ಬೆಂಗಳೂರು,ಅ.19- ಆಸ್ತಿ ತೆರಿಗೆ ವಂಚನೆಗೆ ಕಡಿವಾಣ ಹಾಕಲು ಹಾಗೂ ಕಟ್ಟಡಗಳ ನೈಜ ವಿಸ್ತೀರ್ಣವನ್ನು ನಿಖರವಾಗಿ ಪತ್ತೆಹಚ್ಚಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಲೇಸರ್ ಮೀಟರ್ ಮತ್ತು ಸ್ಯಾಟಲೈಟ್ ತಂತ್ರಜ್ಞಾನ ಆಧಾರಿತ ಪ್ರಾಯೋಗಿಕ ಸರ್ವೆಗೆ ಮುಂದಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಆಸ್ತಿ ಮಾಲೀಕರು ಕಟ್ಟಡದ ನೈಜ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣವನ್ನು ಘೋಷಿಸಿ ತೆರಿಗೆ ಪಾವತಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಈ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಲೇಸರ್ನಿಂದ ನಿಖರ ಅಳತೆ:
ಸಾಮಾನ್ಯವಾಗಿ ಕಟ್ಟಡಗಳ ವಿಸ್ತೀರ್ಣ ಅಳೆಯಲು ಟೇಪ್ ಸೇರಿದಂತೆ ಸಾಂಪ್ರದಾಯಿಕ ವಿಧಾನಗಳನ್ನು ಬಳಸಲಾಗುತ್ತದೆ. ಆದರೆ, ಇದೀಗ ಲೇಸರ್ ಮೀಟರ್ ಬಳಸಿ ಕಟ್ಟಡದ ಹೊರಭಾಗದಿಂದಲೇ ಗೋಡೆಗಳು ಅಥವಾ ನಿರ್ದಿಷ್ಟ ಜಾಗದ ನಡುವಿನ ಅಂತರವನ್ನು ಅಳೆಯುವ ಪ್ರಯತ್ನ ನಡೆಸಲಾಗುತ್ತಿದೆ.
ಉಪಕರಣದ ಮೂಲಕ ಲೇಸರ್ ಡಾಟ್ ಗುರುತಿಸಿ ಕ್ಲಿಕ್ ಮಾಡಿದಾಗ ದೂರವನ್ನು ನಿಖರವಾಗಿ ಅಳೆಯಲು ಸಾಧ್ಯವಾಗುತ್ತದೆ. ಇದರಿಂದ ಕಟ್ಟಡದ ವಿಸ್ತೀರ್ಣವನ್ನು ಲೆಕ್ಕಹಾಕುವ ಪ್ರಕ್ರಿಯೆ ಸುಲಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಯಾಟಲೈಟ್ ಚಿತ್ರದಲ್ಲೂ ಪರಿಶೀಲನೆ: ಮೊಬೈಲ್ ಆ್ಯಪ್ ಮೂಲಕ ಕಟ್ಟಡದ ವಿವರಗಳನ್ನು ದಾಖಲಿಸುವುದರ ಜತೆಗೆ ಗೂಗಲ್ ಸ್ಯಾಟಲೈಟ್ ಚಿತ್ರಗಳನ್ನು ಬಳಸಿಕೊಂಡು ಕಟ್ಟಡದ ಹೊರಭಾಗದ ವಿಸ್ತೀರ್ಣವನ್ನು ಪಾಲಿಗಾನ್ ಗುರುತುಗಳ ಮೂಲಕ ಗುರುತಿಸಲಾಗುತ್ತದೆ. ಬಳಿಕ ಲೇಸರ್ ಉಪಕರಣದ ನೆರವಿನಿಂದ ಕಟ್ಟಡದ ಒಳಭಾಗದ ಕೊಠಡಿಗಳು ಮತ್ತು ವಿವಿಧ ಮಹಡಿಗಳ ವಿಸ್ತೀರ್ಣವನ್ನು ಅಳೆಯಲಾಗುತ್ತದೆ. ಈ ಎರಡೂ ಮಾಹಿತಿಗಳನ್ನು ಆಧರಿಸಿ ಆಸ್ತಿಯ ಒಟ್ಟು ವಿಸ್ತೀರ್ಣವನ್ನು ದಾಖಲಿಸುವುದು ಸರ್ವೆಯ ಉದ್ದೇಶವಾಗಿದೆ.
ಈ ಹಿಂದೆ ಡ್ರೋನ್ಗಳ ಮೂಲಕ ಆಸ್ತಿ ಸರ್ವೆ ನಡೆಸುವ ಪ್ರಯತ್ನ ಮಾಡಲಾಗಿತ್ತು. ಇದೀಗ ಮೊಬೈಲ್ ಆ್ಯಪ್ ಹಾಗೂ ಲೇಸರ್ ಮೀಟರ್ ಬಳಸಿ ಕಡಿಮೆ ಸಮಯದಲ್ಲಿ ಸುಲಭವಾಗಿ ಅಳತೆ ನಡೆಸಬಹುದೇ ಎಂಬುದನ್ನು ಪಾಲಿಕೆ ಪರೀಕ್ಷಿಸುತ್ತಿದೆ.
ಸದ್ಯಕ್ಕೆ ಪ್ರಾಯೋಗಿಕ ಪರೀಕ್ಷೆ ಮಾತ್ರ: ಲೇಸರ್ ಮೀಟರ್ ಮತ್ತು ಸ್ಯಾಟಲೈಟ್ ತಂತ್ರಜ್ಞಾನ ಬಳಕೆಯು ಸದ್ಯಕ್ಕೆ ಪ್ರಾಯೋಗಿಕ ಹಂತದಲ್ಲಿದೆ. ಈ ವಿಧಾನವನ್ನು ಅಳವಡಿಸಿಕೊಳ್ಳುವ ಕುರಿತು ಪಾಲಿಕೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಆಯುಕ್ತ ಕೆ.ಎನ್. ರಮೇಶ್ ಸ್ಪಷ್ಟಪಡಿಸಿದ್ದಾರೆ.
