Saturday, July 13, 2024
Homeರಾಜ್ಯಬಿಜೆಪಿ ಪದಾಧಿಕಾರಿಗಳ ಬದಲಾವಣೆ : ಕಮಲ ಪಾಳಯಕ್ಕೆ ಹೊಸ ವರ್ಚಸ್ಸು

ಬಿಜೆಪಿ ಪದಾಧಿಕಾರಿಗಳ ಬದಲಾವಣೆ : ಕಮಲ ಪಾಳಯಕ್ಕೆ ಹೊಸ ವರ್ಚಸ್ಸು

ಬೆಂಗಳೂರು,ನ.13- ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದಿರುವ ಬಿ.ವೈ.ವಿಜಯೇಂದ್ರ ಪಕ್ಷದೊಳಗೆ ಅಮೂಲಾಗ್ರ ಬದಲಾವಣೆ ಮಾಡಲು ಮುಂದಾಗಿದ್ದು, ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಚಿಂತನೆಯಲ್ಲಿದ್ದಾರೆ. ಬುಧವಾರ ಬೆಳಗ್ಗೆ 10 ಗಂಟೆಗೆ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತಾಗಿ ಮೊದಲು ಶಾಸಕಾಂಗ ಸಭೆಯನ್ನು ಕರೆಯಲಿದ್ದಾರೆ.

ಇದು ಮುಗಿದ ನಂತರ ನ.17 ಇಲ್ಲವೇ ಮುಂದಿನ ವಾರ ನವದೆಹಲಿಗೆ ತೆರಳಲಿರುವ ವಿಜಯೇಂದ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತಿತರರನ್ನು ಭೇಟಿಯಾಗಲಿದ್ದಾರೆ.

ಬಳಿಕ ಪಕ್ಷದ ಪದಾಧಿಕಾರಿಗಳ ಬದಲಾವಣೆಗೆ ಕೈ ಹಾಕುವ ಸಂಭವವಿದ್ದು, ಹಳಬರು, ಹೊಸಬರು,ಸಂಘದ ಪರಿವಾರದ ಹಿನ್ನಲೆಯುಳ್ಳವರು ಸೇರಿದಂತೆ ಎಲ್ಲರಿಗೂ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ. ಈ ಹಿಂದೆ ನೇಮಕವಾಗಿದ್ದ ಪದಾಧಿಕಾರಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಬದಲಾಯಿಸಿ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಿದ್ದಾರೆ.

ಈ ಮೊದಲು ನೇಮಕಗೊಂಡಿದ್ದ ಪದಾಧಿಕಾರಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಬೆಂಬಲಿಗರನ್ನು ಕಡೆಗಣಿಸಿ ಬಿ.ಎಲ್.ಸಂತೋಷ್ ಆಪ್ತರಿಗೆ ಮಣೆ ಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹಿರಿಯ ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿ, ಖಜಾಂಚಿ, ಕಚೇರಿ ಸಿಬ್ಬಂದಿ ಹೀಗೆ ಪಕ್ಷದಲ್ಲಿ ಪ್ರತಿಯೊಂದು ಹಂತದಲ್ಲೂ ಯಡಿಯೂರಪ್ಪ ಬೆಂಬಲಿಗರನ್ನು ಹೊರಗಿಟ್ಟು ಸಂತೋಷ್ ಆಪ್ತರಿಗೆ ಮಣೆ ಹಾಕಲಾಗಿತ್ತು ಎಂಬ ಅಸಮಾಧಾನವಿತ್ತು.

