ಬೆಂಗಳೂರು,ಮಾ.12- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಸ್ಕ್ರೀನಿಂಗ್ ಸಮಿತಿ ಸಭೆ ಇಂದೂ ಕೂಡ ಮುಂದುವರೆದಿದ್ದು, ಬಹುತೇಕ ಇದೇ ತಿಂಗಳ 14 ಅಥವಾ 15 ರಂದು ಬಾಕಿ ಇರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸುವ ನಿರೀಕ್ಷೆಗಳಿವೆ.
ಈಗಾಗಲೇ 7 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಬಾಕಿ ಇರುವ 21 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ರಾಷ್ಟ್ರೀಯ ನಾಯಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮೂಲಗಳ ಪ್ರಕಾರ, 10ಕ್ಕೂ ಕ್ಷೇತ್ರಗಳಿಗೆ ಏಕ ವ್ಯಕ್ತಿಯ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಬಾಕಿ ಉಳಿದ 11 ಕ್ಷೇತ್ರಗಳಿಗೆ 2 ಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿತ್ತು. ಅದರಲ್ಲಿ ಮತ್ತಷ್ಟು ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಎಐಸಿಸಿ ನಾಯಕರು ಇಂದು ಬೆಂಗಳೂರಿನಲ್ಲೇ ಕುಳಿತು ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯಜಿಲ್ಲಾ ಪ್ರವಾಸದಲ್ಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.ಈವರೆಗಿನ ಮಾಹಿತಿ ಪ್ರಕಾರ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಉತ್ತರ ಕನ್ನಡ ಕ್ಷೇತ್ರಕ್ಕೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ್, ಚಿತ್ರದುರ್ಗಕ್ಕೆ ಬಿ.ಎನ್.ಚಂದ್ರಪ್ಪ, ಬೀದರ್ಗೆ ರಾಜಶೇಖರ್ ಪಾಟೀಲ್, ದಕ್ಷಿಣ ಕನ್ನಡಕ್ಕೆ ವಿನಯಕುಮಾರ್ ಸೊರಕೆ, ಕಲಬುರಗಿಗೆ ಮಲ್ಲಿಕಾರ್ಜುನ್ ಖರ್ಗೆ, ಕೊಪ್ಪಳಕ್ಕೆ ರಾಜಶೇಖರ್ ಯತ್ನಾಳ್ ಅವರ ಹೆಸರುಗಳು ಶಿಫಾರಸ್ಸುಗೊಂಡಿವೆ.
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಚಾಮರಾಜನಗರ, ಬಳ್ಳಾರಿ, ಬಾಗಲಕೋಟೆ, ರಾಯಚೂರು, ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳಿಗೆ ಎರಡು ಹೆಸರುಗಳು ಶಿಫಾರಸ್ಸುಗೊಂಡಿವೆ.ಅದರಲ್ಲಿ ಕೋಲಾರ, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ರಾಯಚೂರು ಕ್ಷೇತ್ರಗಳಿಗೆ ತೀವ್ರ ಪೈಪೋಟಿ ಇದೆ.
ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೆಸರು ಬಹುತೇಕ ಅಖೈರುಗೊಂಡಿದೆ. ಆದರೆ ಕೊನೆ ಕ್ಷಣದ ಬದಲಾವಣೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರಹೆಸರು ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸ್ಥಳೀಯರ ವಿರೋಧದ ನಡುವೆಯೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ವರಿಷ್ಠರು ನಿರ್ಧರಿಸಿದ್ದಾರೆ.
