ನವದೆಹಲಿ,ಏ.16- ಪ್ರತಿಪಕ್ಷಗಳ ತೀವ್ರ ವಿರೋಧ, ಗದ್ದಲ, ಕೋಲಾಹಲದ ನಡುವೆಯೇ ಐತಿಹಾಸಿಕ ಮಹಿಳಾ ಮೀಸಲಾತಿ, ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.ಮಸೂದೆ ಪರವಾಗಿ 251 ಸಂಸದರು ಮತ ಚಲಾಯಿಸಿದರೆ, 185 ಸಂಸದರು ವಿರೋಧ ವ್ಯಕ್ತ ಪಡಿಸಿದರು.
ನಾಳೆ ಸಂಜೆ 4 ಗಂಟೆಗೆ ಮಸೂದೆಗಳ ಮೇಲೆ ಮತದಾನ ನಡೆಯಲಿದೆ. ಸಂಸತ್ನ ಉಭಯ ಸದನಗಳಾದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮಸೂದೆಗಳನ್ನು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಬೇಕು.
ಲೋಕಸಭೆಯ ಒಟ್ಟು 540 (3 ಸ್ಥಾನ ಖಾಲಿ) ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್ಡಿಎ 293 ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 231 ಸದಸ್ಯರನ್ನು ಹೊಂದಿದೆ.
ಮೂರು ಮಸೂದೆಗಳು ಅಂಗೀಕಾರವಾಗಬೇಕಾದರೆ ಲೋಕಸಭೆಯಲ್ಲಿ 360 ಸದಸ್ಯರ ಬೆಂಬಲ ಬೇಕು. ರಾಜ್ಯಸಭೆಯ ಒಟ್ಟು 245 ಸ್ಥಾನಗಳ ಪೈಕಿ ಎನ್ಡಿಎ 134, ಇಂಡಿಯಾ ಮೈತ್ರಿಕೂಟ 74 ಹಾಗೂ ಇತರರು 37 ಸದಸ್ಯರಿದ್ದಾರೆ. ಇಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಮಸೂದೆ ಅಂಗೀಕಾರವಾಗಬೇಕಾದರೆ 163 ಸದಸ್ಯರ ಬೆಂಬಲ ಬೇಕು.
ಲೊಕಸಭೆಯಲ್ಲಿ 293, ರಾಜ್ಯಸಭೆಯಲ್ಲಿ 134 ಸದಸ್ಯರನ್ನು ಹೊಂದಿರುವ ಎನ್ಡಿಎ ಮಸೂದೆ ಅಂಗೀಕಾರಕ್ಕೆ ಉಳಿದಿರುವ ಸದಸ್ಯರ ಬೆಂಬಲ ಹೇಗೆ ಪಡೆಯುತ್ತದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಇದೀಗ ಲೋಕಸಭೆಯಲ್ಲಿ ಕಾವೇರಿದ ಚರ್ಚೆ ಪ್ರಾರಂಭವಾಗಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಒಟ್ಟು 12 ಗಂಟೆಗಳ ಚರ್ಚೆಗೆ ಸಮಯವನ್ನು ನಿಗದಿಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ಗಾಂಧಿ ಸೇರಿದಂತೆ ಅನೇಕರು ಮಾತನಾಡಲಿದ್ದಾರೆ. ಚರ್ಚೆಯ ನಂತರ ಉಭಯಸದನಗಳಲ್ಲಿ ಮಸೂದೆ ಮೇಲೆ ಮತದಾನ ನಡೆಯಲಿದೆ.
ಇದಕ್ಕೂ ಮುನ್ನ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಒದಗಿಸುವ ನಾರಿ ವಂದನ್ ಅಧಿನಿಯಂ, ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳನ್ನು ಕೇಂದ್ರ ಕಾನೂನು ಮತ್ತು ಸಾಮಾಜಿಕ ನ್ಯಾಯ ಸಚಿವ ಅರ್ಜುನ್ ರಾಮ್ ಮೇಗರ್ವಾಲ್ ಮಂಡನೆ ಮಾಡಿದರು.
ಈ ವೇಳೆ ಪ್ರತಿಪಕ್ಷಗಳ ಸದಸ್ಯರ ಕೋರಿಕೆಯಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಸೂದೆಯನ್ನು ಮತದಾನಕ್ಕೆ ಹಾಕಿದರು. ಮಸೂದೆ ಪರವಾಗಿ 251 ಹಾಗೂ ವಿರುದ್ಧವಾಗಿ 185 ಮತಗಳು ಚಲಾವಣೆಯಾದವು.
ಇದಕ್ಕೂ ಮುನ್ನ ಅರ್ಜುನ್ ರಾಮ್ ಮೇಗರ್ವಾಲ್ ಮಸೂದೆ ಮಂಡನೆ ಮಾಡುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳಾದ ಟಿಎಂಸಿ, ಎಸ್ಪಿ, ಡಿಎಂಕೆ, ಎಎಪಿ, ಡಿಆರ್ಎಸ್ , ಶಿವಸೇನೆ(ಯುಬಿಟಿ), ಎಐಎಂಐಎಂ ಸೇರಿದಂತೆ ಹಲವು ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಹೊರತುಪಡಿಸಿ ಉಳಿದಿರುವ ಎರಡು ವಿವಾದಾತಕ ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.
