ಬೆಂಗಳೂರು,ನ.4- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ನ್ನಾಗಿ ತಮ್ಮ ಅವಧಿ ನವೆಂಬರ್ 24ಕ್ಕೆ ಮುಗಿಯಲಿದೆ. ಅದಕ್ಕೂ ಮೊದಲೇ ಸರ್ಕಾರಕ್ಕೆ ಹಿಂದಿನ ಕಾಂತರಾಜು ಆಯೋಗದ ವರದಿಯನ್ನು ಸಲ್ಲಿಸುವು ದಾಗಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂತರಾಜು ವರದಿಯ ಕುರಿತು ಕೇಳಿ ಬರುತ್ತಿರುವ ಆಕ್ಷೇಪಗಳ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು. ಹಿಂದೆ ಸಮೀಕ್ಷೆ ನಡೆಸಲಾಗಿದೆ. ಶಿಕ್ಷಕರು ದತ್ತಾಂಶ ಸಂಗ್ರಹಿಸಿದ್ದಾರೆ. ಅದನ್ನೂ ಕ್ರೋಢಿಕರಿಸಿ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸಮೀಕ್ಷೆ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳು ನಮಗೆ ಅದನ್ನೂ ಕ್ರೋಢಿಕರಿಸಲು ಅಡ್ಡಿ ಪಡಿಸುವುದಿಲ್ಲ ಎಂದರು.
ಕಾಂತರಾಜು ಆಯೋಗ ಸಂಗ್ರಹಿಸಿದ ಮಾಹಿತಿ ಅಸ್ಪಷ್ಟವಾಗಿದ್ದು, ಅವೈಜ್ಞಾನಿಕವಾಗಿದೆ ಎಂದು ಬಹಳಷ್ಟು ಟೀಕೆಗಳು ಕೇಳಿ ಬರುತ್ತಿವೆ. ಆದರೆ ಅದು ನಮಗೆ ಸಂಬಂಧಿಸಿದ್ದಲ್ಲ. ನಾವು ಸರ್ಕಾರಕ್ಕೆ ವರದಿ ನೀಡುತ್ತೇವೆ. ಅದರ ಬಳಿಕ ವರದಿ ವೈಜ್ಞಾನಿಕವೋ, ಅವೈಜ್ಞಾನಿಕವೋ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ. ಟೀಕೆ ಮಾಡುವವರು ಯಾವ ಆಧಾರದ ಮೇಲೆ ಅದು ಅವೈಜ್ಞಾನಿಕ ಎಂದು ಹೇಳುತ್ತಿದ್ದಾರೋ ಗೋತ್ತಿಲ್ಲ ಎಂದರು.
ದೆಹಲಿಗೆ ಹೊಂದಿಕೊಂಡ ಹಲವು ನಗರಗಳಲ್ಲಿ ಕಂಪಿಸಿದ ಭೂಮಿ
ಹಿಂದೆ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಗೆ ಆಯೋಗದ ಕಾರ್ಯದರ್ಶಿ ಸಹಿ ಹಾಕಿರಲಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಮುಂದೆ ನಾವು ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಯಾರ ಸಹಿ ಇರಲಿದೆ, ಇರುವುದಿಲ್ಲ ಎಂದು ಬೇರೆಯವರು ಈಗಲೇ ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.
ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸದೆ ನಾವು ನಮ್ಮ ಕೆಲಸ ಮಾಡುತ್ತೇವೆ. ವರದಿಯನ್ನು ಸರ್ಕಾರಕ್ಕೆ ನೀಡುತ್ತೇವೆ. ಅದನ್ನು ನೋಡಿ ಅಂತಿಮ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಮರು ಗಣತಿ ನಡೆಸುವುದು ಸೇರಿದಂತೆ ಎಲ್ಲಲ್ಲಾ ರೀತಿಯ ನಿರ್ಧಾರಗಳನ್ನು ಸರ್ಕಾರವೇ ತೆಗೆದುಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.