ದವು. ಆದರೆ, ಬಳಿಕ ಕೆಲವು ಪ್ರದೇಶಗಳಲ್ಲಿ ಹಿಂಸಾಚಾರಕ್ಕೆ ತಿರುಗಿದವು. “ಪ್ರತಿಭಟನಾಕಾರರ ನ್ಯಾಯಸಮ್ಮತ ಬೇಡಿಕೆಗಳು ಮತ್ತು ಧ್ವಂಸ, ಹಾನಿ ಹಾಗೂ ಲೂಟಿಯಲ್ಲಿ ತೊಡಗಿದವರ ನಡುವೆ ವ್ಯತ್ಯಾಸ ಗುರುತಿಸಬೇಕು” ಎಂದು ಮ್ಯಾಕ್ರನ್‌ ಹೇಳಿದರು.

ಫ್ರಾನ್ಸ್‌ನ ಆಂತರಿಕ ಸಚಿವಾಲಯದ ಪ್ರಕಾರ, ಪೊಲೀಸರು ಸುಮಾರು 2,400 ಮಂದಿಯನ್ನು ಬಂಧಿಸಿದ್ದಾರೆ. “ಯಾವುದೇ ಕಾರಣವೂ ಇಂತಹ ನಿಯಂತ್ರಣವಿಲ್ಲದ ಹಿಂಸಾಚಾರವನ್ನು ಸಮರ್ಥಿಸುವುದಿಲ್ಲ. ಹಿಂಸಾಚಾರದಲ್ಲಿ ಭಾಗಿಯಾದವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದರು. ಕಪ್ಪು ಬಟ್ಟೆ ಧರಿಸಿ, ಮುಖಕ್ಕೆ ಮಾಸ್ಕ್‌ ಹಾಗೂ ಬಲಾಕ್ಲಾವಾಗಳನ್ನು ಹಾಕಿಕೊಂಡಿದ್ದ ಗುಂಪುಗಳು ಪ್ಯಾರಿಸ್, ಮಾರ್ಸೆಲ್‌ ಸೇರಿದಂತೆ ಹಲವು ನಗರಗಳಲ್ಲಿ ಗಲಭೆ ನಡೆಸಿದವು. ಕೆಲವು ಕಡೆ ಕಾರುಗಳು ಮತ್ತು ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ.

ಭಾನುವಾರವೂ ಪ್ಯಾರಿಸ್‌ನ ಕೆಲವು ಪ್ರದೇಶಗಳು ಹಾಗೂ ಲಿಯಾನ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಲೂಟಿ ಮತ್ತು ಪೊಲೀಸರೊಂದಿಗೆ ಘರ್ಷಣೆಗಳು ಮುಂದುವರಿದವು. ಆಧುನಿಕ ಫ್ರಾನ್ಸ್‌ನ ಇತಿಹಾಸದಲ್ಲಿನ ಅತ್ಯಂತ ಗಂಭೀರ ಅಶಾಂತಿಯ ಘಟನೆಗಳಲ್ಲಿ ಒಂದಾಗಿ ಪರಿಣಮಿಸಿದ ಈ ಹಿಂಸಾಚಾರದ ಪರಿಣಾಮ ದೇಶದ ಹಲವು ನಗರಗಳಲ್ಲಿ ಕಂಡುಬಂದಿದೆ.

ಲಿಮೋಜ್‌ ನಗರದಲ್ಲಿ 19ನೇ ಶತಮಾನದ ಐತಿಹಾಸಿಕ ನಗರಸಭೆ ಕಟ್ಟಡಕ್ಕೆ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ತೀವ್ರತೆಗೆ ಕಟ್ಟಡದ ಗಡಿಯಾರ ಗೋಪುರ ಮತ್ತು ಮೇಲ್ಛಾವಣಿ ಕುಸಿದಿದ್ದು, ಕಟ್ಟಡದ ಬಹುಭಾಗ ಸುಟ್ಟುಹೋಗಿದೆ.

ಧ್ವಂಸಗೊಂಡ ಕಟ್ಟಡದ ಸಮೀಪ ಮಾತನಾಡಿದ ಅನ್ನೇಯ್ಸ್ ಎಂಬ ಮಹಿಳೆ, “ಇದು ತುಂಬಾ ನೋವುಂಟುಮಾಡುವ ಸಂಗತಿ. ಸರ್ಕಾರದ ವಿರುದ್ಧ ಕೋಪವಿದೆ ಎಂಬ ಕಾರಣಕ್ಕೆ ಐತಿಹಾಸಿಕ ಕಟ್ಟಡಗಳಿಗೆ ಹಾನಿ ಮಾಡುವುದು ಸ್ವಾರ್ಥದ ವರ್ತನೆ. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ” ಎಂದು ಹೇಳಿದರು. ಗೆರಾರ್ಡ್‌ ಎಂದು ಪರಿಚಯಿಸಿಕೊಂಡ ಮತ್ತೊಬ್ಬ ವ್ಯಕ್ತಿ, “ಇದು ಭಯಾನಕ ಮತ್ತು ನಂಬಲಸಾಧ್ಯವಾದ ಘಟನೆ. ನಮಗೆ ತುಂಬಾ ದುಃಖವಾಗಿದೆ. ಈ ಕಟ್ಟಡವನ್ನು ಮೊದಲಿನ ಸ್ಥಿತಿಗೆ ತರಲು ಬಹಳ ಸಮಯ ಬೇಕಾಗಬಹುದು ಎಂದು ಭಾವಿಸುತ್ತೇನೆ” ಎಂದರು.