ಆದರೆ ಮಸೂದೆ ಮಂಡನೆ ಮಾಡುವುದನ್ನು ಕೇಂದ್ರ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದ್ದು, ಪ್ರತಿಪಕ್ಷಗಳು ಪಕ್ಷಾತೀತವಾಗಿ ಈ ಐತಿಹಾಸಿಕ ಮಸೂದೆಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದೆ.
ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರಾರಂಭದಲ್ಲಿ ಸ್ಪೀಕರ್ ಓಂ ಬಿರ್ಲಾರವರು ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಸಂತಾಪ ನಿರ್ಣಯ ಮಂಡಿಸಿದರು.
ಮಸೂದೆ ಮಂಡನೆಯಾಗುತ್ತಿದ್ದಂತೆ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ರವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆತುರಾತುರವಾಗಿ ಮಸೂದೆಯನ್ನು ಏಕೆ ಮಂಡನೆ ಮಾಡುತ್ತಿದೆ? ಎಂದು ಪ್ರಶ್ನಿಸಿದರು.
ನಾವು ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ನಮ ವಿರೋಧವಿದೆ. 2011 ರ ಜನಗಣತಿ ಪ್ರಕಾರ, ಕ್ಷೇತ್ರ ಪುನರ್ವಿಂಗಡನೆ ಮಾಡಿದರೆ ಉತ್ತರ ಭಾರತದ ರಾಜ್ಯಗಳ ಸಂಖ್ಯೆ ಹೆಚ್ಚಳವಾಗಿ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತದೆ ಎಂದು ಆಕ್ಷೇಪಿಸಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಂವಿಧಾನದಲ್ಲಿ ಧರ್ಮಾಧರಿತ ಮೀಸಲಾತಿ ನೀಡಲು ಅವಕಾಶವಿಲ್ಲ. ಈ ಮಸೂದೆ ಮಂಡನೆಯಿಂದ ಯಾವುದೇ ರಾಜ್ಯಗಳಿಗೂ ಅನ್ಯಾಯವಾಗುವುದಿಲ್ಲ. ಎಲ್ಲಾ ರಾಜ್ಯಗಳಿಗೂ ಸಮಾನವಾದ ನ್ಯಾಯ ಸಿಗುತ್ತದೆ. ರಾಜಕಾರಣ ಮಾಡದೇ ಮಸೂದೆಗೆ ಬೆಂಬಲ ನೀಡಬೇಕೆಂದು ಕೋರಿದರು.
ಎಐಎಂಐಎಂ ಸಂಸದ ಅಸಾವುದ್ದೀನ್ ಓವೈಸಿ ಮಾತನಾಡಿ, ಇದು ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಮಂಡನೆ ಮಾಡುತ್ತಿರುವ ಮಸೂದೆಯಾಗಿದೆ. ಮಸೂದೆಯ ಉದ್ದೇಶವೇ ಸರಿ ಇಲ್ಲ ಎಂದು ಆಕ್ಷೇಪಿಸಿದರು.
ಇದಕ್ಕೆ ತಿರುಗೇಟು ನೀಡಿದ ಅಮಿತ್ ಶಾ, ಸಂವಿಧಾನದಲ್ಲಿ ಧರ್ಮಾಧರಿತ ಮೀಸಲಾತಿಗೆ ಅವಕಾಶವಿಲ್ಲ. ಹೀಗೆ ಕೇಳುವುದೇ ಸಂವಿಧಾನ ವಿರೋಧಿ. ಇದರಲ್ಲಿ ಬೆರೆಸುವುದು ಬೇಡ ಎಂದು ಆಕ್ರೋಶದಿಂದಲೇ ಹೇಳಿದರು.ಕ್ಷೇತ್ರ ಪುನರ್ವಿಂಗಡಣೆ ನಂತರ ಹಾಲಿ ಇರುವ ಲೋಕಸಭೆಯ 543 ಸದಸ್ಯರ ಸಂಖ್ಯೆಯೂ ಕೇಂದ್ರಾಡಳಿತ ಪ್ರದೇಶದ 35 ಕ್ಷೇತ್ರಗಳು ಸೇರಿದಂತೆ ಒಟ್ಟು ಕ್ಷೇತ್ರಗಳ ಸಂಖ್ಯೆ 850ಕ್ಕೆ ಹೆಚ್ಚಳವಾಗಲಿದೆ. 2011 ರ ಜನಗಣತಿ ಆಧಾರದ ಮೇಲೆ ನಡೆಯಲಿದ್ದು, 2029ರ ಲೋಕಸಭೆ ಚುನಾವಣೆ ವೇಳೆಗೆ ಅನುಷ್ಠಾನಕ್ಕೆ ಬರಲಿದೆ.
