Sunday, May 5, 2024
Homeರಾಜ್ಯರಾಜ್ಯದಲ್ಲಿ 5.33 ಕೋಟಿ ಮತದಾರರು, ಮಹಿಳೆಯರೇ ಹೆಚ್ಚು..!

ರಾಜ್ಯದಲ್ಲಿ 5.33 ಕೋಟಿ ಮತದಾರರು, ಮಹಿಳೆಯರೇ ಹೆಚ್ಚು..!

ಬೆಂಗಳೂರು,ಅ.27- ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಇಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳು ಹಾಗೂ ಈ ವ್ಯಾಪ್ತಿಗೆ ಒಳಪಡುವ ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯು ಆರಂಭಗೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರು, 2024ರ ಕರಡು ಮತದಾರರ ಪಟ್ಟಿ ಪ್ರಕಾರ , ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,33,77,162 ಮಂದಿ ಇದ್ದಾರೆ. ಇದರಲ್ಲಿ 2,68,02,838 ಪುರುಷ ಮತದಾರ, 2,65,69,428 ಮಹಿಳಾ ಮತದಾರರು ಇದ್ದಾರೆ. 4,896 ಇತರೆ ಮತದಾರರು ಹಾಗೂ 47,172 ಸೇವಾ ಮತದಾರರು ಇದ್ದಾರೆ. 2023ರ ಅಂತಿಮ ಮತದಾರರ ಪಟ್ಟಿ ಪ್ರಕಾರ 5,08,53,84 ಮತದಾರರು ಇದ್ದರು ಎಂದು ಹೇಳಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ 7,06,207 ಮತದಾರರು ಇದ್ದು ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ಅತಿ ಕಡಿಮೆ 1,66,907 ಮತದಾರರು ಇದ್ದಾರೆ. ಶೇ.100ರಷ್ಟು ಭಾವಚಿತ್ರ ಮತ್ತು ಮತದಾರರ ಗುರುತಿನ ಚೀಟಿಯನ್ನು ಡೌನ್‍ಲೋಡ್ ಮಾಡಲಾಗಿದೆ ಎಂದು ಹೇಳಿದರು.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ:
ಇಂದಿನಿಂದ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಆರಂಭಿಸಲಾಗಿದ್ದು, ಡಿಸೆಂಬರ್ 9ರವರೆಗೆ ಮತದಾರರ ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಬಹುದು. ಅಲ್ಲದೆ ನವೆಂಬರ್ 18, 19 ಹಾಗೂ ಡಿಸೆಂಬರ್ 2 ಮತ್ತು 3ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ಡಿಸೆಂಬರ್ 26ರಂದು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗಿದ್ದು, 2024ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವುದಾಗಿ ತಿಳಿಸಿದರು.

ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ 6, ಆಕ್ಷೇಪಣೆ ಸಲ್ಲಿಸಲು ನಮೂನೆ 7, ತಿದ್ದುಪಡಿಗಾಗಿ ನಮೂನೆ 8ನ್ನು ಸಲ್ಲಿಸಬಹುದು. ಆನ್‍ಲೈನ್‍ನಲ್ಲೂ ಸಲ್ಲಿಸಲೂ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಕೈಗೊಳ್ಳಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹಿಳಾ ಮತದಾರರೇ ಹೆಚ್ಚು:
224 ವಿಧಾನಸಭಾ ಕ್ಷೇತ್ರಗಳ ಪೈಕಿ 115 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅತೀ ಕಡಿಮೆ(859) ಮತದಾರರು ಇದ್ದಾರೆ. ಇಪಿ ಮತದಾರರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ ಶೇ.93.9ರಷ್ಟು , ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಶೇ.47.45ರಷ್ಟು ಕಡಿಮೆ ಇದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಮತದಾರರು ಇದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರು ಇದ್ದಾರೆ ಎಂದರು.

ಮತದಾರರು ತಮ್ಮ ಆಧಾರ್ ಜೋಡಣೆ ನೀಡುವುದು ಕಡ್ಡಾಯವಲ್ಲ ಅದು ಐಚ್ಛಿಕ ಎಂದು ಸ್ಪಷ್ಪಪಡಿಸಿದರು.
18- 19 ವರ್ಷದ ಯುವ ಮತದಾರರು 13,45,707 ಮಂದಿ ಇದ್ದು, ತೃತೀಯ ಲಿಂಗಿ ಮತದಾರರು 4,896 ಇದ್ದಾರೆ. ಸಾಗರೋತ್ತರ ಮತದಾರರು 3055, ವಿಕಲಚೇತನ ಮತದಾರರು 5,66,777 ಇದ್ದು, 80 ವರ್ಷ ಮೇಲ್ಪಟ್ಟ ಮತದಾರರು 11,76,093ರಷ್ಟಿದ್ದಾರೆ ಎಂದು ಹೇಳಿದರು.

BIG NEWS : ಧರ್ಮದ ಹೆಸರಲ್ಲಿ 2ನೇ ಮದುವೆಗೆ ನಿರ್ಬಂಧ

ಲಿಂಗಾನುಪಾತವು ಒಂದು ಸಾವಿರ ಪುರುಷರಿಗೆ 2011ರ ಜನಗಣತಿ ಪ್ರಕಾರ 973 ಇದೆ. ಮತದಾರರ ಪಟ್ಟಿಯ ಪ್ರಕಾರ ಲಿಂಗಾನುಪಾತ 991 ಇದೆ. ಮತದಾರರ ಮತ್ತು ಜನಸಂಖ್ಯೆಯ ಅನುಪಾತದ ಪ್ರಕಾರ ಶೇ.68.02 ರಷ್ಟಿದೆ. ಮತದಾರರ ಪಟ್ಟಿಯ ಪ್ರಕಾರ ಶೇ.69.21ರಷ್ಟಿದೆ.

58,834 ಮತದಾನ ಕೇಂದ್ರಗಳಿದ್ದು 845 ಮತಕಟ್ಟೆಗಳನ್ನು ಸೇರಿಸಲಾಗಿದೆ. 293 ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ. 552 ಮತಗಟ್ಟೆಗಳು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು.

18,88,243 ಅರ್ಜಿಗಳನ್ನು ಸ್ವೀಕರಿಸಿದ್ದು, 16,31, 547 ಅರ್ಜಿಗಳನ್ನು ಅನುಮೋದಿಸಲಾಗಿದೆ. 1,71,964 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಮಟ್ಟದ ಏಜೆಂಟರ್‍ನ್ನು ನೇಮಿಸಲು ಮತ್ತು ಎಲ್ಲಾ ಅರ್ಹಮತದಾರರನ್ನು ನೋಂದಾಯಿಸಲು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಕೋರಿದರು.

ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡರು, ವಿಷಯ ಏನು ಗೊತ್ತೇ..?

ದೋಷಮುಕ್ತ ಮತದಾರರ ಪಟ್ಟಿ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಮಯದಲ್ಲಿ ಸಂಬಂತ ನಮೂನೆಗಳ ಮೂಲಕ ಸಲ್ಲಿಸಿ ಪರಿಷ್ಕರಣೆ ಮಾಡಿಕೊಳ್ಳಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಮುಖ್ಯ ಚುನಾವಣಾಕಾರಿಗಳಾದ ಆರ್.ವೆಂಕಟೇಶ್‍ಕುಮಾರ್, ಎಂ.ಕೂರ್ಮಾ ರಾವ್ ಉಪಸ್ಥಿತರಿದ್ದರು.

RELATED ARTICLES

Latest News