ನವದೆಹಲಿ,ಏ.14- ಕಳೆದ 10 ವರ್ಷಗಳ ಬಿಜೆಪಿ ಸರ್ಕಾರದ ಸಾಧನೆಗಳಾದ ಸಂವಿಧಾನದ 370 ನೇ ವಿಧಿ ರದ್ದತಿ ಮತ್ತು ಮಹಿಳಾ ಮೀಸಲಾತಿ ಕಾನೂನ ಜಾರಿಯಿಂದಾಗಿ ಜನರು ಈ ಬಾರಿಯೂ ತಮ್ಮ ಪಕ್ಷಕ್ಕೆ ಬಹುಮತ ನೀಡಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳ ಸಾಧನೆಗಳು ಸ್ಪಷ್ಟ ಜನಾದೇಶದ ಫಲಿತಾಂಶವಾಗಿದೆ ಎಂದು ನಡ್ಡಾ ಅವರು ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಮಾರಂಭದಲ್ಲಿ ಹೇಳಿದರು.
ಗ್ರಾಮ ರಸ್ತೆ, ಶೌಚಾಲಯ ನಿರ್ಮಾಣ, 25 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೆಲವು ಸಾಧನೆಗಳೆಂದು ಅವರು ಪಟ್ಟಿ ಮಾಡಿದರು. ಇದೇ ಸಂದರ್ಭದಲ್ಲಿ ನಡ್ಡಾ ಅವರು 2029 ರಲ್ಲಿ 33 ರಷ್ಟು ಲೋಕಸಭಾ ಸದಸ್ಯರು ಮಹಿಳೆಯರಾಗಿರುತ್ತಾರೆ ಎನ್ನುವುದನ್ನುಯಾರು ಮರೆಯುವುದಿಲ್ಲ ಎಂದಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಸಾಮಾಜಿಕ ನ್ಯಾಯದ ಆದರ್ಶಗಳನ್ನು ಬಿಜೆಪಿ ಪಾಲಿಸಿದ್ದು, ಅವರ ಜನ್ಮ ದಿನಾಚರಣೆಯಂದು ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದರು.