Thursday, December 7, 2023
Homeರಾಜ್ಯಇಂಧನ ಇಲಾಖೆಯಿಂದ ಅಭಾವ ನಿವಾರಣೆಗೆ ವಿದ್ಯುತ್ ಪಡಿತರ ವ್ಯವಸ್ಥೆ ಜಾರಿ

ಇಂಧನ ಇಲಾಖೆಯಿಂದ ಅಭಾವ ನಿವಾರಣೆಗೆ ವಿದ್ಯುತ್ ಪಡಿತರ ವ್ಯವಸ್ಥೆ ಜಾರಿ

ಬೆಂಗಳೂರು,ಅ.11- ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆಗೆ ಅಸಾಧಾರಣ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನಲೆ ವಿದ್ಯುತ್ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಲು ಇಂಧನ ಇಲಾಖೆ ಮುಂದಾಗಿದೆ.ಈ ಉದ್ದೇಶಕ್ಕಾಗಿ ಇಂಧನ ಇಲಾಖೆಯು ಶೀಘ್ರದಲ್ಲೇ ಆದ್ಯತೆ ಮತ್ತು ಆದ್ಯತೆಯೇತರ ಗ್ರಾಹಕರ ಪಟ್ಟಿಯನ್ನು ಸಿದ್ದಪಡಿಸಲಿದೆ. ಜೊತೆಗೆ ವಿದ್ಯುತ್ ಕೊರತೆ ನೀಗಿಸಲು ರಾಜ್ಯ ಸರ್ಕಾರ ಬೇರೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಮುಂದಾಗಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳ ಅವಧಿಯಲ್ಲಿ 12,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಇದೇ ತಿಂಗಳ ಅವಧಿಯಲ್ಲಿ 15000 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ಇರುವುದರಿಂದ ಈ ಕೊರತೆಯನ್ನು ನೀಗಿಸಲು ಇಂಧನ ಇಲಾಖೆ ಪರ್ಯಾಯ ಮಾರ್ಗವನ್ನು ಹುಡುಕುತ್ತಿದೆ.

ಒಂದು ಮೂಲದ ಪ್ರಕಾರ ಪ್ರತಿದಿನ 1500-2000 ಮೆಗಾವ್ಯಾಟ್ ಉತ್ಪಾದನೆಯಲ್ಲಿ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಪರ್ಯಾಯ ಇಂಧನ ಮೂಲಗಳಿಂದ ಬೇಡಿಕೆಯನ್ನು ಸರಿದೂಗಿಸಲು ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಹಾಗೂ ಪಡಿತರ ವ್ಯವಸ್ಥೆ ಜಾರಿ ಮಾಡುವ ಸಂಭವವಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಿನ್ನಮತದ ಭೀತಿ

ನಿರಂತರ ಜ್ಯೋತಿ ಯೋಜನೆಯಡಿ ಗ್ರಾಹಕರ ವಿದ್ಯುತ್ ಪೂರೈಕೆಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಕೈಗಾರಿಕೆಗಳು, ಆಸ್ಪತ್ರೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕಡಿತ ಇರುವುದಿಲ್ಲ. ಆದಾಗ್ಯೂ ಪರಿಸ್ಥಿತಿ ಈ ಬಾರಿ ಭಿನ್ನವಾಗಿರುವುದರಿಂದ ವಿದ್ಯುತ್ ಕಡಿತ ಮಾಡದೆ ಅನ್ಯ ಮಾರ್ಗವಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬಿಕ್ಕಟ್ಟನ್ನು ತಗ್ಗಿಸಲು ನಾವು ಈಗಾಗಲೇ ಹಲವಾರು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಅದರಲ್ಲಿ ಮುಖ್ಯವಾಗಿ ಹೊರರಾಜ್ಯದಿಂದ ವಿದ್ಯುತ್ ಖರೀದಿ, ಪರ್ಯಾಯ ಇಂಧನ ಮೂಲಗಳು ಇದರಲ್ಲಿ ಸೇರಿವೆ. ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೇಡಿಕೆಯನ್ನು ಪೂರೈಸಲು ರಾಜ್ಯವು ಅನ್ಯ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಆಲೋಚಿಸಿದೆ. ಪ್ರಸ್ತುತ ಅಕ್ಟೋಬರ್‌ನಿಂದ ಮೇ 2024ರವರೆಗೆ ಪೂರ್ವ ಸೌರ ಮತ್ತು ನಂತರದ ಸಮಯದಲ್ಲಿ ಉತ್ತರ ಪ್ರದೇಶದೊಂದಿಗೆ 300ರಿಂದ 600 ಮೆಗಾವಾಟ್ ವಿದ್ಯುತ್ ಖರೀದಿಗೆ ಮಾತುಕತೆ ನಡೆಸಲಾಗಿದೆ.