ಅಲ್ಬೇನಿಯಾದಲ್ಲೂ ಭಾರಿ ಹಿಂಸಾಚಾರ :
ಅಲ್ಬೇನಿಯಾದ ರಾಜಧಾನಿ ಟಿರಾನಾದಲ್ಲಿ ಸತತ ಆರನೇ ದಿನವೂ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿದಿವೆ. ಭಾನುವಾರವೂ ನೂರಾರು ಪ್ರತಿಭಟನಾಕಾರರು ಶಿಕ್ಷಣ ಸಚಿವಾಲಯದ ಎದುರು ಜಮಾಯಿಸಿ, “ಪ್ರಧಾನಿ ರಾಮ ರಾಜೀನಾಮೆ ನೀಡಲಿ” ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಜನಸಮೂಹವನ್ನು ಚದುರಿಸಲು ಪೊಲೀಸರು ರಬ್ಬರ್‌ ಗುಂಡುಗಳು, ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.

ಈ ಪ್ರತಿಭಟನೆಗಳು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿವೆ ಅಥವಾ ಇನ್ನೆಷ್ಟು ದಿನ ಮುಂದುವರಿಯಲಿವೆ ಎಂಬುದನ್ನು ಅಂದಾಜಿಸುವುದು ಕಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಧಾನಿ ಎಡಿ ರಾಮ ಅವರು ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದು, ತಾವು ರಾಜೀನಾಮೆ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದ ನೇರ ಪ್ರಸಾರದಲ್ಲಿ ಮಾತನಾಡಿದ ಪ್ರಧಾನಿ ಎಡಿ ರಾಮ, “ಸರ್ಕಾರಕ್ಕೆ ಯಾವುದೇ ಸವಾಲು ಎದುರಾಗಿಲ್ಲ” ಎಂದು ಹೇಳಿದರು. ಆದರೆ ದೇಶದಲ್ಲಿ ಮುಂದುವರಿದಿರುವ ಅಶಾಂತಿಯು ಅಲ್ಬೇನಿಯಾ ಯುರೋಪಿಯನ್‌ ಒಕ್ಕೂಟದ ಸದಸ್ಯತ್ವ ಪಡೆಯುವ ಹಾದಿಯ ಮೇಲೆ ಪರಿಣಾಮ ಬೀರಬಹುದು ಎಂಬ ಸುಳಿವನ್ನೂ ನೀಡಿದರು.

“ಅಲ್ಬೇನಿಯನ್ನರು ಈ ಬಗ್ಗೆ ಬಹಳ ಸ್ಪಷ್ಟವಾಗಿ ಯೋಚಿಸಬೇಕು. ಅವರಿಗೆ ಈ (ಅಶಾಂತಿಯ) ಪರಿಸ್ಥಿತಿ ಬೇಕೇ ಅಥವಾ ಯುರೋಪಿಯನ್‌ ಒಕ್ಕೂಟ ಬೇಕೇ?” ಎಂದು ರಾಮ ಪ್ರಶ್ನಿಸಿದರು. ಅಲ್ಬೇನಿಯಾ 2030ರ ವೇಳೆಗೆ ಯುರೋಪಿಯನ್‌ ಒಕ್ಕೂಟದ ಸದಸ್ಯತ್ವ ಪಡೆಯುವ ಗುರಿ ಹೊಂದಿದೆ.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:

  • ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು.
  • ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು.
  • ದೇಶದಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು.
  • ಪ್ರಧಾನಿ ಎಡಿ ರಾಮ ಅವರು ತಕ್ಷಣ ರಾಜೀನಾಮೆ ನೀಡಬೇಕು.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಅಲ್ಬೇನಿಯಾದ ರಾಜಧಾನಿ ಟಿರಾನಾದಲ್ಲಿ ಪ್ರತಿಭಟನಾಕಾರರು ಮುಖ್ಯವಾಗಿ ಸರ್ಕಾರಿ ಕಚೇರಿಗಳು ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.


RELATED ARTICLES
spot_img

Latest News