ಬೆಂಗಳೂರು,ಏ.16- ಪಕ್ಷದ ವಿರುದ್ಧ ಯಾರೇ ಕೆಲಸ ಮಾಡಿದರೂ ಅವರ ವಿರುದ್ಧ ಕ್ರಮಗಳು ಅನಿವಾರ್ಯ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಪಾದಿಸಿದ್ದಾರೆ.ವಿಧಾನಸೌಧದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಮುಖ್ಯಮಂತ್ರಿಯಾಗಿರಲಿ, ಉಪಮುಖ್ಯಮಂತ್ರಿಯಾಗಿರಲಿ, ಜಮೀರ್ ಆಗಿರಲಿ ಅಥವಾ ನಾನೇ ಆಗಿರಲಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮಗಳು ಅನಿವಾರ್ಯ ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಾವು ಕೂಡ ಕೆಲಸ ಮಾಡಿದ್ದು, ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಕೆಲಸ ಮಾಡಿಲ್ಲ. ನನಗೆ ವಹಿಸಿದ್ದ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದೇನೆ. ಇಲ್ಲಿ ಅಲ್ಪಸಂಖ್ಯಾತರ ನಾಯಕರ ನಡುವೆ ಗೊಂದಲ ಬಂದಿದೆ. ಅದನ್ನು ಬಗೆ ಹರಿಸಬೇಕೆ ಹೊರತು, ಬೇರೆ ರೀತಿಯ ವ್ಯಾಖ್ಯಾನ ಬೇಕಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರನ್ನೇ ಗುರಿ ಮಾಡಲಾಗಿದೆ ಎಂಬುದು ಸರಿಯಲ್ಲ. ಪಕ್ಷಕ್ಕೆ ತೊಂದರೆಯಾಗುವಂತಹ ಯಾರೇ ಕೆಲಸ ಮಾಡಿದರೂ ಕ್ರಮಗಳು ಅನಿವಾರ್ಯ ಎಂದರು. ಡಿ.ಕೆ.ಶಿವಕುಮಾರ್ ಅವರು ಸದ್ಗುರು ಜೊತೆ ಧಾರ್ಮಿಕ ಕಾರ್ಯಕ್ರದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಸದ್ಗುರು ಈ ಮೊದಲು ರಾಹುಲ್‌ಗಾಂಧಿ ಯಾರು ಎಂದು ಗೊತ್ತಿಲ್ಲ ಎಂದು ಹೇಳಿಕೆ ನೀಡಿರಬಹುದು. ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಹೋಗಿ ನಾನು ರಾಹುಲ್‌ಗಾಂಧಿ ಪಕ್ಷದವನು. ರಾಹುಲ್‌ಗಾಂಧಿ ಅವರಿಂದಾಗಿ ನಾವು ಬೆಳೆದಿದ್ದೇವೆ. ನೀವು ನಮ್ಮಂಥವರನ್ನು ಕಾರ್ಯಕ್ರಮಕ್ಕೆ ಕರೆಯಬೇಕಾದರೆ, ರಾಹುಲ್ ಗಾಂಽಯವರ ಸಾಮರ್ಥ್ಯವೂ ಮುಖ್ಯ ಎಂದು ಪಾಠ ಮಾಡಿ ಬಂದಿದ್ದಾರೆ ಎಂದು ತಿಳಿಸಿದರು.
ನಾಯಕತ್ವ ಬದಲಾವಣೆ ನಮ್ಮಂಥವರ ಹಂತದಲ್ಲಿ ಚರ್ಚೆಯಾದರೆ ಪ್ರಯೋಜನವಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ನಮಗೆ ಟಿಕೆಟ್ ನೀಡಿರುವುದು ಹೈಕಮಾಂಡ್ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದಾ ಕಾಲ ಬೇರೆ ಪಕ್ಷದವರಿಗೆ ಆರ್ ನೀಡುತ್ತಲೇ ಇರುತ್ತಾರೆ. ಅವರ ಪಕ್ಷ ನಡೆಯುವುದೇ ಇಂತಹ ಆರ್ ಮೇಲೆ. ಕಾಂಗ್ರೆಸ್ ಪಕ್ಷದ ಯಾರೂ ಕುಮಾರ್‌ಸ್ವಾಮಿ ಅವರ ಸಂಪರ್ಕದಲ್ಲಿಲ್ಲ ಎಂದು ಹೇಳಿದರು.ಹಿರಿಯ ಶಾಸಕರು ದೆಹಲಿಗೆ ತೆರಳಿ ಸಂಪುಟ ಪುನರ್ ರಚನೆಗೆ ಒತ್ತಡ ಹೇರಲು ಹೋಗಿದ್ದಾರೆ, ಇದು ತಪ್ಪಲ್ಲ. ನಾನು 5 ಬಾರಿ ಶಾಸಕನಾಗಿದ್ದೇನೆ. ಸಚಿವರಾಗಲು ಎಲ್ಲಾ ಅರ್ಹತೆಗಳಿವೆ. ನನಗೂ ಅವಕಾಶ ಸಿಗಬೇಕು ಎಂದರು.
