Sunday, April 14, 2024
Homeರಾಜ್ಯಬಿಎಸ್‌ವೈ ವಿರುದ್ಧ ಪೋಕ್ಸೋ ಕೇಸ್ : ಗೃಹಸಚಿವ ಪರಮೇಶ್ವರ್ ಹೇಳಿದ್ದೇನು..?

ಬಿಎಸ್‌ವೈ ವಿರುದ್ಧ ಪೋಕ್ಸೋ ಕೇಸ್ : ಗೃಹಸಚಿವ ಪರಮೇಶ್ವರ್ ಹೇಳಿದ್ದೇನು..?

ಬೆಂಗಳೂರು,ಮಾ.15-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮಹಿಳೆಯೊಬ್ಬರ ಮೇಲಿರುವ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸೂಕ್ಷ್ಮ ಮತ್ತು ಗಂಭೀರ ಪ್ರಕರಣ. ವಿಚಾರಣೆ ನಡೆಯದೆ, ಸತ್ಯಾಸತ್ಯ ತಿಳಿಯದೆ ಅಸ್ಪಷ್ಟ ಮಾಹಿತಿ ನೀಡುವುದು ಸರಿಯಲ್ಲ ಎಂದು ಹೇಳಿದರು.

ಮಹಿಳೆ ನೀಡಿರುವ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಮಹಿಳೆಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಟೈಪ್ ಮಾಡಿ, ಸಹಿ ಹಾಕಿದ ದೂರನ್ನು ನೀಡಲಾಗಿದೆ. ಅದು ಕೈಬರಹದಲ್ಲಿಲ್ಲ ಎಂದು ಹೇಳಿದರು.

ಒಂದು ಕಡೆ ಇದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಗರಿಕರಿಗೆ ಸೇರಿದ ಪ್ರಕರಣ, ಮತ್ತೊಂದು ಕಡೆ ಮಹಿಳೆಯ ಆಪಾದನೆ. ಹೀಗಾಗಿ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಪ್ರಕರಣವನ್ನು ನೋಡಬೇಕಿದೆ. ಪೊಲೀಸರು ತನಿಖೆ ನಡೆಸುತ್ತಾರೆ. ಪ್ರಾಥಮಿಕವಾಗಿ ಸತ್ಯಾಂಶ ಕಂಡುಬಂದರೆ ಪ್ರತಿವಾದಿಯನ್ನು ವಶಕ್ಕೆ ಪಡೆಯುವುದು ಸೇರಿದಂತೆ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳುತ್ತಾರೆ.

ಪ್ರತಿಪಾದಿವಾದಿಯಿಂದ ದೂರುದಾರರಿಗೆ ಅಪಾಯವಿದೆ ಎಂದಾದರೆ ರಕ್ಷಣೆ ನೀಡುವುದೂ ಪೊಲೀಸರ ಜವಾಬ್ದಾರಿ. ಇಂತಹ ಪ್ರಕರಣದಲ್ಲಿ ಯಾರ ಸೂಚನೆಯೂ ಇಲ್ಲದೆ ಪೊಲೀಸರು ಮಹಿಳೆಯರಿಗೆ ರಕ್ಷಣೆ ನೀಡುವುದು ಸಾಮಾನ್ಯಎಂದರು. ತನಿಖೆಯ ವೇಳೆ ಎಲ್ಲಾ ಸತ್ಯಾಂಶಗಳು ಹೊರಬರುತ್ತವೆ. ದೂರಿನ ಹಿಂದಿರುವ ಉದ್ದೇಶ ಮತ್ತು ದುರುದ್ದೇಶದ ಕುರಿತು ಪರಿಶೀಲಿಸಲಾಗುತ್ತದೆ ಎಂದ ಅವರು, ಈ ಪ್ರಕರಣದಲ್ಲಿ ರಾಜಕಾರಣ ಇಲ್ಲ.

ನಾನಾಗಲೀ, ಮುಖ್ಯಮಂತ್ರಿಯಾಗಲೀ, ಉಪಮುಖ್ಯಮಂತ್ರಿಯಾಗಲೀ ರಾಜಕಾರಣ ಮಾಡುವ ಆಸಕ್ತಿ ಹೊಂದಿಲ್ಲ. ಮಹಿಳೆ ದೂರು ಕೊಟ್ಟಾದ ಅದನ್ನು ದಾಖಲಿಸಬೇಕಾಗುತ್ತದೆ. ಪೊಲೀಸರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಬಾಯಿಸಿದ್ದಾರೆ ಎಂದು ಸ್ಪಷ್ಪಪಡಿಸಿದರು.

ಇದೇ ವೇಳೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಘಟನೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಹಿಳೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ವಾಸ್ತವಾಂಶಗಳ ಬಗ್ಗೆ ಗೃಹಸಚಿವರೇ ಪ್ರತಿಕ್ರಿಯಿಸುತ್ತಾರೆ ಎಂದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಪರಸ್ಪರ ಭೇಟಿ ಕುತೂಹಲ ಕೆರಳಿಸಿತ್ತು.

RELATED ARTICLES

Latest News