Wednesday, April 24, 2024
Homeರಾಜ್ಯವಿಧಾನಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

ವಿಧಾನಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆ.29- ಕೇವಲ 12 ಸಾವಿರ ರೂ.ಗಳ ಹಣ ಕೊಟ್ಟು ಬಡವರ ಮನೆ ನಿರ್ಮಾಣದ ಯೋಜನೆಗೆ ಪ್ರಧಾನಮಂತ್ರಿ ಅವಾಜ್ ಯೋಜನೆಯೊಂದು ಹೆಸರನ್ನಿಟ್ಟುಕೊಂಡು ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. ರಾಜ್ಯಸರ್ಕಾರದ ಆಯವ್ಯಯದ ಮೇಲೆ ನಡೆದ ಸುದೀರ್ಘ ಚರ್ಚೆಗೆ ವಿಧಾನಸಭೆಯಲ್ಲಿಂದು ಉತ್ತರ ನೀಡಿದ ಮುಖ್ಯಮಂತ್ರಿಯವರು ಕೇಂದ್ರದ ತಾರತಮ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟು ವಾಗ್ದಾಳಿ ನಡೆಸಿದರು.

ಪ್ರಧಾನಮಂತ್ರಿ ಆವಾಜ್ ಯೋಜನೆಗೆ ಕೇಂದ್ರ ಸರ್ಕಾರ ಕೇವಲ ಒಂದೂವರೆ ಲಕ್ಷ ರೂ.ಗಳನ್ನು ಮಾತ್ರ ನೀಡುತ್ತದೆ. ಅದರಲ್ಲಿ ಜಿಎಸ್‍ಟಿ ರೂಪದಲ್ಲಿ 1.38 ಲಕ್ಷ ರೂ.ಗಳನ್ನು ವಾಪಸ್ ತೆಗೆದುಕೊಳ್ಳುತ್ತಾರೆ. ರಾಜ್ಯಸರ್ಕಾರ ಈ ಯೋಜನೆಗೆ 6 ರಿಂದ 7 ಲಕ್ಷ ರೂ.ಗಳನ್ನು ನೀಡುತ್ತಿದೆ. ಆದರೂ ಹೆಸರು ಮಾತ್ರ ಪ್ರಧಾನಮಂತ್ರಿ ಆವಾಜ್ ಯೋಜನೆಯಾಗಿದೆ ಎಂದು ಆರೋಪಿಸಿದರು.

ಕೇಂದ್ರ ಪುರಸ್ಕøತ ಯೋಜನೆಗಳಿಗೆ ರಾಜ್ಯಸರ್ಕಾರದ ಪಾಲು ಶೇ.50 ಕ್ಕಿಂತಲೂ ಹೆಚ್ಚಿನದಾಗಿದೆ. ಈ ಹಿಂದೆ ಮನಮೋಹನ್‍ಸಿಂಗ್‍ರವರು ಪ್ರಧಾನಿಯಾಗಿದ್ದಾಗ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಶೇ.70 ರಿಂದ 80 ರಷ್ಟು ಆರ್ಥಿಕ ನೆರವು ನೀಡುತ್ತಿದ್ದರು. ರಾಜ್ಯದ ಪಾಲು ಶೇ.20 ರಿಂದ 30 ರಷ್ಟಿತ್ತು. ಪ್ರತಿವರ್ಷ ಇದು ಹೆಚ್ಚಾಗುತ್ತಾ ಬಂದಿದೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಪಾಲು ಸರಿಸಮನಾಗಿ ಹಂಚಿಕೆಯಾಗುತ್ತಿದೆ. ಆದರೂ ಪ್ರಧಾನಿಯವರು ಮೋದಿ ಗ್ಯಾರಂಟಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ಸರ್ವ ಶಿಕ್ಷಣ ಅಭಿಯಾನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿ, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಪ್ರಧಾನಮಂತ್ರಿ ಆವಾಜ್ ಯೋಜನೆಗಳಲ್ಲಿ ರಾಜ್ಯಸರ್ಕಾರ ಕೇಂದ್ರಕ್ಕಿಂತಲೂ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ಅದನ್ನು ಮರೆಮಾಚಿ ಮೋದಿ ಗ್ಯಾರಂಟಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಸರ್ವ ಶಿಕ್ಷಣ ಅಭಿಯಾನದಲ್ಲಿ ಕೇಂದ್ರ ವರ್ಷಕ್ಕೆ 770 ಕೋಟಿ ರೂ. ಕೊಟ್ಟರೆ, ರಾಜ್ಯ 472 ಕೋಟಿ ರೂ. ನೀಡುತ್ತಿದೆ. ಇದರ ಹೊರತಾಗಿ ರಾಜ್ಯಸರ್ಕಾರ ಹೆಚ್ಚುವರಿಯಾಗಿ 1,528 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ.