ನವೆಂಬರ್‌ನಿಂದ ಮೇ 2024ರವರೆಗೆ 500 ಮೆ.ವ್ಯಾ ಪೂರೈಕೆಗಾಗಿ ಪಂಜಾಬ್ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿದೆ. ರಾಜ್ಯಕ್ಕೆ ವಿದ್ಯುತ್ ಪೂರೈಸಲು ಅಲ್ಲಿನ ಸರ್ಕಾರಗಳು ಮೌಖಿಕ ಸಮ್ಮತಿ ನೀಡಿವೆ. ಕಳೆದ ಆಗಸ್ಟ್‍ನಲ್ಲಿ ರಾಜ್ಯವು 17,000 ಮೆಗಾವ್ಯಾಟ್ ಬೇಡಿಕೆಯನ್ನು ದಾಖಲಿಸಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಬೇಡಿಕೆ ಪ್ರಮಾಣ ತುಸು ಕಡಿಮೆಯಾಗಿತ್ತು.

ಈಗ ಪುನಃ ಮಳೆ ಬಾರದ ಕಾರಣ ರೈತರಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಉಷ್ಣ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಗಮನವನ್ನು ಇಲಾಖೆ ಹರಿಸಿದೆ. ಮಳೆ ಕಡಿಮೆಯಾಗಿರುವುದರಿಂದ ಪಾವಗಡ ಸೋಲಾರ್ ಪಾರ್ಕ್‍ನಲ್ಲಿ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕುಸಿದಿದೆ. ಪವನ ಯೋಜನೆಗಳಿಂದ ವಿದ್ಯುತ್ ಉತ್ಪಾದನೆಯು ಸಾಮಾನ್ಯ 2000 ಮೆಗಾವ್ಯಾಟ್‍ನಿಂದ 400 ಮೆಗಾವ್ಯಾಟ್‍ಗೆ ಇಳಿದಿದೆ. 2000 ಮೆಗಾವ್ಯಾಟ್ ನವೀಕರಿಸಬಹುದಾದ ಮೂಲಗಳ ಕೊರತೆಯಿದೆ.

ಹೀಗಾಗಿ ಉಷ್ಣ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪ್ರಸ್ತುತ, ರಾಜ್ಯವು ಉಷ್ಣ ಯೋಜನೆಗಳಿಂದ ಮತ್ತು ವಿದ್ಯುತ್ ಖರೀದಿಯ ಮೂಲಕ 7000 ಮೆಗಾವ್ಯಾಟ್ ಪಡೆಯುತ್ತದೆ. ರಾಜ್ಯವು ತನ್ನ ಮೂರು ಶಾಖೋತ್ಪನ್ನ ಯೋಜನೆಗಳಿಂದ 1953w ಉತ್ಪಾದಿಸುತ್ತದೆ.

ಜುಲೈ 2022ರಲ್ಲಿ ಕೃಷಿ ಕ್ಷೇತ್ರಕ್ಕೆ 1,425 ಮೆ.ವ್ಯಾಟ್ ಬಳಕೆಯಾಗಿದ್ದರೆ, ಜುಲೈ 2023 ರಲ್ಲಿ ಇದು 2,209 ಮೆಗಾ ವ್ಯಾಟ್ಗೆ ಏರಿಕೆಯಾಗಿದೆ. ಲಿಂಗನಮಕ್ಕಿ, ಸೂಫಾ ಮತ್ತು ವಾರಾಹಿ ಜಲಾಶಯದ ಜಲ ವಿದ್ಯುತ್ ಉತ್ಪಾದನೆ ಶೇ 50ರಷ್ಟು ಕಡಿಮೆಯಾಗಿದೆ. ಇನ್ನು ಅಕ್ಟೋಬರ್ 1 ರಂದು ಗಾಳಿಯಿಂದ ವಿದ್ಯುತ್ ಉತ್ಪಾದನೆ 53.63 ಮೆ.ವಾ. ಆಗಿದ್ದರೆ, ಅಕ್ಟೋಬರ್ 9 ರಂದು 4.76 ಮೆಗಾವ್ಯಾಟ್‍ಗೆ ಇಳಿದಿದೆ. ಇನ್ನೊಂದೆಡೆ ವಿದ್ಯುತ್ ಸ್ಥಾವರಗಳು ಆಗಾಗ್ಗೆ ಸ್ಥಗಿತಗೊಳ್ಳುತ್ತಿವೆ.

