Sunday, April 28, 2024
Homeರಾಜ್ಯಭರ್ತಿ 5 ವರ್ಷಗಳ ಗೃಹಲಕ್ಷ್ಮಿ ಹಣದ ಕಂತನ್ನು ಚಾಮುಂಡೇಶ್ವರಿಗೆ ಸಮರ್ಪಿಸಿದ ಸರ್ಕಾರ

ಭರ್ತಿ 5 ವರ್ಷಗಳ ಗೃಹಲಕ್ಷ್ಮಿ ಹಣದ ಕಂತನ್ನು ಚಾಮುಂಡೇಶ್ವರಿಗೆ ಸಮರ್ಪಿಸಿದ ಸರ್ಕಾರ

ಮೈಸೂರು, ನ.28- ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ ಭರ್ತಿ ಐದು ವರ್ಷಗಳ ಕಂತನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ಇಂದು ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಸಮರ್ಪಿಸಿದರು.

ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 59 ತಿಂಗಳ ಕಂತಿನ ಹಣ ಒಟ್ಟು 1.18 ಲಕ್ಷ ರೂ.ಗಳನ್ನು ಸಚಿವೆ ಹೆಬ್ಬಾಳ್ಕರ್ ವೈಯಕ್ತಿಕವಾಗಿ ನೀಡಿದ್ದಾರೆ. ಇಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು, ಸಚಿವರ ಪರವಾಗಿ ಹಣದ ಚೆಕ್ ಅರ್ಪಿಸುವ ಮೂಲಕ ಸರ್ಕಾರದ ಹರಕೆ ತೀರಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭಾ ಚುನಾವಣೆಗೂ ಪೂರ್ವ ಮೇ 9 ರಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ದಿನೇಶ್ ಗೂಳಿಗೌಡ ಹಾಗೂ ಇತರ ಕಾಂಗ್ರೆಸ್ ನಾಯಕರು ಚಾಮುಂಡಿ ದೇವಿ ಸನ್ನಿಯಲ್ಲಿ ಗ್ಯಾರಂಟಿ ಕಾರ್ಡ್ ಗಳನ್ನಿಟ್ಟು ಹರಕೆ ಕಟ್ಟಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಶಕ್ತಿ ನೀಡುವಂತೆ ತಾಯಿಯಲ್ಲಿ ಬೇಡಿಕೊಂಡಿದ್ದರು. ಅದರಂತೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಅಭೂತಪೂರ್ವ ಜಯಭೇರಿ ಬಾರಿಸಿ ಅಧಿಕಾರವನ್ನು ಹಿಡಿದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಕಳೆಯುವುದರೊಳಗೆ ಭರವಸೆ ನೀಡಿದ್ದಂತೆ ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ.

ಚೀನಾ ನ್ಯೂಮೋನಿಯ ಆತಂಕ, ಭಾರತದಲ್ಲಿ ಹೈ ಅಲರ್ಟ್ ಘೋಷಣೆ

ಆಗಸ್ಟ್ 30 ರಂದು ದೇವಿಯ ದರ್ಶನ ಮಾಡಿ ಹರಕೆ, ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗಿತ್ತು, ಅದೇ ದಿನ ದೇವಿಗೆ ಮೊದಲ ಕಂತಿನ ಹಣವನ್ನು ಸಮರ್ಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಪ್ರತಿ ತಿಂಗಳು ತಾಯಿ ಚಾಮುಂಡೇಶ್ವರಿ ದೇವಿಗೆ ಗೃಹಲಕ್ಷ್ಮಿ ಕಂತನ್ನು ನೀಡುವಂತೆ ಶಾಸಕ ದಿನೇಶ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದರು. ಅವರು ತಕ್ಷಣ ಈ ಕುರಿತು ಕ್ರಮ ವಹಿಸುವಂತೆ ಸೂಚಿಸಿದ್ದರು. ಮೊದಲ ಕಂತು ಸಮರ್ಪಿಸಿದ್ದ ಬಳಿಕ ಉಳಿದ 59 ತಿಂಗಳ ಹಣವನ್ನು ಒಮ್ಮೆಲೆ ದೇವಿಗೆ ನಾನು ವೈಯಕ್ತಿಕವಾಗಿ ಸಲ್ಲಿಸುತ್ತಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಇದುವರೆಗೆ ರಾಜ್ಯಾದ್ಯಂತ 1 ಕೋಟಿ 17 ಲಕ್ಷ ಯಜಮಾನಿಯರು ಗೃಹಲಕ್ಷ್ಮಿ ಯೋಜನೆ ಮೂಲಕ ಹಣ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 1 ಕೋಟಿ 10 ಲಕ್ಷ ಯಜಮಾನಿಯರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಯೋಜನೆಗಾಗಿ ನಮ್ಮ ಸರ್ಕಾರ 11,200 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಸುಮಾರು 2,100 ಕೋಟಿ ರೂ.ಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 6 ಸಾವಿರ ಕೋಟಿ ರೂ. ಜಮಾ ಆಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮಾಡಿದ ವಾಗ್ದಾನದಂತೆ ದೇವಿಗೆ ಹಣ ಸಲ್ಲಿಸುತ್ತಿದ್ದೇವೆ. ಮುಂದಿನ ಐದು ವರ್ಷ ಕೂಡ ನಿರಂತರವಾಗಿ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಲಿವೆ. ಮಾತ್ರವಲ್ಲ 2028 ರ ವಿಧಾನಸಭೆ ಚುನಾವಣೆಯಲ್ಲೂ ನಾವು ಮತ್ತೆ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಪುನಃ, ಪುನಃ ಮುಂದುವರಿಸಲಿದ್ದೇವೆ. ಯೋಜನೆ 3 ತಿಂಗಳಿಗೆ ನಿಲ್ಲುತ್ತದೆ, 6 ತಿಂಗಳಿಗೆ ಸ್ಥಗಿತವಾಗುತ್ತದೆ. ಲೋಕಸಭಾ ಚುನಾವಣೆಯ ನಂತರ ಮುಕ್ತಾಯವಾಗುತ್ತದೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಅವುಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Latest News