Tuesday, July 16, 2024
Homeರಾಜ್ಯಕರ್ನಾಟಕ ಬಂದ್ : ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಕಂಪ್ಲೀಟ್ ಚಿತ್ರಣ

ಕರ್ನಾಟಕ ಬಂದ್ : ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಕಂಪ್ಲೀಟ್ ಚಿತ್ರಣ

ಬೆಂಗಳೂರು, ಸೆ.29- ತೀವ್ರ ಬರದ ಸಂಕಷ್ಟದಲ್ಲೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಸಿ ಕನ್ನಡ ಹಾಗೂ ರೈತಪರ ಸಂಘಟನೆಗಳು ಕರೆ ಕೊಟ್ಟಿದ್ದ ಅಖಂಡ ಕರ್ನಾಟಕ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕನ್ನಡಿಗರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಯಿತು.

ಬೆಂಗಳೂರು ಬಂದ್ ನಂತರ ನಡೆದ  ಕರ್ನಾಟಕ ಬಂದ್‍ಗೆ ಪಕ್ಷಭೇದ ಮರೆತು ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರುಗಳು, ಬೆಂಬಲ ಸೂಚಿಸಿದರು. ಕಾವೇರಿ ಸೇರಿದಂತೆ ನಾಡು, ನುಡಿ, ಜಲದ ವಿಷಯದಲ್ಲಿ ಅನ್ಯಾಯವಾದರೆ ಕನ್ನಡಿಗರು  ಕೈಕಟ್ಟಿ ಕೂರುವುದಿಲ್ಲ ಎಂಬ ಎಚ್ಚರಿಕೆಯನ್ನು ಕೊಡಲಾಯಿತು.

ಕರ್ನಾಟಕ ಬಂದ್‍ಗೆ ಬೆಂಗಳೂರು, ಹಳೆ ಮೈಸೂರು ಭಾಗದ, ತುಮಕೂರು, ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿತ್ತು. ಆದರೆ ಮಧ್ಯ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಕರಾವಳಿ ಜಿಲ್ಲೆಗಳಾದ ಉಡುಪಿ, ಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.

ಆಸ್ಪತ್ರೆ, ಔಷಧ ಅಂಗಡಿಗಳು, ಹಾಲಿನ ಬೂತ್, ಅಂಬ್ಯುಲೆನ್ಸ್, ಪೆಟ್ರೋಲ್ ಬಂಕ್, ಗ್ಯಾಸ್ ಅಂಗಡಿ ಮತ್ತಿತರ ಅಗತ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಕಂಡುಬರಲಿಲ್ಲ. ಉಳಿದಂತೆ ಆಟೋ, ಕ್ಯಾಬ್, ಸರಕು ವಾಹನಗಳು, ಖಾಸಗಿ ಬಸ್‍ಗಳು, ಥಿಯೇಟರ್, ಮಾಲ್‍ಗಳು, ಸೂಪರ್ ಮಾರ್ಕೆಟ್, ಬೀದಿ ಬದಿ ಅಂಗಡಿಗಳು, ಆಭರಣ ಅಂಗಡಿಗಳು, ಕೈಗಾರಿಕೆಗಳು ಮತ್ತಿತರ ಸಂಘಟನೆಗಳು ಬೆಂಬಲ ಕೊಟ್ಟಿದ್ದವು. ಕೆಲವು ಭಾಗಗಳಲ್ಲಿ ಹೊಟೇಲ್‍ಗಳು ಬೆಳಗಿನಿಂದಲೇ ಮುಚ್ಚಿದ್ದವು. ಉಳಿದ ಕಡೆ ಎಂದಿನಂತೆ ಕಾರ್ಯನಿರ್ವಹಿಸಿದ ದೃಶ್ಯ ಕಂಡು ಬಂದಿತು.

ಶಕ್ತಿ ಕೇಂದ್ರದಲ್ಲೂ ಜನರಿಲ್ಲ:

ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಉದ್ಯೋಗ ಸೌಧ ಸೇರಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಖ್ಯೆ ತೀರ ವಿರಳವಾಗಿತ್ತು. ಇಲಾಖೆಗಳ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದರು. ಉಳಿದಂತೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಬಂದ್‍ಗೆ ನೈತಿಕ ಬೆಂಬಲ ಕೊಡಲಾಗಿತ್ತಾದರೂ ಜನಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲೇ ಇತ್ತು.