ವಿದ್ಯುತ್ ಸಮಸ್ಯೆಗೆ ಮಳೆ ಕೊರತೆ ಮಾತ್ರವಲ್ಲ, ಹಿಂದಿನ ಹಾಗೂ ಈಗಿನ ಸರ್ಕಾರದ ನಿರ್ಲಕ್ಷ್ಯವೂ ವಿದ್ಯುತ್ ಅಭಾವ ಸೃಷ್ಟಿಗೆ ಕಾರಣ ಎನ್ನಲಾಗಿದೆ. ಸಾರ್ವಜನಿಕ ಸ್ವಾಮ್ಯದ ಕೆಪಿಸಿಎಲ್ ನಿರ್ಲಕ್ಷ್ಯಕ್ಕೊಳಗಾಗಿದ್ದು, ವಿದ್ಯುತ್ ಜಾಲಕ್ಕೆ ಹೊಸದಾಗಿ ಒಂದೇ ಒಂದು ಯುನಿಟ್ ಸೇರಿಸಲು ಸಾಧ್ಯವಾಗಿಲ್ಲ. ಕಲ್ಲಿದ್ದಲು ಖರೀದಿ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗದ ಕಾರಣ ಒಂದು ವಾರಕ್ಕೆ ಬೇಕಾಗುವಷ್ಟು ದಾಸ್ತಾನಿಡಲು ಸಾಧ್ಯವಾಗಿಲ್ಲ. ಇದು ಶಾಖೋತ್ಪನ್ನ ಸ್ಥಾವರದ ಪೂರ್ಣ ಸಾಮಥ್ರ್ಯದ ವಿದ್ಯುತ್ ಉತ್ಪಾದನೆಗೆ ಅಡ್ಡಗಾಲು ಹಾಕಿದೆ ಎಂದು ಮೂಲಗಳು ಸ್ಪಷ್ಟಪಡಿಸುತ್ತಿವೆ.

ಚೆನ್ನೈನಿಂದ ಅಹಮದಾಬಾದ್‍ಗೆ ಶುಭ್‍ಮನ್ ಗಿಲ್ ಶಿಫ್ಟ್

ವಿದ್ಯುತ್ ಸಮಸ್ಯೆ ಈಗ ಸೃಷ್ಟಿಯಾಗಿರುವುದಲ್ಲ. ಮಳೆ ವೈಫಲ್ಯವೂ ಒಂದು ಕಾರಣವಾಗಿರಬಹುದು. ಇದರೊಂದಿಗೆ ಇನ್ನೂ ಹಲವು ಕಾರಣಗಳು ಸೇರಿರಬಹುದು. ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಸಿದಿರುವ ಪರಿಣಾಮ ವಿದ್ಯುತ್ ಸಮಸ್ಯೆ ತಲೆದೋರಿದೆ. ರೈತರಿಗೆ 7 ಗಂಟೆ ವಿದ್ಯುತ್ ಬದಲಿಗೆ 2 ಗಂಟೆ ಕಡಿತ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದೆ ಎಂದು ಅಕೃತ ಮೂಲಗಳು ಹೇಳುತ್ತವೆ.

ಇಂಧನ ಸಚಿವ ಕೆಜೆ ಜಾರ್ಜ್ ಅವರು ವಿದ್ಯುತ್ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಹೇಳುತ್ತಲ್ಲೇ ಇದ್ದಾರೆ. ಆದರೆ ರಾಜ್ಯಾದ್ಯಂತ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯುತ್ ವ್ಯತ್ಯಯ, ಕೃಷಿ ಪಂಪ್ಸೆಟ್‍ಗಳಿಗೆ ವಿದ್ಯುತ್ ಕಡಿತ ಮುಂದುವರೆದಿದೆ. ಇದರಿಂದ ರೈತರು ಕಂಗಾಲಾಗಿದ್ದು, ಇಂಧನ ಇಲಾಖೆ ವಿರುದ್ಧ ಸಿಡಿದೆದ್ದಿದ್ದಾರೆ.

ಒಂದೆಡೆ ಉಚಿತ ವಿದ್ಯುತ್(ಗೃಹ ಜ್ಯೋತಿ) ಭಾಗ್ಯದ ಮಧ್ಯೆ ಬೇಡಿಕೆ ಹೆಚ್ಚಳವಾಗಿದೆ. ಮತ್ತೊಂದೆಡೆ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದೆ. ಇದರಿಂದ ರಾಜ್ಯ ಸರ್ಕಾರ ಸಂಕಷ್ಟ ಎದುರಾಗಿದ್ದು, ಇದನ್ನು ಹೇಗೆ ನಿಭಾಯಿಸಲಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

RELATED ARTICLES

Latest News