Sunday, October 6, 2024
Homeರಾಜ್ಯಕೆಎಸ್‌‍ಆರ್‌ಟಿಸಿ ಬಸ್‌‍ ಪಲ್ಟಿಯಾಗಿ ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಂಭೀರ ಗಾಯ

ಕೆಎಸ್‌‍ಆರ್‌ಟಿಸಿ ಬಸ್‌‍ ಪಲ್ಟಿಯಾಗಿ ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಂಭೀರ ಗಾಯ

KSRTC bus overturned, seriously injured many including students

ಮಂಡ್ಯ, ಸೆ.30– ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕ್ಯಾಂಟರ್‌ಗೆ ಡಿಕ್ಕಿಯಾಗಿ ಕೆಎಸ್‌‍ಆರ್‌ಟಿಸಿ ಬಸ್‌‍ ಪಲ್ಟಿಯಾದ ಪರಿಣಾಮ ಬಸ್‌‍ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಇಲ್ಲಿ ನಡೆದಿದೆ.

ಮಂಡ್ಯದ ಉಮಡಹಳ್ಳಿ ಗೇಟ್‌ ಬಳಿ ಹೆದ್ದಾರಿಯಿಂದ ಸರ್ವಿಸ್‌‍ ರಸ್ತೆಗೆ ಬಸ್‌‍ ತಿರುವು ಪಡೆದುಕೊಳ್ಳುವಾಗ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್‌‍ ಚಾಲಕ ಪ್ರಯತ್ನಿಸಿದ್ದು, ಆದರೆ ನಿಯಂತ್ರಣಕ್ಕೆ ಬಾರದೆ ಬಸ್‌‍ ಪಲ್ಟಿಯಾಗಿದೆ.

ಪಕ್ಕದಲ್ಲೇ ಸಂಚರಿಸುತ್ತಿದ್ದ ಬೈಕ್‌ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾನೆ. ಹೆಚ್ಚಾಗಿ ಬಸ್‌‍ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು. ಅವರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ನೆರವಿಗೆ ದಾವಿಸಿ ಗಾಯಾಳು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು. ಚಾಲಕನ ಅಜಾಗರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್‌‍ ಹೈವೆಯಿಂದ ಸರ್ವಿಸ್‌‍ ರಸ್ತೆಗೆ ಬರುವಾಗ ವೇಗ ನಿಯಂತ್ರಿಸದೇ ಇರುವುದು ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.ಬಸ್‌‍ ಪಲ್ಟಿ ಹೊಡೆದ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಬಸ್‌‍ ಅಪಘಾತ ವಿಷಯ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿಗಳ ಪೋಷಕರು ಆಸ್ಪತ್ರೆಗೆ ದೌಡಾಯಿಸಿ ಆರೋಗ್ಯ ವಿಚಾರಿಸಿದ್ದಾರೆ.

ಮಂಡ್ಯ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಎಸ್‌‍ಆರ್‌ಟಿಸಿ ಅಧಿಕಾರಿಗಳು ಕೂಡ ಸ್ಥಳಕ್ಕೆ ದಾವಿಸಿ ಕ್ರೈನ್‌ ಮೂಲಕ ಬಸ್‌‍ನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

RELATED ARTICLES

Latest News