ಮಧ್ಯಾಹ್ನದ ಬಿಸಿಯೂಟಕ್ಕೆ ಕೇಂದ್ರದ ಪಾಲು 594 ಕೋಟಿ, ರಾಜ್ಯದ ಪಾಲು 340 ಕೋಟಿ, ಹೆಚ್ಚುವರಿಯಾಗಿ ರಾಜ್ಯಸರ್ಕಾರ 967 ಕೋಟಿ ರೂ. ನೀಡುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯನ್ನು ಮೋದಿ ಗ್ಯಾರಂಟಿ ಎಂದು ದೊಡ್ಡದಾಗಿ ಪ್ರಚಾರ ಪಡೆಯುತ್ತಿದ್ದಾರೆ. ಅದಕ್ಕೆ ಕೇಂದ್ರ ನೀಡುತ್ತಿರುವುದು 187 ಕೋಟಿ ರೂ. ಮಾತ್ರ. ರಾಜ್ಯ 124 ಕೋಟಿ ರೂ. ಹೊಂದಾಣಿಕೆ ಹಣದ ಜೊತೆಗೆ ಹೆಚ್ಚುವರಿಯಾಗಿ 624 ಕೋಟಿ ರೂ.ಗಳನ್ನುಒದಗಿಸುತ್ತಿದೆ.

ವಿಧವಾ ವೇತನ, ವಿಶೇಷ ಚೇತನರ ಮಾಸಾಶನ, ವೃದ್ಧಾಪ್ಯ ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗೆ ಕೇಂದ್ರ ಸರ್ಕಾರ 520 ಕೋಟಿ ರೂ. ಕೊಟ್ಟರೆ, ರಾಜ್ಯಸರ್ಕಾರ 324 ಕೋಟಿ ರೂ. ಹೊಂದಾಣಿಕೆಯ ಅನುದಾನದ ಜೊತೆಗೆ ಹೆಚ್ಚುವರಿಯಾಗಿ 8,569 ಕೋಟಿ ರೂ.ಗಳನ್ನು ನೀಡುತ್ತಿದೆ.ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಕೇಂದ್ರದ ಪಾಲು ಶೇ.32 ರಷ್ಟಿದ್ದರೆ, ರಾಜ್ಯದ ಪಾಲು ಶೇ.28 ರಷ್ಟು. ನಾವು ಹೆಚ್ಚುವರಿಯಾಗಿ ಶೇ.33 ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದೇವೆ.

ಇನ್ನು ಬಡವರಿಗೆ ಮನೆ ನಿರ್ಮಿಸಿಕೊಡುವ ಪ್ರಧಾನಮಂತ್ರಿ ಆವಾಜ್ ಯೋಜನೆಯಲ್ಲಿ ಕೇಂದ್ರದ ಪಾಲು ಜಿಎಸ್‍ಟಿ ನಂತರ ಕೇವಲ 12 ಸಾವಿರ ರೂ. ಮಾತ್ರ.ಒಟ್ಟಾರೆ ಕೇಂದ್ರ ಸರ್ಕಾರಗಳ ಪುರಸ್ಕøತ ಯೋಜನೆಗಳಡಿ ರಾಜ್ಯಸರ್ಕಾರಕ್ಕೆ ದೊರೆಯುತ್ತಿರುವುದು 13,005 ಕೋಟಿ ರೂ. ಮಾತ್ರ.