ಇದನ್ನು ಸರಿದೂಗಿಸಲು ಮುಂದಾಗಿರುವ ವಿಜಯೇಂದ್ರ ಯಾರೂ ಕೂಡ ಅಸಮಾಧಾನಗೊಳ್ಳದಂತೆ ಸಂತೋಷ್ ಮತ್ತು ಯಡಿಯೂರಪ್ಪ ಬಣ ಎನ್ನುವುದಕ್ಕೂ ಅವಕಾಶ ಕಲ್ಪಿಸದೆ ಎರಡೂ ಕಡೆಯವರೆಗೂ ಪದಾಧಿಕಾರಿಗಳ ಪಟ್ಟಿಯಲ್ಲಿ ಅವಕಾಶ ನೀಡುವ ಮೂಲಕ ತಕ್ಕಡಿಯನ್ನು ಸರಿದೂಗಿಸಲು ಮುಂದಾಗಿದ್ದಾರೆ.

ಮುಂದೆ ಲೋಕಸಭೆ, ಸ್ಥಳೀಯ ಸಂಸ್ಥೆ, ಬಿಬಿಎಂಪಿ ಸೇರಿದಂತೆ ವಿವಿಧ ಹಂತದ ಚುನಾವಣೆ ಇರುವುದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಹಿರಿಯರು ವಿಜಯೇಂದ್ರಗೆ ಸಲಹೆಯನ್ನು ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದ ಟಿಮ್ ಸ್ಕಾಟ್

ಕೇವಲ ನಿಮ್ಮ ಹಿಂದೆ ಇರುವವರಿಗೆ, ಜೈಕಾರ ಹಾಕುವವರಿಗೆ ಮಾತ್ರ ಪಕ್ಷದೊಳಗೆ ಮಣೆ ಹಾಕುವ ಸಂಪ್ರದಾಯವನ್ನು ನೀವು ಕೂಡ ಮುಂದುವರೆಸಬೇಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗಲೇ ಮಾತ್ರ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಸಾಧ್ಯವಾಗುತ್ತದೆ. ಪಕ್ಷ ಸಂಘಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಎಷ್ಟೇ ವ್ಯತ್ಯಾಸಗಳು ಕಂಡುಬಂದರೂ ಸಂಘಟನೆಗೆ ಕೊರತೆಯಾಗದಂತೆ ಡಿಕೆಶಿ ಎಚ್ಚರಿಕೆ ಹೆಜ್ಜೆ ಇಟ್ಟರು.

ಪದಾಧಿಕಾರಿಗಳ ಆಯ್ಕೆಯಲ್ಲಿ ಮೂಲ ಕಾಂಗ್ರೆಸಿಗರ ಜೊತೆಗೆ ಸಿದ್ದರಾಮಯ್ಯ ಬೆಂಬಲಿಗರಿಗೂ ಅವಕಾಶ ಕಲ್ಪಿಸಿದರು. ನೀವು ಕೂಡ ಇದೇ ತಂತ್ರವನ್ನು ಅನುಸರಿಸಬೇಕು. ಪ್ರತಿಯೊಂದು ನಿರ್ಧಾರವು ಧವಳಗಿರಿಯಿಂದ ಆಗಬಾರದು. ಯಾವುದೇ ತೀರ್ಮಾನಗಳು ಜಗನ್ನಾಥ ಭವನದಲ್ಲಿಯೇ ನಡೆಯಬೇಕೆಂದು ಆರ್‍ಎಸ್‍ಎಸ್ ನಾಯಕರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷವೆಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸ ಬಂದೇ ಬರುತ್ತದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗಲೇ ನಾಯಕನಾಗಿ ಬೆಳೆಯಬಹುದು. ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಎಂದು ನಾವು ಹೇಳುವುದಿಲ್ಲ. ಹಿರಿಯರನ್ನು ಕಡೆಗಣಿಸದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪದಾಧಿಕಾರಿಗಳನ್ನು ನೇಮಕ ಮಾಡುವಾಗ ಪಕ್ಷ ನಿಷ್ಠರಿಗೆ ಮೊದಲ ಆದ್ಯತೆ ಎಂದು ಕಿವಿಮಾತು ಹೇಳಿದ್ದಾರೆ.

RELATED ARTICLES

Latest News