ಈವರೆಗೂ ಬಿಜೆಪಿಯಲ್ಲಿದ್ದ ಜಯಪ್ರಕಾಶ್ ಹೆಗ್ಡೆ ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಸ್ಥಳೀಯ ನಾಯಕರು ಕಾಂಗ್ರೆಸ್ ವಕ್ತಾರ ಸುೀರ್ ಮುರೋಳ್ಳಿ ಅವರಿಗೆ ಟಿಕೆಟ್ ನೀಡಬೇಕು ಎಂದು ರಾಜ್ಯ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ತೀವ್ರ ಒತ್ತಡ ಹೇರಿದ್ದರು. ವಲಸಿಗರಿಗೆ ಮಣೆ ಹಾಕಬಾರದು ಎಂಬ ಆಕ್ಷೇಪವನ್ನು ವ್ಯಕ್ತಪಡಿಸಿದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಾಂಗ್ರೆಸ್ ನಾಯಕರು ಜಯಪ್ರಕಾಶ್ ಹೆಗ್ಡೆ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದಂತಿದೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರ ಹೆಸರು ತೀವ್ರವಾಗಿ ಕೇಳಿಬಂದಿವೆ.ಕೋಲಾರ ಕ್ಷೇತ್ರಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಅಭ್ಯರ್ಥಿಯಾಗುವ ಸಾಧ್ಯತೆಯಿದ್ದು, ಒಂದು ವೇಳೆ ತಮ್ಮನ್ನು ಪರಿಗಣಿಸದೇ ಇದ್ದರೆ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂದು ಮುನಿಯಪ್ಪ ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಪ್ತ ಡಾ.ಬಿ.ಸಿ.ಮುದ್ದುಗಂಗಾಧರ್ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಚಾಮರಾಜನಗರಕ್ಕೆ ಸಚಿವ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಹೆಸರು ಚಾಲನೆಯಲ್ಲಿದೆಯಾದರೂ, ಹೈಕಮಾಂಡ್ ಪರ್ಯಾಯ ಅಭ್ಯರ್ಥಿಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದೆ.ಗಡಿನಾಡು ಬಳ್ಳಾರಿಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕ ತುಕಾರಾಂ ಅವರ ಪುತ್ರಿ ಚೈತನ್ಯ ಸೌಪರ್ಣಿಕ ಹೆಸರುಗಳು ಕೇಳಿಬಂದಿವೆ.
ಬಾಗಲಕೋಟೆಗೆ ಆನಂದ ನ್ಯಾಮೇಗೌಡ, ವೀಣಾ ಕಾಶಪ್ಪನವರ್, ಅಜಯ್ಕುಮಾರ್ ಸರ್ನಾಯಕ್ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ.ರಾಯಚೂರು ಕ್ಷೇತ್ರಕ್ಕೆ ಕುಮಾರನಾಯ್ಕ್, ರವಿ ಬೋಸ್ರಾಜ್ ಮತ್ತಿತರರ ಹೆಸರುಗಳು ಚರ್ಚೆಯಲ್ಲಿವೆ. ಎರಡು ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಒಂದು ಕಡೆ ಲಿಂಗಾಯತ ಸಮುದಾಯಕ್ಕೆ ಮತ್ತೊಂದು ಕಡೆ ಹಿಂದುಳಿದ ವರ್ಗಕ್ಕೆ ಟಿಕೆಟ್ ನೀಡಬೇಕು ಎಂಬ ಚರ್ಚೆಗಳಾಗಿವೆ.
ಬೆಳಗಾವಿಯಿಂದ ಲಕ್ಷ್ಮೀಹೆಬ್ಬಾಳ್ಕರ್ ಪುತ್ರ ಮೃಣಾಳ್ಗೆ ಟಿಕೆಟ್ ಕೊಡಿಸಬೇಕೆಂದು ಲಾಬಿ ನಡೆಸುತ್ತಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಲಿಂಗಾಯತ ಸಮುದಾಯದ ಮತ್ತೊಬ್ಬ ಮುಖಂಡ ಡಾ.ಗಿರೀಶ್ ಸೋನಾವಾಲ್ಕರ್ ಟಿಕೆಟ್ ಕೊಡಿಸಲು ಪ್ರಯತ್ನ ಪಡುತ್ತಿದ್ದಾರೆ.
ಅತ್ತ ಚಿಕ್ಕೋಡಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿಯ ಪುತ್ರಿ ಪ್ರಿಯಾಂಕ ಅಭ್ಯರ್ಥಿಯಾಗಲಿದ್ದಾರೆ ಎಂಬ ಚರ್ಚೆಗಳ ನಡುವೆ, ಡಿ.ಕೆ.ಶಿವಕುಮಾರ್ ಮತ್ತು ತಂಡ ಕುರುಬ ಸಮುದಾಯದ ಲಕ್ಷ್ಮಣ್ ರಾವ್ ಚಿಂಗಳೆ ಅವರ ಹೆಸರು ತೇಲಿಬಿಟ್ಟಿದೆ.
ಹೀಗಾಗಿ ಹಲವು ಕ್ಷೇತ್ರಗಳಲ್ಲಿ ರಾಜಕೀಯ ಜಿದ್ದಾಜಿದ್ದಿ, ಪೈಪೊೀಟಿ ಟಿಕೆಟ್ ಹಂಚಿಕೆಯ ಹಂತದಲ್ಲೇ ಕಂಡುಬರುತ್ತಿದೆ. ಇಂದು ಮತ್ತೊಂದು ಸುತ್ತಿನ ಚರ್ಚೆಗಳ ಬಳಿಕ ಸಂಜೆ ವೇಳೆಗೆ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ರವಾನಿಸಲಾಗುತ್ತದೆ.ಇದೇ 14 ಅಥವಾ 15 ರಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅದೇ ದಿನ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.