ಬೆಂಗಳೂರು ಸ್ತಬ್ಧ:

ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಂದ್‍ಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಆಟೋ, ಟ್ಯಾಕ್ಸಿ, ಓಲಾ, ಊಬರ್ ಸಂಚಾರ ವಿರಳವಾಗಿತ್ತು. ಸದಾ ಜನ ಸಂದಣಿಯಿಂದ ಕೂಡಿದ್ದ ಕೆಂಪೇಗೌಡ ಬಸ್ ನಿಲ್ದಾಣ, ಕೆಆರ್ ಮಾರುಕಟ್ಟೆ, ಶಾಂತಿ ನಗರ ಬಸ್ ನಿಲ್ದಾಣ ಮತ್ತಿತರ ಕಡೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.ತಮಿಳುನಾಡಿನ ಅತ್ತಿಬೆಲೆ ಮತ್ತು ಹೊಸೂರಿನಿಂದ ಬರುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಬಸ್‍ಗಳನ್ನು ಮಾರ್ಗಮಧ್ಯೆ ತಡೆ ಹಿಡಿಯಲಾಯಿತು.

ಹೋರಾಟಗಾರರು ಪೊಲೀಸರು ವಶಕ್ಕೆ:

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರಾದರೂ ಪೊಲೀಸರು ತಕ್ಷಣವೇ ಅವರನ್ನು ವಶಕ್ಕೆ ಪಡೆದಿದ್ದಾರೆ.ವಿಮಾನ ನಿಲ್ದಾಣದ ಪ್ರಯಾಣಿಕರ ಆಗಮನದ ಗೇಟ್ ಬಳಿ ಕನ್ನಡದ ಬಾವುಟಗಳನ್ನು ಹಿಡಿದು ಕೇಂದ್ರ ಸರ್ಕಾರ ಮತ್ತು ತಮಿಳುನಾಡಿನ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ಶಿವರಾಮೇಗೌಡ ಸೇರಿದಂತೆ ಹಲವರು ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ಮಾರ್ಗಮಧ್ಯೆ ತಡೆದು ಅವರನ್ನು ವಶಕ್ಕೆ ಪಡೆದುಕೊಂಡರು.

ಚಿತ್ರರಂಗದ ಬೆಂಬಲ:

ಕನ್ನಡ ಚಿತ್ರರಂಗದ ದಿಗ್ಗಜರು ಕೂಡ ಪ್ರತಿಭಟನೆ ನಡೆಸುವ ಮೂಲಕ ಹೋರಾಟಗಾರರಿಗೆ ನೈತಿಕ ಬೆಂಬಲ ಸೂಚಿಸಿದರು. ನಗರದ ಗುರುರಾಜ ಕಲ್ಯಾಣ ಮಂಟಪದ ಬಳಿ ನಡೆದ ಪ್ರತಿಭಟನೆಯಲ್ಲಿ ನಟರಾದ ಶಿವರಾಜ್‍ಕುಮಾರ್, ದರ್ಶನ್, ಶ್ರೀಮುರುಳಿ, ವಿಜಯರಾಘವೇಂದ್ರ, ಉಪೇಂದ್ರ, ಉಮಾಶ್ರೀ, ಶೃತಿ, ದುನಿಯಾ ವಿಜಿ, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಹಲವರು ಭಾಗಿಯಾಗಿ ಕಾವೇರಿ ಹೋರಾಟಕ್ಕೆ ಚಿತ್ರರಂಗ ಯಾವಾಗಲೂ ಸಿದ್ದವಾಗಿರುತ್ತದೆ ಎಂಬ ಅಭಯ ನೀಡಿದರು.

ಇನ್ನು ಬಂದ್ ವೇಳೆ ಅಲ್ಲಲ್ಲಿ ಕೆಲವು ಘಟನೆಗಳು ಕೂಡ ಜರುಗಿವೆ. ಟೌನ್‍ಹಾಲ್ ಬಳಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದ ಗೆಜ್ಜಲಗೆರೆ ಬಳಿ ಕನ್ನಡಪರ ಹೋರಾಟಗಾರರು ಮೈಸೂರಿನಿಂದ ಬರುತ್ತಿದ್ದ ರೈಲನ್ನು ತಡೆಯಲು ಟ್ರ್ಯಾಕ್ ಬಳಿ ಧರಣಿ ಕುಳಿತರು. ತಕ್ಷಣವೇ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾ ನಿರತರನ್ನು ವಶಪಡಿಸಿಕೊಂಡರು.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡಪರ ಹೋರಾಟಗಾರರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದು, ಎಲ್ಲರ ಗಮನ ಸೆಳೆಯಿತು. ನ್ಯಾಯದೇವತೆಯ ಕಣ್ಣು ಕಟ್ಟಿದ್ದಂತೆ ಕನ್ನಡಪರ ಹೋರಾಟಗಾರರ ಕಣ್ಣಿಗೂ ಬಟ್ಟೆ ಕಟ್ಟಲಾಗಿದೆ. ನಮಗೆ ನ್ಯಾಯ ಸಿಗುತ್ತಿಲ್ಲ. ನಾವು ಯಾರ ವಿರುದ್ಧವೂ ಪ್ರತಿಭಟನೆ ನಡೆಸುತ್ತಿಲ್ಲ. ಇದು ನಮ್ಮ ಸಾತ್ವಿಕ ಸಿಟ್ಟು ಎಂದು ಹೇಳಿದರು. ಮತ್ತೊಂದು ವಿಶೇಷವೆಂದರೆ ದಾವಣಗೆರೆಯಲ್ಲಿ ಐದು ವರ್ಷದ ಬಾಲಕನೊಬ್ಬ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದ. ಮೋಹಿತ್ ಎಂಬ ಬಾಲಕ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದನು.

ರೈತನ ಏಕಾಂಗಿ ಪ್ರತಿಭಟನೆ:

ಧಾರವಾಡದ ಜುಬಿಲಿ ಸರ್ಕಲ್‍ನಲ್ಲಿ ರೈತನೊಬ್ಬ ವಾಹನಗಳನ್ನು ತಡೆದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರೆ, ಚಿತ್ರದುರ್ಗದಲ್ಲಿ ಕರವೇ ಕಾರ್ಯಕರ್ತರು ಸಂಸದರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದರು.ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಿರತರು ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಿದರೆ, ತುಮಕೂರು ಮತ್ತಿತರ ಕಡೆಯೂ ಬಂದ್‍ಗೆ ಬೆಂಬಲವನ್ನು ಸೂಚಿಸಲಾಗಿತ್ತು.

ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಎಂಟು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬಹುತೇಕ ಕಡೆ ಸ್ವಯಂ ಪ್ರೇರಿತವಾಗಿ ಬಂದು ಬಂದ್‍ಗೆ ಬೆಂಬಲವನ್ನು ಸೂಚಿಸಿದ್ದರು. ಬಂದ್ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ನಾಳೆಗೆ ಮುಂದೂಡಲಾಗಿತ್ತು.ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಬಹುತೇಕ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ತಡೆವೊಡ್ಡಿದಿರುವ ಘಟನೆಗಳು ನಡೆದಿವೆ.

ಹೈದರಾಬಾದ್‍ನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಲ ಬಸ್‍ಗಳನ್ನು ದೊಡ್ಡಬಳ್ಳಾಪುರ, ಮಹಾರಾಷ್ಟ್ರದಿಂದ ಆಗಮಿಸುತ್ತಿದ್ದ ಬಸ್‍ಗಳನ್ನು ಬೆಳಗಾವಿ ಬಳಿ, ಕೆರಳದಿಂದ ಬರುತ್ತಿದ್ದ ವಾಹನಗಳನ್ನು ಗುಂಡ್ಲುಪೇಟೆ ಹಾಗೂ ತಮಿಳುನಾಡಿನಿಂದ ಬರುತ್ತಿದ್ದ ವಾಹನಗಳನ್ನು ಅತ್ತಿಬೆಲೆ ಮತ್ತು ಹೊಸೂರು ಚೆಕ್ ಪೋಸ್ಟ್ ಬಳಿ ತಡೆ ಹಿಡಿಯಲಾಯಿತು.

ಈ ನಡುವೆ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ವಿಶೇಷವಾಗಿ ತಮಿಳು ಭಾಷಿಗರು ಹೆಚ್ಚಾಗಿ ವಾಸ ಮಾಡುವ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿತ್ತು.

ಒಟ್ಟಾರೆ ಬಂದ್ ಶಾಂತಿಯುತವಾಗಿ, ಯಶಸ್ವಿಯಾಗಿ ಜರುಗಿದ್ದು, ಕಾವೇರಿಗಾಗಿ ನಾಡಿನ ವಿವಿಧ ಸಂಘಟನೆಗಳು ಒಗ್ಗಟಿನ ಹೋರಾಟವಾಗಿ ನಡೆಸುವ ಮೂಲಕ ಅನ್ಯಾಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದವು.

ಮಡಿಕೇರಿಯಲ್ಲಿ ನೀರಸ :
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಸಿ ಅಖಂಡ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದರೆ, ಕಾವೇರಿ ಹುಟ್ಟುವ ಕೊಡಗಿನಲ್ಲೇ ಬಂದ್ಗೆ ಬೆಂಬಲ ವ್ಯಕ್ತವಾಗಿಲ್ಲ.ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿ ವಿರಾಜಪೇಟೆ ಶನಿವಾರಸಂತೆ ಮತ್ತಿತರ ಕಡೆ ಕರ್ನಾಟಕ ಬಂದ್ಗೆ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಜಿಲ್ಲೆಯಾದ್ಯಂತ ಯಾವುದೇ ಸಂಘಟನೆಗಳಿಗೆ ಬೆಂಬಲವನ್ನು ಸಾರ್ವಜನಿಕರು ನೀಡಿರಲಿಲ್ಲ. ಹೀಗಾಗಿ ದೈನಂದಿನ ಜನಜೀವನ ಸಹಜವಾಗಿತ್ತು.ಶಾಲಾ-ಕಾಲೇಜುಗಳು , ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ, ಬಸ್, ಆಟೋ ಸಂಚಾರ ಎಲ್ಲೆಡೆ ಸಹಜ ಸ್ಥಿತಿಯಲ್ಲಿದ್ದವು.

ಇಂದು ನಡೆದ ಬಂದ್ಗೆ ಬೆಂಬಲ ನೀಡಬೇಕೆಂದು ಕಳೆದ 2-3 ದಿನಗಳಿಂದಲೂ ವಿವಿಧ ಸಂಘಟನೆಗಳು ಜಿಲ್ಲೆಯ ಅನೇಕ ಕಡೆ ಅಭಿಯಾನ ನಡೆಸಿದ್ದವು. ಆದರೆ, ಜಿಲ್ಲೆಯ ಜನತೆ ಕರ್ನಾಟಕ ಬಂದ್ಗೆ ಬೆಂಬಲವನ್ನೇ ನೀಡಿಲ್ಲ. ಕಾವೇರಿ ಹುಟ್ಟುವ ಜಿಲ್ಲೆಯಲ್ಲೇ ಬಂದ್ಗೆ ಬೆಂಬಲ ಸಿಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂಸ್ಕøತಿಕ ನಗರಿ ಸ್ತಬ್ಧ
ಮೈಸೂರು, ಸೆ.29- ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ನಗರದ ವಿವಿಧ ಕನ್ನಡಪರ ಸಂಘಟನೆಗಳು ಕೆಲವು ಪ್ರಮುಖ ವೃತ್ತಗಳಲ್ಲಿ ಪ್ರತಿಭಟನೆ ನಡೆಸಿ ಕಾವೇರಿ ನಮ್ಮದು, ಕಾವೇರಿ ನೀರು ರಕ್ಷಿಸುವುದು ನಮ್ಮ ಹೊಣೆ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದಲ್ಲಿ ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.ಕಾವೇರಿ ನೀರಿಗಾಗಿ ನಗರ ಮತ್ತು ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಹೊರರಾಜ್ಯಗಳಿಂದ ನಗರಕ್ಕೆ ಇಂದು ಬರಬೇಕಾಗಿದ್ದ ಯಾವುದೇ ತರಕಾರಿ ವಾಹನಗಳು ಬಂದಿಲ್ಲ. ಎಪಿಎಂಸಿ ಮಾರುಕಟ್ಟೆ ಸಿಬ್ಬಂದಿ ಸಹ ಸಂಪೂರ್ಣ ಮುಚ್ಚಿ ಬಂದ್ಗೆ ಸಹಕರಿಸಿದ್ದು, ಎಪಿಎಂಸಿ ಖಾಲಿಖಾಲಿಯಾಗಿತ್ತು.

