ಪರ್ತ್, ನ.20- ಮುಂಬರುವ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ್ಪೂಜಾರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯದಿರುವುದು ಸಂತಸದ ಸಂಗತಿಯಾಗಿದೆ ಎಂದು ಆಸಯ್ಟ್ರೇಲಿಯಾದ ವೇಗಿ ಜಾಶ್ ಹೇಝಲ್ವುಡ್ ಹೇಳಿದ್ದಾರೆ.
ಐಸಿಸಿ ಆಯೋಜನೆಯ ಮೂರನೇ ಆವೃತ್ತಿಯ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಂತಕ್ಕೆ ತಲುಪಬೇಕಾದರೆ ಟೀಮ್ ಇಂಡಿಯಾ 4-0 ಅಂತರದಿಂದ ಗೆಲುವು ಸಾಧಿಸುವ ಒತ್ತಡಕ್ಕೆ ಸಿಲುಕಿದ್ದು, ನ.22ರಿಂದ ಪರ್ತ್ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
2014ರಲ್ಲಿ ಮೊದಲ ಬಾರಿ ಚೇತೇಶ್ವರ್ಪೂಜಾರ ಅವರು ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿ ಆಡಿದ್ದು ಟೀಮ್ ಇಂಡಿಯಾ ಸರಣಿ ಜಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
`ಟೆಸ್ಟ್ ಕ್ರಿಕೆಟ್ನಲ್ಲಿ ಒಬ್ಬ ಬ್ಯಾಟ್ಸ್ ಮನ್ ಕ್ರೀಸ್ಗೆ ಅಂಟಿಕೊಂಡು ಸುದೀರ್ಘ ಕಾಲದವರೆಗೆ ಬ್ಯಾಟಿಂಗ್ ಮಾಡುವ ಅನಿವಾರ್ಯತೆ ಇದೆ. ಇಂತಹ ಕೆಲಸವನ್ನು ಚೇತೇಶ್ವರ್ ಪೂಜಾರ ಹಲವು ಬಾರಿ ಮಾಡಿದ್ದಾರೆ. ಆದರೆ ಈ ಬಾರಿ ಆತ ತಂಡದಲ್ಲಿಲ್ಲ, ಅಲ್ಲದೆ ಟೀಮ್ ಇಂಡಿಯಾದಲ್ಲಿ ಅನುಭವಿ ಆಟಗಾರರಿಗಿಂತ ಯುವ ಆಟಗಾರರಾದ ಸಂಯೋಜನೆ ಹೆಚ್ಚಾಗಿರುವುದರಿಂದ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಹೇಝಲ್ವುಡ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ನೆಲದಲ್ಲಿ ಚೇತೇಶ್ವರ್ಪೂಜಾರ ಅಪ್ರತಿಮ ದಾಖಲೆ ಹೊಂದಿದ್ದು 11 ಪಂದ್ಯಗಳಿಂದ 5 ಅರ್ಧಶತಕ ಹಾಗೂ 3 ಶತಕಗಳ ನೆರವಿನಿಂದ47.28 ಸರಾಸರಿಯಲ್ಲಿ 993ರನ್ ಗಳಿಸಿರುವುದಲ್ಲದೆ, 2018-19ರ ಬಿಜಿಟಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.