ಬೆಂಗಳೂರು,ಫೆ.29- ವಿಧಾನಸೌಧದ ಮೊಗಸಾಲೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಧಾನಸೌಧ ಠಾಣೆ ಪೊಲೀಸರು ಮೊಹಮ್ಮದ್ ಶಫಿ ನಾಶಿಪುಡಿ ಸೇರಿದಂತೆ 8 ಮಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ನಾಸಿರ್ ಹುಸೇನ್‍ರವರು ಗೆದ್ದು ವಿಧಾನಸೌಧದ ಮೊಗಸಾಲೆಯಲ್ಲಿ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಯಾರ್ಯಾರು ಇದ್ದರು, ಅವರ ಪರ ಯಾರ್ಯಾರು ಘೋಷಣೆ ಕೂಗುತ್ತಿದ್ದರು, ಅಂತವರ ಒಂದು ಪಟ್ಟಿಯನ್ನು ಪೊಲೀಸರು ಮಾಡಿಕೊಂಡಿದ್ದಾರೆ.
ಘಟನೆಗೆ ಸಂಬಂಸಿದಂತೆ ಮಾಧ್ಯಮಗಳಲ್ಲಿ ಬಿತ್ತರವಾದ ವಿಡಿಯೋ ತುಣುಕುಗಳನ್ನು ಪೊಲೀಸರು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಈ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆದರೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ವ್ಯಕ್ತಿ ಯಾರು ಎಂಬುದನ್ನು ನಿಖರವಾಗಿ ಇನ್ನೂ ಪತ್ತೆ ಹಚ್ಚಲಾಗಿಲ್ಲ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್‍ರ ಬೆಂಬಲಿಗ ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿ ಮೊಹಮ್ಮದ್ ಶಫಿ ನಾಶಿಪುಡಿಯ ಧ್ವನಿ ಹೋಲಿಕೆ ಹಿನ್ನೆಲೆಯಲ್ಲಿ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬ್ಯಾಡಗಿಯ ಬಿಜೆಪಿ ಮುಖಂಡರು ಸಹ ಈ ವ್ಯಾಪಾರಿಯ ಮೇಲೆ ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ನಾನು ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ನನ್ನ ತಾಯಿಯಾಣೆ ಆ ರೀತಿ ಘೋಷಣೆ ಕೂಗಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಮೊಹಮ್ಮದ್ ಶಫಿ ತಿಳಿಸಿದ್ದಾನೆಂದು ಗೊತ್ತಾಗಿದೆ.