Friday, May 24, 2024
Homeರಾಜಕೀಯಕರ್ನಾಟಕದಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆಯೇ ಎಂದೆನಿಸುತ್ತಿದೆ : ಪಿ.ರಾಜೀವ್

ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆಯೇ ಎಂದೆನಿಸುತ್ತಿದೆ : ಪಿ.ರಾಜೀವ್

ಬೆಂಗಳೂರು, ಏ.23- ರಾಜ್ಯದ ಸಿಎಂ, ಗೃಹ ಸಚಿವರ ಕೃಪಾಕಟಾಕ್ಷದಿಂದ ಇವತ್ತು ಕರ್ನಾಟಕವು ಕರಾಳ ದಿನಗಳನ್ನು ಎದುರಿಸಬೇಕಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಜೀವಂತ ಇದೆಯಾ ಎಂಬ ಸಂಶಯ ಎಲ್ಲರಲ್ಲಿ ಮನೆಮಾಡುತ್ತಿದೆ. ಕರ್ನಾಟಕದಲ್ಲಿ ಹೆಣ್ಮಕ್ಕಳು, ವಿದ್ಯಾರ್ಥಿಗಳ ಜೀವಕ್ಕೆ ಸುರಕ್ಷತೆ ಇಲ್ಲವಾಗಿದೆ. ದಲಿತರ ಮನೆಗೆ ನುಗ್ಗಿ ಪೊಷಕರ ಸಮ್ಮುಖದಲ್ಲೇ ಒಬ್ಬ ದಲಿತ ಯುವಕನನ್ನು ಮರ್ಮಾಂಗಕ್ಕೆ ಒದ್ದು, ಕತ್ತು ಹಿಸುಕಿ ಸಾಯಿಸುವ ಘಟನೆ ಈ ಕರ್ನಾಟಕದಲ್ಲಿ ನಡೆದಿದೆ ಎಂದರು.

ಯಾದಗಿರಿಯಲ್ಲಿ ಮೊನ್ನೆ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ರಾಕೇಶ್ ಅವರ ಹತ್ಯೆಯಾಗಿದೆ. ಆದರೆ, ನಿನ್ನೆ ಮಧ್ಯಾಹ್ನ 1 ಗಂಟೆಗೆ ಎಫ್ಐಆರ್ ದಾಖಲಾಗಿದೆ. ಕಾನೂನು- ಸುವ್ಯವಸ್ಥೆ ಈ ರಾಜ್ಯದಲ್ಲಿ ಜೀವಂತ ಇದೆಯೇ ಎಂದು ಪ್ರಶ್ನಿಸಿದರು.

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಚಿವ ಕೃಷ್ಣ ಬೈರೇಗೌಡರು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಇವತ್ತು ಕಾಂಗ್ರೆಸ್ ಸಚಿವರ- ಶಾಸಕರ ದಂಡು ವಿಧಾನಸೌಧದಲ್ಲಿ ಹೋರಾಟವನ್ನು ಮಾಡುತ್ತಿದೆ. ವಿಧಾನಸೌಧ ಪ್ರಜಾತಂತ್ರದ ಪ್ರತೀಕವೇ? ಕಾಂಗ್ರೆಸ್ಸಿನ ಕಾರ್ಯಾಲಯವೇ ಎಂದು ಕೇಳಿದರು.

ರಾಜ್ಯದಲ್ಲಿ ನಡೆದ ಮಹಿಳೆಯ ವಿವಸ್ತ್ರ ಪ್ರಕರಣ, ಸಾಮೂಹಿಕ ಅತ್ಯಾಚಾರ, ರಾಮೇಶ್ವರಂ ಕೆಫೆ
ಸ್ಪೋಟ, ಕುಕ್ಕರ್ ಬಾಂಬ್ ಸ್ಪೋಟ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಪ್ರಕರಣಗಳನ್ನು ನಾನು ನೆನಪಿಸಲು ಹೋಗುವುದಿಲ್ಲ. ಕರ್ನಾಟಕದಲ್ಲಿ ಕೇವಲ 3 ದಿನಗಳಲ್ಲಿ 8 ಕೊಲೆ ಪ್ರಕರಣಗಳು ನಡೆದಿವೆ. ಯಾಕೆ ಎಂದ ಅವರು, ರಾಜ್ಯದಲ್ಲಿ ಜನಪರ ಸರಕಾರ ಇದೆಯೇ ಅಥವಾ ತಾಲಿಬಾನ್ ಆಡಳಿತ ನಡೆಯುತ್ತಿದೆಯೇ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಯಾಕೆ ಎಂದು ಪ್ರಶ್ನಿಸಿದರು.

ಕರ್ನಾಟಕವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಾಗಿ ಅತ್ಯಂತ ಉನ್ನತ ಸ್ಥಿತಿಯಲ್ಲಿ, ದೇಶಕ್ಕೆ ಮಾದರಿ ರಾಜ್ಯವಾಗಿತ್ತು. ಭಿಕ್ಷೆ ಬೇಡುವ ಮುಖ್ಯಮಂತ್ರಿ, ಮೈ ಪರಚಿಕೊಳ್ಳುವ ಸಿಎಂ, ವಿಚಾರಣೆಗೆ ಮೊದಲೇ ತೀರ್ಪನ್ನು ನೀಡುವ ಗೃಹ ಸಚಿವ, ಪ್ರಕರಣದ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳದೆ ಉತ್ತರಿಸುವ ಪೊಲೀಸ್ ಸಚಿವರಿರುವುದು ರಾಜ್ಯದ ದುರ್ದೈವ ಎಂದು ನುಡಿದರು.

ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಭಯೋತ್ಪಾದನಾ ಕೃತ್ಯಗಳು ಜಾಸ್ತಿ ಆಗುತ್ತಿವೆ ಯಾಕೆ ಎಂದು ಕೇಳಿದ ಅವರು, ಪೊಲೀಸ್ ಠಾಣೆಯಲ್ಲಿ ನಮಗೆ ರಾಜಾತಿಥ್ಯ ಇದೆ ಎಂದು ಡಿ.ಕೆ.ಶಿವಕುಮಾರರ ಬ್ರದರ್ಸ್ಗೆ ಗೊತ್ತಾಗಿದೆ. ಈಗಿನ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ನಾವು ಯಾವುದೇ ಅಪರಾಧ ಮಾಡಿದರೂ ನಮ್ಮ ಮನೆಗೆ ಪೊಲೀಸ್ ರಕ್ಷಣೆ ಕೊಡುತ್ತಾರೆ.

ಅಮಾಯಕ ಯುವತಿಯನ್ನು ಕೊಲೆ ಮಾಡಿದರೆ ಪೊಲೀಸ್ ಠಾಣೆಯಲ್ಲಿ ನನಗೆ ರಾಜಾತಿಥ್ಯ ಕೊಟ್ಟು, ನನ್ನ ಮನೆಗೆ ರಕ್ಷಣೆ ನೀಡಲು ಕಾಂಗ್ರೆಸ್ ಸರಕಾರ ಸನ್ನದ್ಧವಾಗಿದೆ ಎಂಬ ಭಾವನೆಯಿಂದ ಇಂಥ ಕೃತ್ಯಗಳು ನಡೆಯುತ್ತಿವೆ ಎಂದು ಪಿ.ರಾಜೀವ್ ಆರೋಪಿಸಿದರು.ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.

RELATED ARTICLES

Latest News