Thursday, November 21, 2024
Homeಜಿಲ್ಲಾ ಸುದ್ದಿಗಳು | District Newsಕೋಲಾರ | Kolarಮಹಿಳೆಗೆ ಚಿನ್ನ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ-ನಿರ್ವಾಹಕ

ಮಹಿಳೆಗೆ ಚಿನ್ನ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ-ನಿರ್ವಾಹಕ

KSRTC bus driver-operator shows honesty by returning gold to woman

ಬಾಗೇಪಲ್ಲಿ, ನ.20- ಬಂಗಾರ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆಯ ಮುಖದಲ್ಲಿ ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆ ಮಂದಹಾಸ ಮೂಡಿಸಿದೆ.

ಬಸ್‌‍ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಬಂಗಾರವನ್ನು ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ ಮತ್ತು ನಿರ್ವಾಹಕ ಮಹಿಳೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಾಗೇಪಲ್ಲಿ ಪಟ್ಟಣದ 4ನೇ ವಾರ್ಡ್‌ ನಿವಾಸಿ ನಾಗಮಣಿ ಎಂಬುವವರು ಬಾಗೇಪಲ್ಲಿ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಸುಮಾರು ಒಂದೂವರೆ ಲಕ್ಷ ರೂ. ಬೆಲೆ ಬಾಳುವ ಚಿನ್ನದ ಒಡವೆ ಇದ್ದ ವ್ಯಾನಿಟಿ ಬ್ಯಾಗ್‌ಅನ್ನು ಬಸ್‌ನಲ್ಲಿಯೇ ಮರೆತು ಹೋಗಿದ್ದರು.

ಬಸ್‌ ಚಾಲಕ ವಿ.ಮಂಜುನಾಥ್‌ ಮತ್ತು ನಿರ್ವಾಹಕ ರಾಜಪ್ಪ ಬಸ್‌ಅನ್ನು ಬಾಗೇಪಲ್ಲಿ ಬಸ್‌ ಡಿಪೋದಲ್ಲಿ ನಿಲ್ಲಿಸಲು ಹೋದಾಗ ಸೀಟಿನ ಮೇಲೆ ಇದ್ದ ವ್ಯಾನಿಟಿ ಬ್ಯಾಗ್‌ ಗಮನಿಸಿ ಘಟಕದ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ಅವರ ಗಮನಕ್ಕೆ ತಂದಿದ್ದಾರೆ.

ಶ್ರೀನಿವಾಸಮೂರ್ತಿ ವ್ಯಾನಿಟಿ ಬ್ಯಾಗ್‌ ಪರಿಶೀಲಿಸಿ ಬ್ಯಾಗ್‌ನಲ್ಲಿ ಆಧಾರ್‌ ಕಾರ್ಡ್‌ ಮುಖಾಂತರ ವಿಳಾಸವನ್ನು ಪತ್ತೆಮಾಡಿ ಕೆಎಸ್‌ಆರ್‌ಟಿಸಿ ಬಸ್‌ ಘಟಕಕ್ಕೆ ಮಾಲೀಕರನ್ನು ಕರೆಸಿ ಬಂಗಾರದ ಒಡವೆ ಇದ್ದ ಬ್ಯಾಗ್‌ ಹಿಂದಿರುಗಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಎಸ್‌‍ಆರ್‌ಟಿಸಿ ಬಸ್‌‍ ಡಿಪೋದ ಲೆಕ್ಕಪತ್ರ ಶಾಖೆಯ ಖಾಲೀದ್‌, ನಿರ್ವಾಹಕ ರಾಜಪ್ಪ, ಚಾಲಕ ಮಂಜುನಾಥ್‌ ಮತ್ತು ಸೆಕ್ಯೂರಿಟಿ ಸುರೇಶ್‌ ಇದ್ದರು.
ಮಹಿಳೆಯು ಗಡಿಬಿಡಿಯಲ್ಲಿ ಬ್ಯಾಗನ್ನು ಮರೆತಿದ್ದರು. ಮಾಲೀಕರನ್ನು ಪತ್ತೆಹಚ್ಚಿ ಅದನ್ನು ಹಿಂತಿರುಗಿಸಿದ್ದು ತುಂಬಾ ಖುಷಿಯಾಗಿದೆ ಎಂದು ಚಾಲಕ ವಿ. ಮಂಜುನಾಥ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಬ್ಯಾಗನ್ನು ಮರಳಿ ಪಡೆದ ಮಹಿಳೆ ನಾಗಮಣಿ ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES

Latest News