Saturday, July 27, 2024
Homeರಾಜ್ಯಇಂದು ನೇಹ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ಹೇಳಲಿದ್ದಾರೆ ನಡ್ಡಾ

ಇಂದು ನೇಹ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ಹೇಳಲಿದ್ದಾರೆ ನಡ್ಡಾ

ಬೆಂಗಳೂರು,ಏ.21-ರಾಜ್ಯಾದ್ಯಂತ ಭಾರೀ ವಿವಾದದ ಬಿರುಗಾಳಿಯನ್ನು ಸೃಷ್ಟಿಸಿರುವ ಹುಬ್ಬಳ್ಳಿ-ಬಿ.ವಿ.ಬಿ ಕಾಲೇಜಿನ ವಿದ್ಯಾರ್ಥಿನಿ ನೇಹ ಹತ್ಯೆ ಪ್ರಕರಣ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವಾನ ಹೇಳಲಿದ್ದಾರೆ. ಪಕ್ಷದ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಧ್ಯಾಹ್ನ ಹುಬ್ಬಳ್ಳಿಗೆ ಆಗಮಿಸಲಿರುವ ನಡ್ಡಾ ಅವರು ಹುಬ್ಬಳ್ಳಿಯಲ್ಲಿರುವ ನೇಹ ಅವರ ತಂದೆ ಹಿರೇಮಠ ಅವರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ತೆಂಗಿನಕಾಯಿ ಸೇರಿದಂತೆ ಮತ್ತಿತರರು ನಡ್ಡಾ ಅವರಿಗೆ ಸಾಥ್ ನೀಡಲಿದ್ದಾರೆ. ಇನ್ನೊಂದು ಮೂಲದ ಪ್ರಕಾರ ನೇಹ ಅವರ ಪೋಷಕರನ್ನು ನಿವಾಸದಲ್ಲಿ ಭೇಟಿಯಾಗಲು ಸಾಧ್ಯವಾಗಿದ್ದರೆ ನಡ್ಡಾ ಅವರು ತಂಗುವ ಬೆನಿಸಲ್ ಹೋಟೆಲ್‍ಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ.

ಒಂದು ಕಡೆ ನೇಹ ಹತ್ಯೆ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ವೈಯಕ್ತಿಕ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.ಆದರೆ ನೇಹಾಳ ಪೋಷಕರು ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದು, ಇದೊಂದು ಪೂರ್ವ ನಿಯೋಜಿತ ಮತ್ತು ಲವ್ ಜಿಹಾದ್ ಎಂದು ಆರೋಪಿಸುತ್ತಿದ್ದಾರೆ. ಇದೀಗ ನಡ್ಡಾ ಅವರು ಭೇಟಿ ಕೊಡುತ್ತಿರುವುದು ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.

ಭೇಟಿ ವಿವರ:
ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಜೆ.ಪಿ.ನಡ್ಡಾ ವಿವಿಧ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದ್ದು, ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆವರೆಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 3 ಗಂಟೆಗೆ ಹುಬ್ಬಳ್ಳಿಯ ಡೆನಿಸನ್ ಹೋಟೆಲ್‍ಲ್ಲಿ ವಿವಿಧ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.

ವಿದ್ಯಾನಗರದ ಸಾಖರೆ ಶಾಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿರುವ ಅವರು, ಪ್ರಹ್ಲಾದ್ ಜೋಶಿ ಪರ ಮತಯಾಚನೆ ಮಾಡಲಿದ್ದು, ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದ ನಂತರ ರಾತ್ರಿ 9 ಗಂಟೆಗೆ ಡೆನಿಸನ್ ಹೋಟೆಲ್‍ನಲ್ಲಿ ಕೋರ್ ಕಮೀಟಿ ಸಭೆ ನಡೆಸಲಿದ್ದಾರೆ.

RELATED ARTICLES

Latest News