ಶಿವಮೊಗ್ಗ,ಮಾ.13- ಒಂದು ವೇಳೆ ಹಾವೇರಿ ಗದಗ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದರೆ ಸದ್ಯದಲ್ಲೇ ಬೆಂಬಲಿಗರ ಕರೆದು ಸಭೆ ನಡೆಸಿ ಅವರಿಂದ ಅಭಿಪ್ರಾಯ ಪಡೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತವರು ಜಿಲ್ಲೆಯಲ್ಲಿ ಬಿಜೆಪಿ ಬಂಡಾಯದ ಬಾವುಟ ಜೋರಾಗಿದ್ದು, ಈಶ್ವರಪ್ಪ ಪುತ್ರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವದಂತಿಗಳು ದಟ್ಟವಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡಾಯ ಅಭ್ಯರ್ಥಿ ಆಗಿ ನಿಲ್ಲಲು ಬೆಂಬಲಿಗರಿಂದ ಒತ್ತಾಯವಿದೆ. ಅವರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆದುಕೊಂಡು ಮುಂಬರುವ ಚುನಾವಣೆಯಲ್ಲಿ ಸ್ರ್ಪಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಹೇಳಿದರು.
ಇದು ನನ್ನ ರಾಜಕೀಯ ಭವಿಷ್ಯ. ಇದು ರಾಜ್ಯದ ರಾಜಕೀಯದ ಭವಿಷ್ಯ. ಹಿತೈಷಿಗಳು ನನಗೆ ಅನ್ಯಾಯವಾಗಿದೆ ಎಂದು ರಾಜ್ಯದೆಲ್ಲಡೆ ಕರೆಬಂದಿದೆ ಎಂದರು. ಕಳೆದ ವಿಧಾನಸಭೆ ಚುನಾವಣೆ ಸಾಕಷ್ಟು ತಪ್ಪು ಆಗಿದೆ. ಈ ಹಿನ್ನಲೆಯಲ್ಲಿ ಸೋಲು ಆಗಿತ್ತು. ಅದನ್ನು ಸರಿಪಡಿಸಡೇಕಿದೆ. ಈ ನಿಟ್ಟಿನಲ್ಲಿ ಬೆಂಬಲಿಗರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅವರ ಅಭಿಪ್ರಾಯ ಕೇಳುತ್ತೇನೆ. ಬಳಿಕ ನಾನು ಸ್ಪರ್ಧೆ ಮಾಡಬೇಕೆ, ಬೇಡವೇ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.
ಹಾವೇರಿ ಗದಗ ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಲಿ ಸಂಸದ ಶಿವಕುಮಾರ ಉದಾಸಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆ ಬಳಿಕವಷ್ಟೇ ನಾನು ನನ್ನ ಪುತ್ರನೊಂದಿಗೆ ಹೋಗಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೇವೆ. ಅವರು ಹಾವೇರಿ ಗದಗ ಕ್ಷೇತ್ರದ ಟಿಕೆಟ್ ನೀಡುವುದಲ್ಲದೆ, ಅವರೇ ನನ್ನ ಮಗನ ಪರ ಪ್ರಚಾರ ಮಾಡಿ ಗೆಲ್ಲಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಪೌರತ್ವ ಕಾಯ್ದೆ ತಿದ್ದುಪಡಿ ಜಾರಿಗೆ ಕಾಂಗ್ರೆಸ್ ನಾಯಕರಿಂದ ಟೀಕೆ ಶುರುವಾಗಿದೆ. ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಇದ್ದ ಶೇ.20.5ರಷ್ಟು ಹಿಂದೂಗಳ ಸಂಖ್ಯೆ ಈಗ ಶೇ.1.9 ಇಳಿಕೆ ಆಗಿದೆ. ಪಾಕ್ನಲ್ಲಿರುವ ಹಿಂದೂಗಳ 18 ಕಡಿಮೆಯಾಗಲು ಕಾರಣವೇನು? ಇದರ ಬಗ್ಗೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದರು.
ಬಾಂಗ್ಲಾದೇಶದಲ್ಲಿ ಆಗ ಹಿಂದುಗಳ ಸಂಖ್ಯೆ ಶೇ.28ರಷ್ಟಿತ್ತು. ಈಗ ಶೇ.7.5 ಕಡಿಮೆಯಾಗಿದೆ. ಪೌರತ್ವ ಕಾಯ್ದೆ ತಿದ್ದುಪಡಿ ಎಲ್ಲರೂ ಸ್ವಾಗತ ಮಾಡಬೇಕಿತ್ತು. ಕೇವಲ ಮುಸ್ಲಿಮರ ಮತಕ್ಕಾಗಿ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಸಿಎಎ ಸಂವಿಧಾನ ಉಲ್ಲಂಘಿಸಿಲ್ಲ ಎಂದು ಕಾನೂನು ತಜ್ಞರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ರಾಷ್ಟ ದ್ರೋಹ ಮಾಡುವವರಿಗೆ ಕಾಂಗ್ರೆಸ್ ಬೆಂಬಲ. ನೀಡುತ್ತಿದೆ. ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾಕೆ ಜಾತಿ ಜನಗಣತಿ ಸಮೀಕ್ಷೆ ವಿಚಾರ ತೆಗೆದಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತದಾರರು ಇದಕ್ಕೆ ಸರಿಯಾದ ಉತ್ತರ ನೀಡುತ್ತಾರೆ ಎಂದರು.
ಸಿದ್ದರಾಮಯ್ಯನವರಿಗೆ 28 ಸ್ಥಾನಗಳನ್ನು ಎನ್ಡಿಎ ಮೈತ್ರಿಕೂಟ ಗೆಲ್ಲುತ್ತದೆ ಎಂಬ ಭಯ ಶುರುವಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಟೀಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.