Wednesday, April 24, 2024
Homeರಾಜ್ಯ'ಹರ್ ಘರ್ ಮೋದಿ' ಎಂದು ಕೂಗಿದ ಬಿಜಿಪಿಯವರಿಗೆ 'ಜೈ ಸೀತಾರಾಮ್' ಘೋಷಣೆ ಕೂಗಿ ತಿರುಗೇಟು ನೀಡಿದ...

‘ಹರ್ ಘರ್ ಮೋದಿ’ ಎಂದು ಕೂಗಿದ ಬಿಜಿಪಿಯವರಿಗೆ ‘ಜೈ ಸೀತಾರಾಮ್’ ಘೋಷಣೆ ಕೂಗಿ ತಿರುಗೇಟು ನೀಡಿದ ಸಿಎಂ

ಬೆಂಗಳೂರು,ಫೆ.29- ವಿಧಾನಸಭೆಯ ಸಭಾಂಗಣದಲ್ಲಿ ಬಿಜೆಪಿಯವರು ಹರ್‍ಘರ್ ಮೋದಿ ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈ ಸೀತಾರಾಮ್ ಘೋಷಣೆ ಕೂಗುವ ಮೂಲಕ ತಿರುಗೇಟು ನೀಡಿದರು.ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಯವರು ಉತ್ತರ ನೀಡುವಾಗ ಬಿಜೆಪಿಯವರು ಧರಣಿ ನಡೆಸುತ್ತಿದ್ದರು. ರಾಜ್ಯಸಭೆ ಚುನಾವಣೆ ಗೆಲುವಿನ ಸಂಭ್ರಮಾಚರಣೆಯ ವೇಳೆ ಕಾಂಗ್ರೆಸ್‍ನ ನಾಸಿರ್ ಹುಸೇನ್ ಜೊತೆಯಲ್ಲಿ ನಿಂತಿದ್ದವರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಧರಣಿ ನಡೆಸುತ್ತಿತ್ತು.

ಆ ವೇಳೆಯಲ್ಲಿ ಬಿಜೆಪಿಯವರು ಧರಣಿ ನಡೆಸುತ್ತಲೇ ಕಾಗದ ಪತ್ರಗಳನ್ನು ತೂರುವ ಮೂಲಕ ನಾನಾ ರೀತಿಯ ಘೋಷಣೆಗಳನ್ನು ಮೊಳಗಿಸಿದರು.ಮೋದಿ ಮೋದಿ ಎಂದು ಬಿಜೆಪಿ ಶಾಸಕರು ಕೂಗುತ್ತಿದ್ದಂತೆ ಸಿದ್ದರಾಮಯ್ಯ ಜೈ ಸೀತಾರಾಮ್ ಎಂದು ಕೂಗಿದರು.ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕರು ಜೈ ಸೀತಾರಾಮ್ ಎಂದು ಜೈಕಾರ ಹಾಕಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಯಾರು ಏನು ಹೇಳುತ್ತಿದ್ದಾರೆಂಬುದೇ ಕೇಳಿಸದಾಯಿತು.

ಮುಂದುವರೆದ ಬಿಜೆಪಿ ಶಾಸಕರು ಹರ್‍ಹರ್ ಮೋದಿ, ಹರ್‍ಘರ್ ಮೋದಿ ಎಂದು ಘೋಷಣೆ ಕೂಗಿದರು. ಅದಕ್ಕೆ ಕೆಂಡ ಕಾರಿದ ಸಿದ್ದರಾಮಯ್ಯ ಮೋದಿ ಇಲ್ಲಿದ್ದಾರೆಯೇ? ಮತ್ತೆ ಅವರ ಹೆಸರನ್ನು ಏಕೆ ಕರೆಯುತ್ತೀರಿ ಎಂದು ಪ್ರಶ್ನಿಸಿದರು. ಕೇಂದ್ರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ಚರ್ಚೆ ಮಾಡುವ ಬದಲಾಗಿ ಮೋದಿ ಮೋದಿ ಎಂದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.ಆದರೂ ಸುಮ್ಮನಾಗದ ಬಿಜೆಪಿಯವರು ಹಲವು ರೀತಿಯ ಘೋಷಣೆಗಳನ್ನು ಮುಂದುವರೆಸಿದರು.

ಬಿಜೆಪಿಯವರು ಜೈ ಕೆಂಪೇಗೌಡ ಎಂದು ಘೋಷಣೆ ಕೂಗಿದರು. ಅದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಂಪೇಗೌಡ ಜಯಂತಿ ಆಚರಣೆ ಮಾಡುವುದನ್ನು ಜಾರಿಗೆ ತಂದಿದ್ದು ನಾವು. ನೀವು ಬರೀ ಘೋಷಣೆ ಕೂಗುತ್ತೀರ, ನಾವು ಕೆಲಸ ಮಾಡಿ ತೋರಿಸುತ್ತೇವೆ ಎಂದರು.

ಬಿಜೆಪಿಯವರು ಜೈ ಸಿದ್ಧರಾಮೇಶ್ವರ ಎಂದು ಘೋಷಣೆ ಕೂಗಿದಾಗ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವಣ್ಣನವರನ್ನು ನಾಡಿನ ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಮ್ಮ ಸರ್ಕಾರ. ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಅಕ್ಕಮಹಾದೇವಿ ಹೆಸರನ್ನು ನಾಮಕರಣ ಮಾಡಿದ್ದೇವೆ ಎಂದು ಹಲವು ಯೋಜನೆಗಳನ್ನು ಪ್ರಸ್ತಾಪಿಸಿದರು.ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದ ಬಳಿಕ ಕಾಂಗ್ರೆಸ್ ಶಾಸಕರು ಜೈ ಜೈ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.

RELATED ARTICLES

Latest News