ಉತ್ತಮ ಪ್ರದರ್ಶನ ನೀಡದ ಐಪಿಎಲ್ ತಂಡಗಳ ನಾಯಕರಿಗೆ ಕಾದಿದೆ ಶಾಕ್..!

ವಿಶ್ವದಲ್ಲಿ ಅತ್ಯಂತ ದುಬಾರಿ ಕ್ರಿಕೆಟ್ ಲೀಗ್ ಎಂದೇ ಗುರುತಿಸಿಕೊಂಡಿರುವ ಐಪಿಎಲ್‍ನಲ್ಲಿ ಹಲವು ಯುವ ಆಟಗಾರರು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದರೆ, ತಂಡಗಳ ಸಾರಥ್ಯವನ್ನು ವಹಿಸಿಕೊಂಡಿದ್ದ ನಾಯಕರು ತಮ್ಮ ಕ್ರಿಕೆಟ್ ಜೀವನಕ್ಕೆ ಕುತ್ತು ತಂದುಕೊಂಡಿದ್ದಾರೆ.

ಐಪಿಎಲ್ ಆವೃತ್ತಿ ಆರಂಭವಾದ ಆರಂಭವಾದಾಗಿನಿಂದ ನಾಯಕರು ತಮ್ಮ ನಾಯಕತ್ವ ತ್ಯಜಿಸುವ ಮೂಲಕ ತಾವು ಪ್ರತಿನಿಧಿಸುವ ತಂಡಗಳಿಂದಲೂ ಮೂಲೆಗುಂಪಾಗಿರುವ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್‍ನಲ್ಲೂ ರಾಜಸಾನ್ ರಾಯಲ್ಸ್ ತಂಡದ ನಾಯಕ ಅಜೆಂಕ್ಯ ರಹಾನೆ ಕಳಪೆ ಪ್ರದರ್ಶನ ನೀಡಿದ್ದೆ ಅಲ್ಲದೆ ಸತತ ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದರಿಂದ ನಾಯಕತ್ವವನ್ನು ತ್ಯಜಿಸಿದ್ದಾರಲ್ಲದೆ ವಿಶ್ವಕಪ್ ಸಮರದಲ್ಲಿ ಆಡುವ ಅವಕಾಶವನ್ನುಕಳೆದುಕೊಂಡಿದ್ದಾರೆ. nಈ ರೀತಿ ನಾಯಕತ್ವವನ್ನು ಕಳೆದುಕೊಂಡು ರಾಷ್ಟ್ರೀಯ ತಂಡಗಳಿಂದ ಅವಗಹನೆಗೆ ಒಳಗಾಗಿರುವ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

ಲಕ್ಷ್ಮಣ್ ಔಟ್, ಗಿಲ್ಲಿ ಇನ್: 2008ರಲ್ಲಿ ಆರಂಭವಾದ ಋತುವಿನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕನಾಗಿ ವಿವಿಎಸ್ ಲಕ್ಷ್ಮಣ್ ಆಯ್ಕೆಯಾದರೂ ಕೂಡ ಟೆಸ್ಟ್ ಸ್ಪೆಷಾಲಿಸ್ಟ್ ಎಂದೇ ಬಿಂಬಿಸಿ ಕೊಂಡಿದ್ದ ಲಕ್ಷ್ಮಣ್ ಆಡಿದ 6 ಪಂದ್ಯಗಳಿಂದ ಕೇವಲ 155 ರನ್‍ಗಳನ್ನು ಗಳಿಸಲಷ್ಟೇ ಶಕ್ತವಾಗಿ ಫ್ರಾಂಚೈಸಿಗಳ ಅವಹೇಳನೆಗೆ ಗುರಿಯಾಗಿ ನಾಯಕತ್ವವನ್ನು ತ್ಯಜಿಸಿದರು.

ತದ ನಂತರ ತಂಡದ ನಾಯಕತ್ವವನ್ನು ವಹಿಸಿಕೊಂಡ ಆಸ್ಟ್ರೇಲಿಯಾದ ಗಿಲ್‍ಕ್ರಿಸ್ ಸಾರಥ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಉತ್ತಮ ಪ್ರದರ್ಶನ ನೀಡುವ ಮೂಲಕ 2009ರಲ್ಲಿ ಐಪಿಎಲ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು.

ಪೀಟರ್‍ಸನ್ ಕಿಕ್‍ಔಟ್ :ದಕ್ಷಿಣ ಆಫ್ರಿಕಾದ ನಡೆದ ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ಕೆವಿನ್ ಪೀಟರ್‍ಸನ್ 6 ಪಂದ್ಯಗಳಿಂದ ಕೇವಲ 93 ರನ್ ಗಳಿಸಿ ಫ್ರಾಂಚೈಸಿಗಳ ಕಣ್ಣು ಕೆಂಪಾಗಿಸಿದ್ದೇ ಅಲ್ಲದೆ ನಾಯಕತ್ವವನ್ನು ಕಳೆದುಕೊಂಡರು. ನಂತರ ತಂಡದ ಸಾರಥ್ಯ ವಹಿಸಿದ ಕನ್ನಡಿಗ ಅನಿಲ್‍ಕುಂಬ್ಳೆ ತಂಡವನ್ನು ರನ್ನರ್ ಅಪ್ ಆಗಿಸಿದ ಕೀರ್ತಿಗೆ ಭಾಜನರಾದರು.

ಕುಮಾರಸಂಗಾಕ್ಕಾರಗೂ ಗೇಟ್‍ಪಾಸ್:  ಐಪಿಎಲ್ ಮಾದರಿಗೆ ಹೇಳಿಮಾಡಿಸಿದ ಆಟಗಾರನಾದರೂ ಕೂಡ ಶ್ರೀಲಂಕಾ ಕುಮಾರಸಂಗಾಕ್ಕಾರ 2012ರಲ್ಲಿ ತಮ್ಮ ಬ್ಯಾಟಿಂಗ್ ಲಯವನ್ನು ಕಳೆದುಕೊಂಡರು. ಆಡಿದ 12 ಪಂದ್ಯಗಳಲ್ಲಿ 200 ರನ್‍ಗಳಿಸಿದ್ದೇ ಅಲ್ಲದೆ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲೂ ಎಡವಿದ್ದರಿಂದ ಅವರ ಬದಲಿಗೆ ಕ್ಯಾರ್ಮನ್ ವೈಟ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ವಹಿಸಿದರು.

ವಿರಾಟ್‍ಗೆ ಪಟ್ಟಾಭಿಷೇಕ:  2009ರಲ್ಲಿ ಆರ್‍ಸಿಬಿ ತಂಡವನ್ನು ರನ್ನರ್ ಅಪ್ ಆಗಿಸಿದ್ದ ಕನ್ನಡಿಗ ಅನಿಲ್‍ಕುಂಬ್ಳೆ ನಾಯಕತ್ವ ತ್ಯಜಿಸಿದ ನಂತರ 2011ರಲ್ಲಿ ತಂಡದ ಸಾರಥ್ಯ ವಹಿಸಿಕೊಂಡ ನ್ಯೂಜಿಲೆಂಡ್‍ನ ಡೇನಿಯಲ್ ವಿಟೋರಿ ನಾಯಕನಾದರೂ. ಅವರ ಸಾರಥ್ಯದಲ್ಲೂ ಆರ್‍ಸಿಬಿ ಕಳಪೆ ಪ್ರದರ್ಶನವನ್ನು ಮುಂದುವರೆಸಿತ್ತು. 2012ರಲ್ಲಿ ವಿಟೋರಿ 9 ಪಂದ್ಯಗಳಿಂದ 5 ವಿಕೆಟ್ ಕಬಳಿಸಿ ಕಳಪೆ ಪ್ರದರ್ಶನ ನೀಡಿದ್ದರಿಂದ ವಿಟ್ಟೋರಿಯನ್ನು ಕೆಳಗಿಳಿಸಿ ವಿರಾಟ್‍ಗೆ ಪಟ್ಟಾಭಿಷೇಕ ಮಾಡಿದರೂ ಇದುವರೆಗೂ ಆರ್‍ಸಿಬಿ ಐಪಿಎಲ್ ಚಾಂಪಿಯನ್ಸ್ ಆಗುವುದು ಕನಸಿನ ಮಾತಗೇ ಉಳಿದಿದೆ.