ನಗರದಲ್ಲಿನ ಮಾಲ್ಗಳು, ವ್ಯವಹಾರ ಕೇಂದ್ರವಾಗಿರುವ ದೇವರಾಜ ರಸ್ತೆ, ಅಶೋಕ ರಸ್ತೆ, ಸೈಯಾಜಿ ರಾವ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳು ಬಂದ್ ಆಗಿದ್ದವು.ಪ್ರತಿ ಬಾರಿ ಬಂದ್ ವೇಳೆ ಎನ್ಆರ್ ಮೊಹಲ್ಲಾದಲ್ಲಿ ಅಷ್ಟಾಗಿ ಅಂಗಡಿಗಳನ್ನು ಮುಚ್ಚುತ್ತಿರಲಿಲ್ಲ. ಆದರೆ ಈ ಬಾರಿ ಸ್ವಯಂ ಪ್ರೇರಿತವಾಗಿ ಮುಚ್ಚಿದ್ದರಿಂದ ಮೊಹಲ್ಲಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಚಿಕ್ಕಮಾರುಕಟ್ಟೆ, ದೇವರಾಜ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಬೆಳಗಿನ ಜಾವದಿಂದಲೂ ಯಾವುದೇ ವ್ಯಾಪಾರ ವಹಿವಾಟುಗಳು ನಡೆದಿಲ್ಲ.ಪೆಟ್ರೋಲ್ ಬಂಕ್ ಮಾಲೀಕರೂ ಸಹ ಬಂಕ್ಗಳನ್ನು ಮುಚ್ಚಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ನಗರದಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್ಗಳಿಗೆ ಬೀಗ ಹಾಕಲಾಗಿತ್ತು.

ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದ್ದು ಕಂಡು ಬಂತು. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಗರದಾದ್ಯಂತ ಯಾವುದೇ ಬಸ್ ಸಂಚಾರ ಇರಲಿಲ್ಲ. ಖಾಸಗಿ ಬಸ್ಗಳವರು ಸಹ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಸರ್ಕಾರಿ ಬಸ್ಗಳು ವಿರಳವಾಗಿತ್ತಾದರೂ ಪ್ರಯಾಣಿಕ ರಿಲ್ಲದೆ ಬಣಗೂಡುತ್ತಿದ್ದವು.

ಅದೇ ರೀತಿ ಜಿಲ್ಲೆ ಹಾಗೂ ಹೊರರಾಜ್ಯಕ್ಕೆ ತೆರಳುವ ಬಸ್ ನಿಲ್ದಾಣವಾದ ಸಬರ್ಬನ್ ಬಸ್ ನಿಲ್ದಾಣದಲ್ಲಿ ವಿವಿಧೆಡೆಗಳಿಂದ ಆಗಮಿಸಿದ ಪ್ರಯಾಣಿಕರು ತಮ್ಮ ಮನೆಗಳಿಗೆ ತೆರಳಲಾರದೇ ಪರದಾಡುವಂತಾಯಿತು. ಅಲ್ಲದೆ ಬೇರೆಡೆ ಹೋಗಲು ಬಂದಿದ್ದ ಕೆಲವರು ಬಸ್ ಸಿಗದೇ ವಾಪಸ್ ಆದ ದೃಶ್ಯ ಸಹ ಕಂಡು ಬಂತು.

RELATED ARTICLES

Latest News