ರಾಯಚೂರು,ಅ.20- ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿರುವುದರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಸಿಎಂ ಅವರು ಸಂಪುಟದಿಂದ ವಜಾಗೊಳಿ ಸಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಗಾಂಭೀರ್ಯ ಅರಿತು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ಕೊಟ್ಟಿದೆ. ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ಶಿವಕುಮಾರ್ ನೈತಿಕತೆ ಪ್ರದರ್ಶಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಅವರು ಇನ್ನು ಸಂಪುಟದಲ್ಲಿ ಮುಂದುವರೆದಿರುವುದು ಬಂಡತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲಾದರೂ ತಮ್ಮ ಗಟ್ಟಿತನ ತೋರಿಸಿ ಶಿವಕುಮಾರ್ ಅವರಿಂದ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು. ಸಂಪುಟಕ್ಕೆ ಸಿಎಂ ಅವರೇ ಸುಪ್ರೀಂ ಆಗಿರುವುದರಿಂದ ಯಾರ ಒಪ್ಪಿಗೂ ಬೇಕಿಲ್ಲ ಎಂದರು.
ಇಂಡಿಯಾ ಮೈತ್ರಿಕೂಟಕ್ಕೆ ಮರ್ಮಾಘಾತ ಕೊಟ್ಟ ಜೆಡಿಯು-ಎಸ್‍ಪಿ
2024ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಬಿದ್ದುಹೋಗತ್ತದೆ. ದೇಶದಲ್ಲೇ ಕಾಂಗ್ರೆಸ್ ನವರಿಗೆ ಅಧಿಕಾರ ಇರಲಿಲ್ಲ. ರಾಜ್ಯದಲ್ಲಿ ಈಗ ಅದು ಗ್ಯಾರಂಟಿಯಾಗಿದೆ. ಮೋಸ ಮಾಡಿ ಸುಳ್ಳು ಹೇಳಿ ಕಾಂಗ್ರೆಸ್‍ನವರು ಅಧಿಕಾರಕ್ಕೆ ಬಂದಿದ್ದಾರೆ. ಈಗ ಅಕ್ರಮ ಅಸ್ತಿ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕರಣ ಬಂದಿದೆ ಎಂದರು. ಇನ್ನೂ ಸಚಿವರಾದ ಸತೀಶ್ ಜಾರಕಿಹೋಳಿ ಎಷ್ಟು ಜನರನ್ನು ಕರೆದೊಯ್ತಾರೊ ಗೊತ್ತಿಲ್ಲ. ಸರ್ಕಾರ ಬಿದ್ದೊಗತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.
ನನ್ನ ವಿರುದ್ಧ ಆರೋಪ ಬಂದಾಗ ಪ್ರತಿಪಕ್ಷಗಳು ರಾಜೀನಾಮೆ ಕೇಳುವ ಮೊದಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದೆ. ಪ್ರಧಾನಿ ನರೇಂದ್ರಮೋದಿ, ಗೃಹಸಚಿವ ಅಮಿತ್ ಷಾ, ಪಕ್ಷದ ರಾಷ್ಟಾಧ್ಯಕ್ಷ ಜೆ.ಪಿ.ನಡ್ಡಾ ರಾಜೀನಾಮೆಗೆ ಒತ್ತಡರ ಹಾಕಿರಲಿಲ್ಲ. ಈಗ ಇದೇ ನಿಲುವನ್ನು ಡಿ.ಕೆ.ಶಿವಕುಮಾರ್ ತೋರಿಸಬೇಕೆಂದು ಈಶ್ವರಪ್ಪ ಒತ್ತಾಯಿಸಿದರು.