ಎಡವಿದ ವಿಶ್ವಕಪ್ ನಾಯಕ: ಸೀಮಿತ ಓವರ್‍ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 2 ಬಾರಿ ತನ್ನ ನಾಯಕತ್ವದಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ನಾಯಕ ರಿಕ್ಕಿ ಪಾಂಟಿಂಗ್ ಐಪಿಎಲ್ ನಾಯಕತ್ವವನ್ನು ನಿಭಾಯಿಸುವಲ್ಲಿ ಎಡವಿದರು. ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ನಂತರ ಮುಂಬೈ ಇಂಡಿಯನ್ಸ್‍ನ ನಾಯಕತ್ವವನ್ನು ವಹಿಸಿಕೊಂಡ ರಿಕ್ಕಿ 2013ರಲ್ಲಿ ಆಡಿದ 6 ಪಂದ್ಯಗಳಿಂದ 52 ರನ್ ಗಳಿಸಲಷ್ಟೇ ಸಕ್ತರಾದರು. ಆಗ ಪಾಂಟಿಂಗ್ ನಾಯಕತ್ವವನ್ನು ತ್ಯಜಿಸಿದರು.

ರಿಕ್ಕಿಯಿಂದ ತೆರವಾದ ಮುಂಬೈ ಇಂಡಿಯನ್ಸ್ ತಂಡದ ಸಾರಥ್ಯವನ್ನು ರೋಹಿತ್‍ಶರ್ಮಾ ವಹಿಸಿಕೊಂಡ ನಂತರ ಅದ್ಭುತ ಪ್ರದರ್ಶನ ನೀಡಿದ ಮುಂಬೈ ತಂಡವು ಆ ವರ್ಷ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದೇ ಅಲ್ಲದೆ ಮೂರು ಬಾರಿ ಐಪಿಎಲ್ ಪಟ್ಟವನ್ನು ಅಲಂಕರಿಸಿದೆ.

ಶಿಖರ್‍ಧವನ್ ಫ್ಲಾಪ್2014ರಲ್ಲಿ ಸನ್‍ರೈಸರ್ಸ್ ನಾಯಕತ್ವವನ್ನು ವಹಿಸಿಕೊಂಡಿದ್ದ ಗಬ್ಬರ್‍ಸಿಂಗ್ ಖ್ಯಾತಿಯ ಶಿಖರ್‍ಧವನ್ ಆ ಋತುವಿನಲ್ಲಿ ತಮ್ಮ ಬ್ಯಾಟಿಂಗ್‍ನಿಂದ ಆಡಿದ 10 ಪಂದ್ಯಗಳಲ್ಲಿ 215 ರನ್‍ಗಳನ್ನು ಸಿಡಿಸಿದರೂ ಕೂಡ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರಿಂದ ನಾಯಕತ್ವದಿಂದ ಕೆಳಗಿಳಿದರು. ನಂತರ ತಂಡದ ಸಾರಥ್ಯವನ್ನು ಕೆರಿಬಿಯನ್‍ನ ಡ್ಯಾರೇನ್ ಸೆಮಿ ವಹಿಸಿಕೊಂಡರೂ ಕೂಡ ಸನ್‍ರೈಸರ್ಸ್ ಪ್ಲೇಆಫ್‍ಗೇರುವಲ್ಲಿ ಎಡವಿತು.

