ವಾಷಿಂಗ್ಟನ್,ಏ.12- ಚೀನಾ ಶೀಘ್ರದಲ್ಲೇ ಇರಾನ್‌ಗೆ ವಾಯು ರಕ್ಷಣಾ ವ್ಯವಸ್ಥೆಯನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ತಿಳಿಸಿವೆ.ಇದರ ಬೆನ್ನಲ್ಲೇ, ಷಿ ಜಿನ್‌ಪಿಂಗ್ ಅವರೇ, ಇರಾನ್‌ಗೆ ಶಸ್ತ್ರಾಸ್ತ್ರ ನೀಡುವ ಸಾಹಸ ಮಾಡಬೇಡಿ, ಇಲ್ಲದಿದ್ದರೆ ನೀವು ಊಹಿಸಲಾಗದ ಸಂಕಷ್ಟಕ್ಕೆ ಸಿಲುಕುತ್ತೀರಿ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಚೀನಾ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದರೆ ಅದು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ವಾರ್ನಿಂಗ್ ಮಾಡಿದ್ದಾರೆ. ಈ ಬೆಳವಣಿಗೆ ಮಧ್ಯೆ ಚೀನಾ ಇರಾನ್‌ಗೆ ಸಹಾಯ ಮಾಡುವ ಯೋಜನೆಯು ಇಡೀ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲ ಮಾಡಿದೆ.
ಸಿಎನ್‌ಎನ್ ವರದಿ ಪ್ರಕಾರ, ಚೀನಾ ಇರಾನ್‌ಗೆ (ಭುಜದಿಂದ ಹಾರಿಸುವ ವೈಮಾನಿಕ ಕ್ಷಿಪಣಿ ವ್ಯವಸ್ಥೆ) ಶಸ್ತ್ರಾಸ್ತ್ರಗಳನ್ನು ಪೂರೈಸಲು ಯೋಜಿಸುತ್ತಿದೆ. ಈ ವ್ಯವಸ್ಥೆಗಳು ಕಡಿಮೆ ಹಾರುವ ಫೈಟರ್ ಜೆಟ್‌ಗಳು ಮತ್ತು ಡ್ರೋನ್‌ಗಳಿಗೆ ದೊಡ್ಡ ಬೆದರಿಕೆಯಾಗುತ್ತವೆ. ಚೀನಾ ತನ್ನ ಹೆಸರನ್ನು ಬಹಿರಂಗಪಡಿಸದಂತೆ ಮೂರನೇ ದೇಶಗಳ ಮೂಲಕ ಈ ಶಸ್ತ್ರಾಸ್ತ್ರಗಳನ್ನು ತಲುಪಿಸುವ ಯೋಜನೆ ಹೊಂದಿದೆ ಎಂದು ವರದಿ ಹೇಳುತ್ತದೆ.
ಇತ್ತೀಚೆಗೆ ಇರಾನ್ ಅಮೆರಿಕದ ಎಫ್-15 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ. ಟ್ರಂಪ್ ಇದು ಶಾಖ-ಸೀಕಿಂಗ್ ಕ್ಷಿಪಣಿಯಿಂದ ನಡೆದಿದೆ ಎಂದು ಹೇಳಿದ್ದಾರೆ. ಇರಾನ್ ಹೊಸ ತಂತ್ರಜ್ಞಾನ ಪಡೆಯುತ್ತಿದೆ ಎಂಬ ಅನುಮಾನಗಳು ಹುಟ್ಟಿವೆ. ಚೀನಾ ಇಂತಹ ವ್ಯವಸ್ಥೆಗಳನ್ನು ಒದಗಿಸಿದರೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ದೊಡ್ಡ ಬೆದರಿಕೆ ಉಂಟಾಗುತ್ತದೆ ಎಂದು ಅಮೆರಿಕ ಭಾವಿಸುತ್ತಿದೆ.
ಹೀಗಾಗಿ ಟ್ರಂಪ್ ಚೀನಾಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದರೆ ಅದು ಚೀನಾಗೆ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಮೆರಿಕ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಿರ್ದಿಷ್ಟಪಡಿಸದಿದ್ದರೂ, ಇದು ತುಂಬಾ ಗಂಭೀರ ಎಚ್ಚರಿಕೆಯಾಗಿದೆ.
ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಈ ಆರೋಪಗಳನ್ನು ಬಲವಾಗಿ ತಿರಸ್ಕರಿಸಿದೆ. ಚೀನಾ ಯಾವುದೇ ದೇಶಕ್ಕೂ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿಲ್ಲ. ಸಂಘರ್ಷವನ್ನು ಶಮನಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಚೀನಾ ಹೇಳಿದೆ. ಅಮೆರಿಕ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಚೀನಾ ಆರೋಪಿಸಿದೆ. ಚೀನಾ ಇರಾನ್‌ನೊಂದಿಗೆ ತನ್ನ ಆರ್ಥಿಕ ಮತ್ತು ಇಂಧನ ಸಂಬಂಧಗಳನ್ನು ಕಾಪಾಡಿಕೊಳ್ಳಲು ಬಯಸುತ್ತದೆ. ಆದರೆ ಸಂಘರ್ಷದಲ್ಲಿ ಬಹಿರಂಗವಾಗಿ ಭಾಗಿಯಾಗಲು ಬಯಸುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಈಗಾಗಲೇ ಹೆಚ್ಚಿದೆ. ಇದರ ನಡುವೆ ಚೀನಾ ಪ್ರವೇಶಿಸುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಹೊಸ ಸಂಘರ್ಷ ಉಂಟಾಗುವ ಅಪಾಯ ಹೆಚ್ಚಿದೆ.
ಯಾರು ಎಷ್ಟೇ ಬಲಪ್ರಯೋಗ ಮಾಡಿದರೂ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವೇ ಗೆಲ್ಲಲಿದೆ. ಇರಾನ್ ರಾಜಿ ಮಾಡಿಕೊಳ್ಳಲು ಮಾತ್ರ ಅಸ್ತಿತ್ವದಲ್ಲಿದೆ. ಅದು ಒಪ್ಪದಿದ್ದರೆ ನಾವು ಅದನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ನೆಲಬಾಂಬ್‌ಗಳನ್ನು ಅಳವಡಿಸಿ ಜಾಗತಿಕ ತೈಲ ಸಾರಿಗೆಯನ್ನು ತಡೆಯಲು ಯತ್ನಿಸುತ್ತಿದೆ. ಆ ಮಾರ್ಗವನ್ನು ನಿರ್ಬಂಧಿಸಲು ನಾವು ಬಿಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇರಾನ್ ಒಪ್ಪಂದಕ್ಕೆ ಸಹಿ ಹಾಕದಂತೆ ಚೀನಾ ತೆರೆಮರೆಯಲ್ಲಿ ಪ್ರಚೋದಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.
ಅಮೆರಿಕದ ಯುದ್ಧ ವಿಮಾನಗಳು ಎಲ್ಲಿದ್ದವು ಎಂಬ ನಿಖರ ಮಾಹಿತಿಯನ್ನು ಚೀನಾ ಇರಾನ್‌ಗೆ ಒದಗಿಸುತ್ತಿದೆ. ಇದರಿಂದಾಗಿ ಇರಾನ್ ಅಮೆರಿಕದ ವಿಮಾನಗಳ ಮೇಲೆ ಗುರಿ ಇಡಲು ಸಾಧ್ಯವಾಗುತ್ತಿದೆ. ಮುಂದಿನ ವಾರ ಚೀನಾ ಇರಾನ್‌ಗೆ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ನೀಡಲಿದೆ. ವಿಶೇಷವಾಗಿ ಭುಜದ ಮೇಲೆ ಇಟ್ಟು ಹಾರಿಸುವ ಕ್ಷಿಪಣಿಗಳ ಮೂಲಕ ಇರಾನ್ ಈಗಾಗಲೇ ಅಮೆರಿಕದ ಎಫ್-15 ಇ ಫೈಟರ್ ಜೆಟ್ ಮತ್ತು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ.
ಕಳೆದ 20 ವರ್ಷಗಳಲ್ಲಿ ಅಮೆರಿಕದ ವಿಮಾನಗಳನ್ನು ಮುಟ್ಟಲು ಯಾವ ದೇಶಕ್ಕೂ ಸಾಧ್ಯವಾಗಿರಲಿಲ್ಲ, ಆದರೆ ಚೀನಾದ ತಂತ್ರಜ್ಞಾನದಿಂದ ಇರಾನ್ ಈಗ ಈ ಸಾಹಸ ಮಾಡುತ್ತಿದೆ. ಮಾರ್ಚ್ 2026 ರಲ್ಲಿ ಚೀನಾ ಎರಡು ಹಡಗುಗಳ ಮೂಲಕ ರಾಕೆಟ್ ಇಂಧನಕ್ಕೆ ಬಳಸುವ ಸೋಡಿಯಂ ಪರ್ಕ್ಲೋರೇಟ್ ಅನ್ನು ಇರಾನ್‌ಗೆ ರವಾನಿಸಿರುವುದು ಪತ್ತೆಯಾಗಿದೆ. ಇರಾನ್ ತನ್ನ ಪರಮಾಣು ಹಠ ಮತ್ತು ಚೀನಾದ ಬೆಂಬಲದಿಂದಾಗಿ ಜಾಗತಿಕ ಶಾಂತಿಗೆ ಭಂಗ ತರುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
