Thursday, April 16, 2026
Homeರಾಜ್ಯಬಿರುಸಿಸಿಲಿಗೆ ತತ್ತರಿಸಿದ ಉತ್ತರ ಕರ್ನಾಟಕ : ಕಲಬುರಗಿಯಲ್ಲಿ 45 ಡಿಗ್ರಿ ಸೆಲ್ಸಿಯಸ್‌‍ ಉಷ್ಣಾಂಶ ದಾಖಲು

ಬಿರುಸಿಸಿಲಿಗೆ ತತ್ತರಿಸಿದ ಉತ್ತರ ಕರ್ನಾಟಕ : ಕಲಬುರಗಿಯಲ್ಲಿ 45 ಡಿಗ್ರಿ ಸೆಲ್ಸಿಯಸ್‌‍ ಉಷ್ಣಾಂಶ ದಾಖಲು

North Karnataka reels under severe heatwave: Kalaburagi records 45 degrees Celsius

ಬೆಂಗಳೂರು,ಏ.16- ಬಿರು ಬಿಸಿಲಿಗೆ ಉತ್ತರ ಕರ್ನಾಟಕದ ಜನತೆ ಕಂಗಾಲಾಗಿದ್ದಾರೆ. ನಿನ್ನೆ ಕಲಬುರಗಿಯ ಔರಾದ್‌ ಹೋಬಳಿಯಲ್ಲಿ 45 ಡಿಗ್ರಿ ಸೆಲ್ಸಿಯಸ್‌‍ ಉಷ್ಣಾಂಶ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌‍ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಕಲಬುರಗಿ ಜಿಲ್ಲೆಯಷ್ಟೇ ಅಲ್ಲದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಚಿಂಚೋಳಿ ತಾಲೂಕಿನ ಐನಾಪುರ ಹೋಬಳಿ ಮತ್ತು ಅಫಜಲ್ಪುರ ತಾಲ್ಲೂಕಿನ ಅತನೂರು ಹೋಬಳಿಗಳಲ್ಲಿ ತಲಾ 44.3 ಡಿಗ್ರಿ ತಾಪಮಾನ ದಾಖಲಾಗಿದ್ದರೆ, ಆಳಂದ ತಾಲೂಕಿನ ಮದನ ಹಿಪ್ಪರಗಾ ಹೋಬಳಿಯಲ್ಲಿ 44.1 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ಬೀದರ್‌ ಜಿಲ್ಲೆಯ ಔರಾಧ್‌ ತಾಲೂಕಿನ ಸಂತಪುರದಲ್ಲಿ 44.4 ಡಿಗ್ರಿ, ಕಮಲನಗರ ತಾಲೂಕಿನ ದಬಕದಲ್ಲಿ 44.1 ಡಿಗ್ರಿ ಮತ್ತು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಹೋಬಳಿಯಲ್ಲಿ 4.2 ಡಿಗ್ರಿ ತಾಪಮಾನ ದಾಖಲಾಗಿದೆ.

ಕೆಎಸ್‌‍ಎನ್‌ಡಿಎಂಸಿ ಹವಾಮಾನ ಜಾಲದ ವರದಿ ಪ್ರಕಾರ, ರಾಜ್ಯದ ಹಲವೆಡೆ 42 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಕಲಬುರಗಿಯಲ್ಲಿ 24 ಸ್ಥಳಗಳಲ್ಲಿ 42 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದರೆ, ರಾಯಚೂರಿನಲ್ಲಿ 22, ಬೀದರ್‌ನಲ್ಲಿ 18, ವಿಜಯಪುರದಲ್ಲಿ 14, ಯಾದಗಿರಿಯಲ್ಲಿ 11 ಮತ್ತು ಬಾಗಲಕೋಟೆಯಲ್ಲಿ 7 ಸ್ಥಳಗಳಲ್ಲಿ ಉಷ್ಣಾಂಶ 42 ಡಿಗ್ರಿ ಮೀರಿದೆ. ಇದಲ್ಲದೆ ಬಳ್ಳಾರಿ, ಗದಗ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಕೆಲವು ಪ್ರದೇಶಗಳಲ್ಲಿ ತಾಪಮಾನ 42 ಡಿಗ್ರಿ ದಾಟಿದೆ.

ಇದೇ ಕೆಎಸ್‌‍ಎನ್‌ಡಿಎಂಸಿ ಏಪ್ರಿಲ್‌ 15ರಿಂದ 19ರವರೆಗೆ ಉತ್ತರ ಒಳನಾಡಿನ ಕರ್ನಾಟಕದ ಕೆಲವು ಭಾಗಗಳಲ್ಲಿ ಉಷ್ಣ ಅಲೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇದೇ ವೇಳೆ ಕರಾವಳಿ ಕರ್ನಾಟಕದಲ್ಲೂ ಬಿಸಿ ಮತ್ತು ತೇವಾಂಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ ಏಪ್ರಿಲ್‌ 15ರಿಂದ 17ರವರೆಗೆ ಆರೆಂಜ್‌ ಹೀಟ್‌ ವೇವ್‌ ಅಲರ್ಟ್‌ ಘೋಷಿಸಿ ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲು ಸೂಚಿಸಿದೆ. ಅಗತ್ಯವಿಲ್ಲದ ಹೊರಚಟುವಟಿಕೆಗಳನ್ನು ತಪ್ಪಿಸುವುದು, ಹೆಚ್ಚು ನೀರು ಕುಡಿಯುವುದು, ತೀವ್ರ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ನಿಯಂತ್ರಿಸುವಂತೆ ಸಲಹೆ ನೀಡಿದೆ.

ಇದೇ ವೇಳೆ ತೀವ್ರ ಬಿಸಿಲಿನ ನಡುವೆಯೂ ಟ್ರಾಫಿಕ್‌ ನಿಯಮ ಜಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಎಸ್‌‍ವಿಪಿ ಸರ್ಕಲ್‌ ಮುಂತಾದ ಬ್ಯುಸಿ ಜಂಕ್ಷನ್‌ಗಳಲ್ಲಿ ಏರ್‌ಕೂಲ್‌್ಡ ಹೆಲೆಟ್‌ ಧರಿಸಿದ ಟ್ರಾಫಿಕ್‌ ಪೊಲೀಸರು, ಹೆಲೆಟ್‌ ಧರಿಸದ ಸವಾರರಿಗೆ ದಂಡ ವಿಧಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ. ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಾಹ್ನ ಸಮಯದಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

RELATED ARTICLES

Latest News