ಬೆಂಗಳೂರು,ಏ.16- ಮಾದಕ ವಸ್ತು ಮಾರಾಟ ಜಾಲದ ಮೇಲೆ ಹದ್ದಿನ ಕಣ್ಣಿಟ್ಟಿರುವ ನಗರ ಪೊಲೀಸರು ಮೂವರು ವಿದೇಶಿ ಪ್ರಜೆಗಳು, ಹೊರರಾಜ್ಯದ ಐದು ಮಂದಿ ಸೇರಿದಂತೆ ಒಟ್ಟು ಹತ್ತು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ 23.63 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ವಿದೇಶಿ ಪ್ರಜೆಗಳಾದ ಪೀಸ್ ಗೋಡಿಯಾ (27), ಬಾಕುಲ ಒಮಟಾಯೋ (29), ಓಕೆಕೆ ಚಿಮೇಸಿ ವಿಮರ್ (28), ತಮಿಳುನಾಡು ಮೂಲದ ರಾಜನ್ (33), ಸರವಣನ (38), ಓಡಿಸಾ ರಾಜ್ಯದ ಚಿಂಟೋ ಸ್ವೈನ್ (24), ದೀಪಕ್‌ಕುಮಾರ್ ಸಿಂಗ್ (27), ಶಂಕರ ಸಾಹು (26), ಸ್ಥಳೀಯ ವ್ಯಕ್ತಿಗಳಾದ ಸೈಯದ್ ಸಜ್ಜದ್ (50)ಹಾಗೂ ರಾಜೇಂದ್ರ (27) ಬಂಧಿತ ಆರೋಪಿಗಳು.
ಯಲಹಂಕ ಉಪನಗರ, ದೇವರ ಜೀವನಹಳ್ಳಿ, ಕೋರಮಂಗಲ, ಬೊಮನಹಳ್ಳಿ ಮತ್ತು ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ಸ್ಥಳದ ಮೇಲೆ ದಾಳಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರು ವಿದೇಶಿ ಮಹಿಳೆಯರು,ಒಬ್ಬ ಪುರುಷ ಹಾಗೂ ಹೊರರಾಜ್ಯದ ಐವರು, ಸ್ಥಳೀಯ ಇಬ್ಬರು ವ್ಯಕ್ತಿಗಳು ಸೇರಿ ಒಟ್ಟು ಹತ್ತು ಮಂದಿಯನ್ನು ಬಂಧಿಸಲಾಗಿದೆ.
ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶಿ ಮೂಲದ, ಹೊರರಾಜ್ಯದ ಮತ್ತ ಸ್ಥಳೀಯ ಇಬ್ಬರು ವ್ಯಕ್ತಿಗಳಿಂದ ಕೊಕೇನ್, ಗಾಂಜಾ ಮತ್ತು ಎಕ್ಸ್ ಟೆಸಿ ಪಿಲ್ಸ್ ನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದ್ದು, ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿದೆ.
ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು 11.72 ಕೋಟಿ ಮೌಲ್ಯದ 5 ಕೆಜಿ 860 ಗ್ರಾಂ ಎಂಡಿಎಂಎ,ದೇವರ ಜೀವನ ಹಳ್ಳಿ 11.44 ಕೋಟಿ ಮೌಲ್ಯದ 1 ಕೆಜಿ 145 ಗ್ರಾಂ ಕೊಕೇನ್, ದ್ವಿಚಕ್ರ ವಾಹನ, ಬಾಣಸವಾಡಿ 23.56 ಲಕ್ಷ ಮೌಲ್ಯದ 46 ಗ್ರಾಂ ಎಂಡಿಎಂಎ, 19 ಗ್ರಾಂ ಎಕ್ಸ್ ಟೆಸಿ ಪಿಲ್ಸ್, 6.6 ಗ್ರಾಂ ಕೊಕೇನ್, ಕೋರಮಂಗಲ 16.30 ಲಕ್ಷ ಮೌಲ್ಯದ 16 ಕೆಜಿ 315 ಗ್ರಾಂ ಗಾಂಜಾ, ಬೊಮನಹಳ್ಳಿ 6.60 ಲಕ್ಷ ಮೌಲ್ಯದ 3ಕೆಜಿ 906 ಗ್ರಾಂ ಗಾಂಜಾ, 13 ಗ್ರಾಂ ಎಂಡಿಎಂಎ, ಪುಲಕೇಶಿನಗರ ಠಾಣೆ ಪೊಲೀಸರು 80 ಸಾವಿರ ಮೌಲ್ಯದ 778 ಗ್ರಾಂ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವಿದೇಶ, ಹೊರರಾಜ್ಯದ ಡ್ರಗ್ ಪೆಡ್ಲರ್‌ಗಳ ಪತ್ತೆ ಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು.
