Friday, April 19, 2024
Homeರಾಜ್ಯಕರವೇ ಕಾರ್ಯಕರ್ತರ ಬಂಧನ ಸರ್ಕಾರದ ಆತುರದ ನಿರ್ಧಾರ : ದೊಡ್ಡರಂಗೇಗೌಡ

ಕರವೇ ಕಾರ್ಯಕರ್ತರ ಬಂಧನ ಸರ್ಕಾರದ ಆತುರದ ನಿರ್ಧಾರ : ದೊಡ್ಡರಂಗೇಗೌಡ

ಬೆಂಗಳೂರು,ಡಿ.29- ಕನ್ನಡ ರಕ್ಷಣಾ ವೇದಿಕೆಯ ಹೋರಾಟಗಾರರನ್ನು ಬಂಧಿಸಿರುವುದನ್ನು ವಿರೋಧಿಸಿ ನಗರದಲ್ಲಿಂದು ನಡೆದ ಸಭೆಯಲ್ಲಿ ಖಂಡನಾ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹಾಗೂ ಇತರರನ್ನು ಬಂಧಿಸಿರುವುದನ್ನು ಖಂಡಿಸಿ ಕರವೇಯ ಮತ್ತೊಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಖಂಡನಾ ಸಭೆ ನಡೆಯಿತು.ಸಹಜ ಭಿನ್ನಾಭಿಪ್ರಾಯಗಳ ನಡುವೆಯೂ ಸಹಜ ನಾಡು-ನುಡಿಯ ವಿಷಯವಾಗಿ ಹೋರಾಟ ಮಾಡುವವರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ನಾಯಕರು ಘೋಷಿಸಿದರು.

ಸಾಹಿತಿ ದೊಡ್ಡರಂಗೇಗೌಡ ಅವರು ಸಿದ್ದರಾಮಯ್ಯ ಅವರ ಸರ್ಕಾರ ನಾರಾಯಣಗೌಡ ಅವರನ್ನು ಬಂಧಿಸಿರುವುದು ಸಮರ್ಥನೀಯವಲ್ಲ. ಇದು ಆತುರದ ಕ್ರಮ ಎಂದು ಖಂಡಿಸಿದರು. ನಾಡು-ನುಡಿಗೆ ಧಕ್ಕೆಯಾಗುವಾಗ ಕನ್ನಡಪರ ಸಂಘಟನೆಯ ಎಲ್ಲಾ ಬಣಗಳೂ ಹೋರಾಟ ನಡೆಸಬೇಕಾಗಿದೆ. ಹೋರಾಟ ನಡೆಸುವವರನ್ನು ಜೈಲಿಗೆ ಕಳುಹಿಸಿದರೆ ಕನ್ನಡಿಗರ ಸಿಟ್ಟು ಸ್ಪೋಟಗೊಳ್ಳುತ್ತದೆ. ಇಲ್ಲಿ ಕನ್ನಡಿಗರು ಜಗಳಕ್ಕೆ ಹೋಗಿಲ್ಲ, ಸರ್ಕಾರವೇ ಜಗಳ ಆರಂಭಿಸಿದೆ.

ಎಲ್ಲಾ ಕಾಲದಲ್ಲೂ ಲಾಠಿ ಪ್ರಯೋಗ ಸಹಿಸಲು ಸಾಧ್ಯವಿಲ್ಲ. ಪ್ರತಿಭಟನೆ ನಮ್ಮ ಹಕ್ಕು, ಅನ್ಯಾಯವಾದಾಗ ನಾವು ವಿರೋಧಿಸುತ್ತೇವೆ, ಎಲ್ಲವೂ ಸುಸೂತ್ರವಾಗಿದ್ದರೆ ನಾವು ಪ್ರತಿಭಟನೆ ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ. ಮುಗ್ಧ ಕನ್ನಡಿಗರ ಮೇಲೆ ದೌರ್ಜನ್ಯವಾಗಿದೆ. ಇದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದರು.

ಪ್ರವೀಣ್ ಶೆಟ್ಟಿ ಮಾತನಾಡಿ, ಅಮಾಯಕ ಹೋರಾಟಗಾರರನ್ನು ಜೈಲಿಗೆ ಕಳುಹಿಸಲಾಗಿದೆ. ಖಂಡನಾ ನಿರ್ಣಯ ಸಭೆ ನಡೆಸಲು ನಮಗೆ ಜಾಗವನ್ನೇ ಕೊಡದೆ ತೊಂದರೆ ಮಾಡುವ ಪ್ರಯತ್ನಗಳಾದವು. ಕೊನೆಗೆ ಬ್ಯಾಡ್ಮಿಂಟನ್ ಸಭಾಂಗಣದಲ್ಲಿ ಸಭೆ ನಡೆಸಲು ಅವಕಾಶ ಸಿಕ್ಕಿದೆ ಎಂದರು.

‘ಮೋದಿ ಮತ್ತೆ ಬರಲಿದ್ದಾರೆ’ ಎಂಬ ಘೋಷ ವಾಕ್ಯದೊಂದಿಗೆ ಅಖಾಡಕ್ಕೆ ಧುಮುಕಿದ ಬಿಜೆಪಿ

ನಮ್ಮಲ್ಲಿ ಸಾವಿರಾರು ಭಿನ್ನಾಭಿಪ್ರಾಯಗಳಿರಬಹುದು, ಆದರೆ ಕನ್ನಡ ವಿಷಯ ಬಂದಾಗ ನಾವೆಲ್ಲ ಒಂದೇ. ಹೋರಾಟಗಾರರಿಗೂ ವೈಯಕ್ತಿಕ ಬದುಕುಗಳಿವೆ, ಆರೋಗ್ಯದ ಸಮಸ್ಯೆಗಳಿವೆ. ಹೋರಾಟ ಮಾಡುವುದು ನಮ್ಮ ವೈಯಕ್ತಿಕ ಸಮಸ್ಯೆಗಾಗಿ ಅಲ್ಲ, ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.

ಕನ್ನಡವನ್ನು ಮೊದಲಿನಿಂದಲೂ ನಿರ್ಲಕ್ಷ್ಯ ಮಾಡಲಾಗಿದೆ. ಶೇ.60 ರಷ್ಟು ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂದು ಹೋರಾಟ ಮಾಡಿದವರ ಮೇಲೆ ವಿವಿಧ ಸೆಕ್ಷನ್‍ಗಳಡಿ ಕೇಸು ದಾಖಲಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ಮಾಡಿದ ತಪ್ಪನ್ನು ಸರ್ಕಾರ ಸಮರ್ಥಿಸಿಕೊಳ್ಳಬಾರದು. ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸಾ.ರಾ.ಗೋವಿಂದು ಮಾತನಾಡಿ, ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿದರು. ಕನ್ನಡಕ್ಕೆ ಗೋಕಾಕ್ ಚಳುವಳಿಯಿಂದ ಆರಂಭಿಸಿ ಹೋರಾಟದ ದೊಡ್ಡ ಪರಂಪರೆಯೇ ಇದೆ. ಹೆದರಿಕೆ, ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದರು. ಸಾಹಿತಿ ಹಂ.ಪ.ನಾಗರಾಜಯ್ಯ ಸೇರಿದಂತೆ ಅನೇಕರು ಖಂಡನಾ ನಿರ್ಣಯದಲ್ಲಿ ಭಾಗವಹಿಸಿದ್ದರು.

RELATED ARTICLES

Latest News