Friday, December 1, 2023
Homeರಾಜ್ಯಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ : ಗಣ್ಯರಿಂದ ಶುಭಾಶಯ

ಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ : ಗಣ್ಯರಿಂದ ಶುಭಾಶಯ

ಬೆಂಗಳೂರು,ನ.1- ಕನ್ನಡ ಭಾಷಿಕರು, ಪ್ರದೇಶ ಏಕೀಕರಣವಾದ ರಾಜ್ಯೋತ್ಸವ ಸಡಗರ ಹಾಗೂ ಕರ್ನಾಟಕ ಎಂಬ ಮರು ನಾಮಕರಣವಾಗಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸುವರ್ಣ ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದೆ.

ಕನ್ನಡಿಗರ ಅಸ್ತಿತ್ವ ಮತ್ತು ಆಸ್ಮಿತೆಯ ಸಂಕೇತವಾಗಿರುವ ಹಳದಿ-ಕೆಂಪು ಬಾವುಟ ಇಂದು ರಾಜ್ಯದೆಲ್ಲೆಡೆ ಹಾರಾಡುತ್ತಿದ್ದು, ಎಲ್ಲೆಡೆ ಕನ್ನಡ ಡಿಂಡಿಮ ಮೊಳಗಲಿದೆ. ಈ ಸುದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಗಣ್ಯರು ಸಾಮಾಜಿಕ ಜಾಲತಾಣ ಮೂಲಕ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.

ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದಿರುವ ಸಿಎಂ ಸಿದ್ದರಾಮಯ್ಯ, ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

1973ರ ನವೆಂಬರ್ 1ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ 50 ವಸಂತಗಳು ಸಂದಿವೆ. ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡ ಭಾಷೆಯಷ್ಟೇ ಸೀಮಿತ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಲಿ, ಈ ದಿನ ಕನ್ನಡಿಗರ ಪಾಲಿನ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದಿದ್ದಾರೆ.
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷ ಪೂರೈಸಿದ್ದು, ಕನ್ನಡದ ಅಸ್ಮಿತೆಯ ಉಳಿವಿಗಾಗಿ ಹಾಗೂ ಕನ್ನಡಿಗರ ಏಳಿಗೆಗಾಗಿ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಹೀಗೆ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶುಭಕೋರಿದರು.

ನಾಡಿನ ಹಾಗೂ ಜಗತ್ತಿನೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಬಂಧುಗಳಿಗೆ 68ನೇ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆಯೇ, ಕರ್ನಾಟಕವೆಂದು ಹೆಸರಾಗಿ ಇಂದಿಗೆ 50 ವರ್ಷ. ಸಾಧಿಸಿದ್ದು ಸಾಕಷ್ಟು, ಸಾಧಿಸಬೇಕಾದದ್ದು ಬಹಳಷ್ಟು. ಕನಸು ನನಸುಗಳ ಈ ಮಹಾಯಾನದಲ್ಲಿ ಸಾರ್ಥಕ ಹೆಜ್ಜೆ ಇಡುತ್ತಾ ಕನ್ನಡಾಂಬೆಯ ಕೀರ್ತಿ ಪತಾಕೆ ಯನ್ನು ಮುಗಿಲೆತ್ತರಕ್ಕೆ ಹಾರೈಸೋಣ. ಪ್ರತಿ ಹೊಸಿಲಿನಲ್ಲಿಯೂ ಕನ್ನಡದ ನಂದಾದೀಪ ಬೆಳಗಲಿ, ಆ ಹೊನಲು ಜಗವೆಲ್ಲಾ ತುಂಬಿ ಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.

ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಸೀಮಿತವಾಗದಿರಲಿ : ಡಿಸಿಎಂ

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ನಾಡಿನ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರ ಸಂಸ್ಮರಣೆಗಳ ಜೊತೆಗೆ ಕನ್ನಡ ಉಳಿಸುವ, ಬೆಳೆಸುವ ದೃಢಸಂಕಲ್ಪ ಸದಾ ನಮ್ಮದಾಗಿರಲಿ. ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಅಭಿಮಾನಪೂರ್ವಕ ಶುಭಾಶಯಗಳು ಎಂದು ಶುಭಾಶಯ ಕೋರಿದ್ದಾರೆ.

ವಿಶ್ವದ ಸಮಸ್ತ ಕನ್ನಡಿಗರಿಗೆ 68ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಜೈ ಕರ್ನಾಟಕ..! ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು. ಜಗದಗಲ ಹಬ್ಬಲಿ ಕರ್ನಾಟಕ ಸಂಭ್ರಮ, ಮೊಳಗಲಿ ಕನ್ನಡ ಡಿಂಡಿಮ. ವಿಶ್ವದಾದ್ಯಂತ ನೆಲೆಸಿರುವ ಸಮಸ್ತ ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

RELATED ARTICLES

Latest News