Friday, November 22, 2024
Homeರಾಜ್ಯನಾಳೆಯಿಂದ ಮತ್ತಷ್ಟು ರಂಗೇರಲಿದೆ ಬೆಳಗಾವಿ ಅಧಿವೇಶನ

ನಾಳೆಯಿಂದ ಮತ್ತಷ್ಟು ರಂಗೇರಲಿದೆ ಬೆಳಗಾವಿ ಅಧಿವೇಶನ

ಬೆಂಗಳೂರು,ಡಿ.10- ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಮರು ಆರಂಭಗೊಳ್ಳುತ್ತಿರುವ ಅಧಿವೇಶನ ಮತ್ತಷ್ಟು ಕಾವೇರಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗುವ ಸಾಧ್ಯತೆ ಇದೆ. ಡಿ.4ರಿಂದ 8ರವರೆಗೆ ನಡೆದ ಮೊದಲ ವಾರದ ಅವೇಶನ ಅಷ್ಟೇನೂ ಬಲಪ್ರದವಾಗಿಲ್ಲ. ಮೊದಲ ದಿನ ಸಂತಾಪದ ನಂತರ ಸರಳ ಕಾರ್ಯಕಲಾಪಗಳು ನಡೆದಿವೆ.

ಪ್ರಶ್ನೋತ್ತರ, ಶೂನ್ಯವೇಳೆಗಳು ಎಂದಿನಂತೆ ನಡೆದರೆ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಬುಧವಾರದಿಂದ ಚರ್ಚೆ ಶುರುವಾಗಿದೆ. ಸುಮಾರು 20ಕ್ಕೂ ಹೆಚ್ಚು ಶಾಸಕರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಸೋಮವಾರ ಸರ್ಕಾರದ ವತಿಯಿಂದ ಬರ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳು ಉತ್ತರಿಸಲಿದ್ದಾರೆ. ಅದರ ನಂತರ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ಆರಂಭವಾಗುವ ನಿರೀಕ್ಷೆಯಿದೆ.

ವಾರಾಂತ್ಯದ ಕೊನೆಯ ದಿನ ಮೂರು ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಲು ಸರ್ಕಾರ ಮುಂದಾಗಿತ್ತು. ಆದರೆ ವಿರೋಧ ಪಕ್ಷದ ನಾಯಕರು ಅದಕ್ಕೆ ಅಡ್ಡಿಪಡಿಸಿದರು. ಸೋಮವಾರ ವಿಧೇಯಕಗಳ ಅಂಗೀಕಾರಕ್ಕೆ ಸಹಕರಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕರು ಭರವಸೆ ನೀಡಿದ್ದಾರೆ. ಮೊದಲ ವಾರದ ಕಲಾಪದಲ್ಲಿ ಪ್ರಮುಖವಾಗಿ ಚರ್ಚೆಯಾದ ಎರಡು ವಿಚಾರಗಳೆಂದರೆ ಹುಬ್ಬಳ್ಳಿಯ ಮೌಲ್ವಿಗಳ ಸಮಾವೇಶದಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಮಂಗಳವಾರ ಇಡೀ ದಿನ ಇದೇ ವಿಚಾರವಾಗಿಯೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಗಳು ನಡೆದಿತ್ತು. ಆನಂತರ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರಾದ ಪೃಥ್ವಿ ಸಿಂಗ್ ಮೇಲೆ ನಡೆದ ಹಲ್ಲೆ ಹಾಗೂ ಮತ್ತೊಬ್ಬ ನಗರಸೇವಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ವಿರುದ್ದ ಬಿಜೆಪಿ ಆಕ್ರೋಶಭರಿತ ವಾಗ್ದಾಳಿ ನಡೆಸಿತು. ಇಡೀ ದಿನ ಇದೇ ವಿಚಾರವಾಗಿ ಕಲಾಪ ವ್ಯರ್ಥವಾಯಿತು. ಮೊದಲ ದಿನ ಸಂತಾಪಕ್ಕೆ ಸಮಯ ಮೀಸಲಾದರೆ ಮತೆರಡು ದಿನ ರಾಜಕೀಯ ಅಜೆಂಡಾಗಳಿಗೆ ಅಮೂಲ್ಯ ಸಮಯ ಕಳೆದು ಹೋಯಿತು. ಉಳಿದೆರಡು ದಿನಗಳಲ್ಲಿ ಬರದ ಕುರಿತು ಚರ್ಚೆಗಳಾಗಿವೆ.

ಈ ನಡುವೆ ತೆಂಗು ಮತ್ತು ಕೊಬ್ಬರಿ ಬೆಲೆ ಕುಸಿತದ ಬಗ್ಗೆಯೂ ಚರ್ಚೆಯಾಯಿತು. ಆದರೆ ಮೊದಲು ಯಾರು ಚರ್ಚೆ ಮಾಡಬೇಕು ಎಂಬ ವಿಚಾರವೇ ಎರಡುಮೂರು ಗಂಟೆಗಳ ಕಾಲಹರಣಕ್ಕೆ ಕಾರಣವಾಯಿತು. ಬರದ ಮೇಲಿನ ಚರ್ಚೆಯಲ್ಲಿ ಕೆಲವು ಶಾಸಕರು ಅಮೂಲ್ಯ ಸಲಹೆಸೂಚನೆಗಳು ನೀಡಿದ್ದರು. ಆದರೆ ಬಹುತೇಕರು ಚರ್ಚೆಯಲ್ಲಿ ಕಾಟಾಚಾರಕ್ಕೆ ಎಂಬಂತೆ ಭಾಗವಹಿಸಿದ್ದರು.

ಹೇಳಿದ್ದೇ ಹೇಳುವುದು, ಅನಗತ್ಯವಾದ ವಿಷಯಗಳನ್ನು ಪ್ರಸ್ತಾಪಿಸುವುದು ಕಂಡುಬಂತು. ಈ ನಡುವೆ ಪ್ರಮುಖ ವಿರೋಧ ಪಕ್ಷದವಾದ ಬಿಜೆಪಿಯಲ್ಲಿನ ಒಡಕುಗಳು ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದವು. ಕಾಂಗ್ರೆಸ್ ವಿರುದ್ಧ ಹೋರಾಟ ಎಂಬ ಸಂದರ್ಭ ಬಂದರೆ ಬಿಜೆಪಿಯ ಎಲ್ಲ ಶಾಸಕರು ಎದ್ದು ನಿಂತು ಅಬ್ಬರಿಸುವುದು ಸಾಮಾನ್ಯ. ಆದರೆ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯ ವಿಷಯವಾಗಿ ಸುದೀರ್ಘ ಚರ್ಚೆಗಳಾಗಿದ್ದು, ಸರ್ಕಾರದ ಪರವಾಗಿ ಉತ್ತರಿಸಿದ್ದ ಗೃಹ ಸಚಿವ ಪರಮೇಶ್ವರ್, ತನಿಖೆ ಪ್ರಗತಿಯಲ್ಲಿದೆ. ಅದರ ವರದಿ ಬಂದನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಬಂಸಬೇಕೆಂಬ ಬಿಜೆಪಿಯ ಬೇಡಿಕೆಗೆ ಸರ್ಕಾರ ಸೊಪ್ಪು ಹಾಕಲಿಲ್ಲ. ಈ ವಿಚಾರವಾಗಿ ಬಿಜೆಪಿಯ ಒಂದು ಬಣ ಧರಣಿ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕುಬೇಕು ಎಂಬ ನಿಲುವು ಹೊಂದಿತ್ತು. ಆದರೆ ಉತ್ತರ ಕರ್ನಾಟಕ ಭಾಗದ ಚರ್ಚೆಗಳಿಗೆ ಬೆಳಗಾವಿಯ ಅಧಿವೇಶನದಲ್ಲಿ ಆದ್ಯತೆ ದೊರೆಯಬೇಕು. ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಮುಖ್ಯವಾಗಿಟ್ಟುಕೊಂಡು ಧರಣಿ ನಡೆಸಿ ಸಮಯ ವ್ಯರ್ಥ ಮಾಡುವುದಾದರೆ ತಾವು ಬಿಜೆಪಿ ನಾಯಕರ ವಿರುದ್ಧವೇ ಹೋರಾಟ ನಡೆಸುವುದಾಗಿ ಅದೇ ಪಕ್ಷದ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಭಾರತ-ಪ್ಯಾಲೇಸ್ತೀನ್‍ ದೀರ್ಘಕಾಲದ ಸಂಬಂಧ ಮುಂದುವರೆಯಲಿದೆ : ಜೈಶಂಕರ್

ಇದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಪೀಕಲಾಟಕ್ಕೆ ತಂದಿಟ್ಟಿತ್ತು. ಬಿಜೆಪಿಯ ಒಂದು ಬಣದ ನಿರ್ಧಾರದ ಪ್ರಕಾರ ಕಾಂಗ್ರೆಸ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಬಂಸುವಂತೆ ಒತ್ತಡ ಹೇರಿ ಧರಣಿ ಮಾಡಬೇಕಿತ್ತು. ಧರಣಿ ಮಾಡಿದರೆ ಯತ್ನಾಳ್ ಅವರು ಪಕ್ಷದ ನಾಯಕರ ವಿರುದ್ಧ ಹೋರಾಟಕ್ಕಿಳಿದಿರೆ ಸದನದಲ್ಲಿ ಬಿಜೆಪಿಯಲ್ಲಿ ನಗೆಪಾಟಲಿಗೆ ಈಡಾಗುತ್ತದೆ ಎಂಬ ಗೊಂದಲದಿಂದಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ವಿಪಕ್ಷ ನಾಯಕ ಆರ್.ಅಶೋಕ್ ಸಭಾತ್ಯಾಗ ಮಾಡುವ ನಿರ್ಣಯ ಕೈಗೊಂಡಿದ್ದರು.

ಸಭಾತ್ಯಾಗ ಮಾಡುವುದಾಗಿ ಹೇಳಿ ಹೊರನಡೆಯುತ್ತಿದ್ದಂತೆ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವು ಶಾಸಕರು ಆರ್.ಅಶೋಕ್ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡು ಆರ್.ಅಶೋಕ್ ಗಹನವಾದ ವಿಚಾರವೊಂದನ್ನು ಕೈ ಚೆಲ್ಲಿದ್ದಾರೆ. ಧರಣಿ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಅವಕಾಶವಿತ್ತು ಎಂದು ಕೂಗಾಡುತ್ತಿದ್ದ ದೃಶ್ಯ ಕಂಡುಬಂದಿತ್ತು.

ಒಂದು ಹಂತದಲ್ಲಿ ತಮ್ಮ ಬೆಂಬಲಿಗರಾದ ನಗರ ಸೇವಕರೊಬ್ಬರ ಮೇಲಿನ ಹಲ್ಲೆಯನ್ನು ಖಂಡಿಸಿ ಬಿಜೆಪಿಯ ಶಾಸಕ ಅಭಯ ಪಾಟೀಲ್ ಏಕಾಂಗಿಯಾಗಿ ಧರಣಿ ನಡೆಸಿದ್ದರು. ಬಿಜೆಪಿಯ ಎಲ್ಲ ಶಾಸಕರು ಹೊರಗಿದ್ದರೆ ಅಭಯ ಪಾಟೀಲ್ ಮಾತ್ರ ಧರಣಿಯಲ್ಲಿದ್ದರು. ಕೊನೆಗೆ ಗೃಹಸಚಿವ ಪರಮೇಶ್ವರ್ ಅವರೇ ಸಮಾಧಾನದ ಮಾತುಗಳನ್ನಾಡಿ ಧರಣಿಯಿಂದ ಹಿಂದೆ ಸರಿಯುವಂತೆ ಮಾಡಿದರು.

ಮುಖ್ಯಮಂತ್ರಿಯವರ ಅಲ್ಪಸಂಖ್ಯಾತರಿಗೆ ಅನುದಾನ ನೀಡುವ ಹೇಳಿಕೆ ವಿರೋಧಿಸಿ ನಡೆದ ಚರ್ಚೆಯ ಬಳಿಕ ಬಿಜೆಪಿ ಸಭಾತ್ಯಾಗ ಮಾಡಿದಾಗ ಅದೇ ಪಕ್ಷದ ಶಾಸಕ ಎಸ್.ಟಿ.ಸೋಮಶೇಖರ್, ಸದನದಲ್ಲೇ ಕುಳಿತು ಸ್ವಪಕ್ಷೀಯರಿಗೆ ಸೆಡ್ಡು ಹೊಡೆದಿದ್ದರು.

ಬಿಜೆಪಿಯಲ್ಲಿನ ಈ ವೈಪರೀತ್ಯಗಳು ಕಾಂಗ್ರೆಸ್ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿವೆ. ಬಹುಶಃ ನಾಳೆ ನಡೆಯುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಆನೆ ಬಲದೊಂದಿಗೆ ಮುಗಿಬೀಳುವ ನಿರೀಕ್ಷೆಗಳಿವೆ.

RELATED ARTICLES

Latest News