ಎಡವಿದ ಗಂಭೀರ್:  ಡೆಲ್ಲಿಯ ಸ್ಫೋಟಕ ಆಟಗಾರ ಗೌತಮ್‍ಗಂಭೀರ್ 2012 ಹಾಗೂ 2014ರಲ್ಲಿ ತಾನು ಪ್ರತಿನಿಧಿಸಿದ ಕೋಲ್ಕತ್ತಾನೈಟ್‍ರೈಡರ್ಸ್ ತಂಡಕ್ಕೆ ಐಪಿಎಲ್ ಮುಕುಟವನ್ನು ತಂದುಕೊಟ್ಟರೂ ತಂಡದಿಂದ ಹೊರಬಿದ್ದ ನಂತರ 2018ರಲ್ಲಿ ಡೆಲ್ಲಿಡೇರ್‍ಡೆವಿಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡರು.

ಗೌತಮ್ ಗಂಭೀರ್ ನಾಯಕತ್ವದಲ್ಲಿ ಆಡಿದ ಮೊದಲ 6 ಪಂದ್ಯಗಳಲ್ಲಿ ಡೆಲ್ಲಿ 5 ಪಂದ್ಯಗಳಲ್ಲಿ ಸೋತಿದ್ದರಿಂದ ಗೌತಿಯನ್ನು ಕೆಳಗಿಳಿಸಿ ಯುವ ಆಟಗಾರ ಶ್ರೇಯಾಸ್ ಐಯ್ಯರ್‍ಗೆ ನಾಯಕನ ಜವಾಬ್ದಾರಿಯನ್ನು ವಹಿಸಲಾಯಿತು.

2015ರ ಐಪಿಎಲ್‍ನಲ್ಲಿ ಆಸ್ಟ್ರೇಲಿಯಾದ ಸ್ಟೀವ್‍ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ತ್ಯಜಿಸಿ ಶೇನ್ ವಾಟ್ಸನ್ ಹೆಗಲಿಗೆ ಆ ಜವಾಬ್ದಾರಿಯನ್ನು ವರಿಸಿದರೆ, 2016ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‍ನ ನಾಯಕತ್ವವನ್ನು ವಿಜಯ್‍ಮುರಳಿ ಕಳೆದುಕೊಳ್ಳಬೇಕಾಯಿತು. ನಂತರ ಆ ತಂಡವನ್ನು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮುನ್ನಡೆಸಿದರು.

2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಂತೆ ಕಳಪೆ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ವಹಿಸಿದ್ದ ಅಜೆಂಕ್ಯಾ ರಹಾನೆ ನಾಯಕತ್ವದಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಸೋಲು ಕಂಡಿದ್ದರಿಂದ ಈಗ ತಂಡದ ನಾಯಕರಾಗಿ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಆ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ರಹಾನೆ ನಿನ್ನೆಯ ಪಂದ್ಯದಲ್ಲಿ ಶತಕ ಗಳಿಸಿದ್ದನ್ನು ನೋಡಿದರೆ ಅವರಿಗೆ ನಾಯಕನ ಜವಾಬ್ದಾರಿಯೇ ಭಾರವಾಗಿತ್ತು ಎಂಬುದನ್ನು ತೋರಿಸುವಂತಿದೆ.

ಐಪಿಎಲ್‍ನಲ್ಲಿ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸಲು ಆಗದಿದ್ದರಿಂದಲೋ ತಮ್ಮ ನೈಜ ಆಟವನ್ನು ಪ್ರದರ್ಶಿಸದೆ ರಾಷ್ಟ್ರೀಯ ತಂಡಗಳಿಂದಲೂ ದೂರ ಸರಿಯುವಂತಾಗಿರುವುದು ಮಾತ್ರ ದುರದೃಷ್ಟ.

– ಜಯಪ್ರಕಾಶ್