ಇದನ್ನು ಯಾವ ರೀತಿ ಮೋದಿ ಗ್ಯಾರಂಟಿ ಎಂದು ಕರೆಯಬೇಕೆಂದು ಪ್ರಶ್ನಿಸಿದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂದು ಮೋದಿ ಟೀಕಿಸಿದರು.ನಾವು ಪಂಚಖಾತ್ರಿ ಯೋಜನೆಗಳ ಜಾರಿ ಬಳಿಕವೂ ಆರ್ಥಿಕವಾಗಿ ಸಬಲರಾಗಿದ್ದೇವೆ, ಸದೃಢರಾಗಿದ್ದೇವೆ. ಈ ವರ್ಷ ರಾಜಸ್ವದ ಕೊರತೆಯಿದೆ. ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿ ಆದಾಯದ ಬಜೆಟ್ ಮಂಡಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.

ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಮೋದಿಯವರು ಈಗ ನಮ್ಮದೇ ಗ್ಯಾರಂಟಿಗಳನ್ನು ಕದ್ದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಬರ ನಿರ್ವಹಣೆಗೆ ಹಣ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ ಘೋಷಿಸಿದ ಹಣವೂ ಬಿಡುಗಡೆಯಾಗಿಲ್ಲ. 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸಲು ಹೆಚ್ಚುವರಿಯಾಗಿ 5,495 ಕೋಟಿ ರೂ.ಗಳನ್ನು ನೀಡಬೇಕು ಎಂಬ ಶಿಫಾರಸ್ಸು ಇತ್ತು. ಅದನ್ನು ತಿರಸ್ಕರಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂತಿಮ ವರದಿಯಲ್ಲಿ ವಿಶೇಷ ಅನುದಾನದ ಪ್ರಸ್ತಾಪ ಇರಲಿಲ್ಲ. ಹಾಗಾಗಿ ನೀಡಲಿಲ್ಲ ಎಂದಿದ್ದಾರೆ.

ಆದರೆ ಮಧ್ಯಂತರ ವರದಿಯಲ್ಲಿನ ಎಲ್ಲಾ ಶಿಫಾರಸ್ಸುಗಳನ್ನು ಕೇಂದ್ರ ಅನುಷ್ಠಾನಗೊಳಿಸಿದೆ. ರಾಜ್ಯಕ್ಕೆ ವಿಶೇಷ ಅನುದಾನ ನೀಡಬೇಕೆಂಬುದನ್ನು ಮಾತ್ರ ತಿರಸ್ಕರಿಸಲಾಗಿದೆ ಎಂದು ದೂರಿದರು. ಕೆರೆ ಅಭಿವೃದ್ಧಿ, ಪೆರಿಫಿರಲ್ ರಿಂಗ್ ರಸ್ತೆ ಅಭಿವೃದ್ಧಿ ಸೇರಿದಂತೆ 11,495 ಕೊಟಿ ರೂ.ಗಳ ಹೆಚ್ಚುವರಿ ಹಣವನ್ನು ನೀಡದೇ ತಿರಸ್ಕರಸುವ ಮೂಲಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅನ್ಯಾಯ ಮಾಡಿದ್ದಾರೆ. ಬಿಜೆಪಿಯ 25 ಮಂದಿ ಸಂಸದರು ಸೇರಿದಂತೆ ಆ ಪಕ್ಷದ ಯಾವ ನಾಯಕರಿಗೂ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಎದುರು ನಿಂತು ರಾಜ್ಯಕ್ಕೆ ನ್ಯಾಯ ಕೇಳುವ ದಮ್ಮು, ತಾಕತ್ತು ಇಲ್ಲ. ಇವರು ಕನ್ನಡ ದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News