Friday, October 11, 2024
Homeಬೆಂಗಳೂರುಕೊಲೆಯಲ್ಲಿ ಅಂತ್ಯವಾಯ್ತು 'ಕಿರಿಕ್ ಪಾರ್ಟಿ'

ಕೊಲೆಯಲ್ಲಿ ಅಂತ್ಯವಾಯ್ತು ‘ಕಿರಿಕ್ ಪಾರ್ಟಿ’

man Killed in fight during the party

ಬೆಂಗಳೂರು,ಸೆ.30- ಪಾಳು ಜಾಗದಲ್ಲಿ ಕೂತು ಎಣ್ಣೆ ಪಾರ್ಟಿ ಮಾಡುವಾಗ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಉಲ್ಲಾಳದ ಸೊನ್ನೇನಹಳ್ಳಿ ಬಳಿ ನಡೆದಿದೆ.

ಹೈನುಗಾರಿಕೆ ಮಾಡುತ್ತಿದ್ದ ಮೂರ್ತಿ(52) ಕೊಲೆಯಾದ ವ್ಯಕ್ತಿ.ಫೈನಾನ್‌್ಸ ವ್ಯವಹಾರ ಮಾಡುತ್ತಿದ್ದ ಕೀರ್ತಿ(26) ಕೊಲೆ ಆರೋಪಿಯಾಗಿದ್ದು ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಸೊನ್ನೇನಹಳ್ಳಿಯ ಕನಕಭವನ ಸಮೀಪ ಮೃತ ಮೂರ್ತಿ ಅವರ ಸೋದರ ಶ್ರೀನಿವಾಸ್‌‍ ಅವರ ಮನೆಯಿದೆ. ಪಿತೃಪಕ್ಷ ನಿಮಿತ್ತ ಸಹೋದರನ ಮನೆಗೆ ಮೂರ್ತಿ ಹೋಗಿದ್ದರು.ಸಹೋದರನ ಮನೆ ಪಕ್ಕದಲ್ಲಿಯೇ ಪಾಳು ಬಿದ್ದ ಮನೆ ಹಾಗೂ ಖಾಲಿ ಜಾಗವಿದ್ದು ಅಲ್ಲಿ ಟೈಮ್‌ಪಾಸ್‌‍ಗಾಗಿ ಆಗಾಗ್ಗೆ ಸೇರಿಕೊಂಡು ಎಣ್ಣೆ ಪಾರ್ಟಿ ಸೇರಿದಂತೆ ಮೋಜು-ಮಸ್ತಿ ಮಾಡಲಾಗುತ್ತಿತ್ತು. ಇದರಲ್ಲಿ ಸ್ಥಳೀಯ ಕೆಲವರು ಕೂಡ ಸೇರಿಕೊಳ್ಳುತ್ತಿದ್ದರು.

ನಿನ್ನೆ ಮೂರ್ತಿ ಅವರು ಸಹೋದರನ ಮನೆಗೆ ಹೋಗಿದ್ದಾಗ ರಾತ್ರಿ 12 ಗಂಟೆ ಸಂದರ್ಭದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಸ್ಥಳೀಯರೊಂದಿಗೆ ಈ ಸ್ಥಳದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದು, ಈ ವೇಳೆ ನನ್ನ ಲೋಟದಲ್ಲಿದ್ದ ಎಣ್ಣೆ ಚೆಲ್ಲಿದೆ ಎಂದು ಮೂರ್ತಿ ಮತ್ತು ಕೀರ್ತಿ ನಡುವೆ ಗಲಾಟೆಯಾಗಿದೆ.

ಇದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಕೀರ್ತಿ ಚಾಕುವಿನಿಂದ ಮೂರ್ತಿ ಹೊಟ್ಟೆಗೆ ಇರಿದಿದ್ದಾನೆ. ಕುಸಿದು ಬಿದ್ದ ಮೂರ್ತಿಯನ್ನು ಅಲ್ಲಿದ್ದವರೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಗಂಭೀರಗಾಯವಾಗಿದ್ದು, ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದಾರೆ.

ಆದರೆ ಅಲ್ಲಿಗೆ ಹೋಗುವಷ್ಟರಲ್ಲಿಯೇ ಮೂರ್ತಿ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುದ್ದಿ ತಿಳಿದು ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಕೀರ್ತಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜ್ಞಾನಭಾರತಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

RELATED ARTICLES

Latest News