ಬೆಂಗಳೂರು, ಅ.30- ಅರವತ್ತೆಂಟನೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ನಿರ್ಮಾಪಕ ಸಂದೇಶ್ ನಾಗರಾಜ್ ಸೇರಿದಂತೆ ಹಲವು ಮಂದಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗುವ ಸಾಧ್ಯತೆ ಇದೆ.
ಕಳೆದ 15 ದಿನಗಳಿಂದಲೂ ನಿರಂತರವಾಗಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಅಥವಾ ನಾಳೆ ಪ್ರಶಸ್ತಿ ಪ್ರಕಟಗೊಳ್ಳಲಿದೆ. 68ನೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ 68 ಮಂದಿ ಸಾಧಕರು ಹಾಗೂ 10 ಮಂದಿ ಪ್ರಮುಖ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡುವ ಸಾಧ್ಯತೆಗಳಿವೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲಿಸಬೇಕಾದ ಮಾನದಂಡಗಳ ಕುರಿತು ಸಮಾಲೋಚನೆ ನಡೆದಿತ್ತು. ಅದರಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ಅನಂತರ ಆಯ್ಕೆ ಸಮಿತಿ ಸರಣಿ ಸಭೆಗಳನ್ನು ನಡೆಸಿದ್ದು, ಸಾಧಕರ ಆಯ್ಕೆಯನ್ನು ತುಲನಾತ್ಮಕವಾಗಿ ಪರಿಶೀಲಿಸಿದೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೂ ಆಗಿರುವ ಸಂತೋಷ್ ಹೆಗಡೆ ಅವರು ಲೋಕಾಯುಕ್ತರಾಗಿದ್ದಾಗ ಉತ್ತಮ ಕೆಲಸಗಳ ಮೂಲಕ ಜನಮನ್ನಣೆ ಪಡೆದಿದ್ದರು. ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರ ಮಿಂಚಿನ ದಾಳಿ
ಮೂಲಗಳ ಪ್ರಕಾರ, ಸಾಹಿತ್ಯದಲ್ಲಿ ಕರಿಗೌಡ ಬೀಚನಹಳ್ಳಿ , ಪತ್ರಿಕೋದ್ಯಮದಲ್ಲಿ ದಿನೇಶ್ ಅಮೀನ್‍ಮಟ್ಟು, ಮಾಯಾಶರ್ಮ, ರಂಗಭೂಮಿಯಲ್ಲಿ ಕೆ.ವಿ.ನಾಗರಾಜ್‍ಮೂರ್ತಿ, ಗಂಗಾಧರಸ್ವಾಮಿ, ಚಿದಂಬರ ಜಂಬೆ, ಶೇಕ್ ಮಾಸ್ಟರ್, ಸುಜಾತಮ್ಮ, ಜಾನಪದದಲ್ಲಿ ಚಂದ್ರು ಕಾಳೇನಹಳ್ಳಿ, ಚಲನಚಿತ್ರ ಕ್ಷೇತ್ರದಿಂದ ನಿರ್ಮಾಪಕ ಸಂದೇಶ್ ನಾಗರಾಜ್, ಜಾನಪದದಲ್ಲಿ ಸೋಬಾನೆ ರಾಮಣ್ಣ, ಹುಸೇನಾಬಿ ಬುಡನ್‍ಸಾಬ್, ತಿಮ್ಮಣ್ಣ ರಾಮವಾಡಗಿ,
ಸಿರಿಗಂಧ ಶ್ರೀನಿವಾಸಮೂರ್ತಿ, ಕಿರುತೆರೆಯಲ್ಲಿ ಹುಲಿ ಚಂದ್ರಶೇಖರ್, ಬಯಲಾಟದ ನಾರಾಯಣಪ್ಪ, ಕಲಾ ವಿಮರ್ಶೆಯಲ್ಲಿ ಜಿ.ಎಂ.ಹೆಗಡೆ, ಚಿತ್ರಕಲೆಯಲ್ಲಿ ಮಾರ್ಥಾ ಜಾಕಿ ಮಾರ್ವಿಚ್, ಚಿತ್ರಕಲೆಯಲ್ಲಿ ಎಚ್.ಸಿ.ಪಾಟೀಲ್, ಕಾಳಪ್ಪ ವಿಶ್ವಕರ್ಮ, ಜನಪದದಲ್ಲಿ ಸಿದ್ಧರಾಮಪ್ಪ ವಾಲಿ, ವಿಭೂತಿ ಗುಂಡಪ್ಪ ಸೇರಿದಂತೆ ಹಲವರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.