Saturday, May 4, 2024
Homeರಾಜ್ಯಬಸ್ ಪ್ರಯಾಣ ದರ ಹೆಚ್ಚಳದ ಮುನ್ಸೂಚನೆ ನೀಡಿದ ಡಿಸಿಎಂ

ಬಸ್ ಪ್ರಯಾಣ ದರ ಹೆಚ್ಚಳದ ಮುನ್ಸೂಚನೆ ನೀಡಿದ ಡಿಸಿಎಂ

ಬೆಂಗಳೂರು,ಅ.7- ಸರ್ಕಾರದ ಸಾರಿಗೆ ಸಂಸ್ಥೆಗಳನ್ನು ವ್ಯವಹಾರಿಕ ಮಾದರಿಯಲ್ಲಿ ಸ್ಥಾಪಿಸಲಾಗಿದ್ದು, ಅವುಗಳ ಉಳಿವಿಗಾಗಿ ರಾಜಕೀಯ ಹಿತಾಸಕ್ತಿ ಪ್ರದರ್ಶನ ಅಗತ್ಯವಿದೆ, ಕಳೆದ ಏಳೆಂಟು ವರ್ಷಗಳಿಂದಲೂ ಪ್ರಯಾಣ ದರ ಪರಿಷ್ಕರಣೆಯಾಗಿಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಸ್ ಪ್ರಯಾಣ ದರದ ಏರಿಕೆಯ ಮುನ್ಸೂಚನೆ ನೀಡಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ 100 ನೂತನ ಕರ್ನಾಟಕ ಸಾರಿಗೆ ಮತ್ತು 40 ಹವಾನಿಯಂತ್ರಣರಹಿತ ಸ್ಲೀಪರ್ ಬಸ್‍ಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಗೀರ್ ಅಹಮ್ಮದ್‍ಸಾರಿಗೆ ಸಚಿವರಾಗಿದ್ದಾಗ ಡೀಸೆಲ್ ಬೆಲೆ ಏರಿಕೆಗನುಗುಣವಾಗಿ ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಕಳೆದ ಏಳೆಂಟು ವರ್ಷಗಳಿಂದಲೂ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆಯಾಗಿಲ್ಲ ಎಂದು ಹೇಳಿದರು.
ಸಾರಿಗೆ ಸಂಸ್ಥೆಗಳ ಉದ್ದೇಶ ಕೇವಲ ಲಾಭ ಮಾಡುವುದಷ್ಟೇ ಅಲ್ಲ, ಜನರಿಗೆ ಸೇವೆ ಮಾಡಬೇಕು, ಅದೇ ಸಮಯದಲ್ಲಿ ಲಾಭದಾಯಕವಾಗಿಯೂ ಅವು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಎಲ್ಲೂ ಇಲ್ಲದಂತಹ ವಿಮಾ ಸೌಲಭ್ಯವನ್ನು ನಮ್ಮ ಸಾರಿಗೆ ನಿಗಮಗಳು ಅಳವಡಿಸಿಕೊಂಡಿವೆ. ಅಪಘಾತದಲ್ಲಿ ಸಿಬ್ಬಂದಿಗಳು ಮೃತಪಟ್ಟ ಸಂದರ್ಭದಲ್ಲಿ 1 ಕೋಟಿ ರೂ. ಪರಿಹಾರ ನೀಡುವ ವಿಮಾ ಸೌಲಭ್ಯ ಕೆಎಸ್‍ಆರ್‍ಟಿಸಿಯಲ್ಲಿದ್ದು, ಉಳಿದಂತೆ ವಿವಿಧ ನಿಗಮಗಳಿಗೂ ಅದನ್ನು ಹಂತಹಂತವಾಗಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಬಿಎಸ್‍ವೈ ರಾಜ್ಯ ಪ್ರವಾಸಕ್ಕೆ ವರಿಷ್ಠರಿಂದ ಇನ್ನೂ ಸಿಕ್ಕಿಲ್ಲ ಅನುಮತಿ

ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ ಈವರೆಗೂ 72 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದು ಸರ್ಕಾರಕ್ಕೆ ಹೊರೆಯಾಗಿದೆ. ನಿಗಮಗಳಿಗೆ ಸರ್ಕಾರದಿಂದ ಹಣ ಭರಿಸುವುದು ಕಷ್ಟವಾಗುತ್ತಿದೆ. ಈ ಯೋಜನೆ ಪ್ರಸ್ತಾಪಿಸಿದ್ದಕ್ಕಾಗಿ ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ. ಸಾರಿಗೆ ನಿಗಮಗಳ ಆಡಳಿತ ಮಂಡಳಿಯವರು ಶಕ್ತಿ ಯೋಜನೆಯಿಂದ ನಿಗಮ ನಡೆಸುವುದು ಕಷ್ಟ ಎಂದು ಚರ್ಚೆ ಮಾಡಿದ್ದಾರೆ. ಎಲ್ಲವೂ ಗೊತ್ತಿದೆ ಎಂದರು.

ಆದರೆ ಹೆಣ್ಣುಮಕ್ಕಳು ಉಚಿತವಾಗಿ ಪ್ರಯಾಣಿಸಬೇಕು ಎಂಬ ನಮ್ಮ ಬದ್ಧತೆ ಈಡೇರಿದೆ. ಇಂದು ಬೆಳಿಗ್ಗೆ ತಾವು ಮನೆಯಿಂದ ಹೊರಡುವಾಗ ಸಾರಿಗೆ ಬಸ್‍ಗಳ ಉದ್ಘಾಟನೆಗಾಗಿ ಹೋಗುತ್ತಿರುವುದಾಗಿ ಪತ್ನಿಗೆ ತಿಳಿಸಿದ್ದು, ಇಲ್ಲಿಂದ ಮೈಸೂರಿಗೆ ಒಮ್ಮೆ ಸಾರಿಗೆ ಬಸ್‍ನಲ್ಲಿ ಪ್ರಯಾಣಿಸುವಂತೆ ಸಲಹೆ ನೀಡಿದ್ದೇನೆ ಎಂದರು.

ಇಂದು ಉದ್ಘಾಟನೆಗೊಂಡ ಬಸ್‍ಗಳಿಗೆ ಪಲ್ಲಕ್ಕಿ ಎಂದು ಉತ್ತಮವಾದ ಹೆಸರಿಟ್ಟವರಿಗೆ ಪ್ರಶಸ್ತಿ ಕೊಡಬೇಕು ಎಂದ ಡಿ.ಕೆ.ಶಿವಕುಮಾರ್, ಹೆಸರು ಸೂಚಿಸಿದವರು ಯಾರು ಎಂದು ಸಾರಿಗೆ ಸಚಿವರಲ್ಲಿ ಕೇಳಿದರು. ಅಧಿಕಾರಿಗಳು ಸಚಿವ ರಾಮಲಿಂಗಾರೆಡ್ಡಿ ಅವರೇ ಹೆಸರಿಟ್ಟಿದ್ದಾರೆ ಎಂದಾಗ ಅವರಿಗೆ ಪ್ರಮಾಣಪತ್ರ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ, ಮಹಾರಾಜರನ್ನು ಹೊರುತ್ತಿದ್ದ ಪಲ್ಲಕ್ಕಿಯ ಹೆಸರನ್ನು ನಮ್ಮ ಸಾರಿಗೆ ಸಂಸ್ಥೆಗಳ ಬಸ್‍ಗಳಿಗೆ ಇಡಲಾಗಿದೆ. ಅವು ಹೆಣ್ಣುಮಕ್ಕಳ ಪ್ರಯಾಣಕ್ಕೆ ಲಭ್ಯವಾಗಿರುವುದು ಸಂತೋಷ. ತಾವು ಪಲ್ಲಕ್ಕಿ ಬಸ್‍ಗಳನ್ನು ಪರಿಶೀಲಿಸಿದ್ದು, ಆರಾಮದಾಯಕವಾಗಿವೆ. ಆರು ಅಡಿ ಸೀಟುಗಳಿದ್ದು, ಪ್ರಯಾಣಕ್ಕೆ ಅನುಕೂಲವಾಗಿವೆ ಎಂದರು.

ಶಾಸಕರಿಗೆ ಸಾರಿಗೆ ಬಸ್‍ಗಳಲ್ಲಿ ತಲಾ ಸೀಟುಗಳನ್ನು ಮೀಸಲಿಡಲಾಗಿದೆ. ಇದನ್ನು ಉತ್ತರ ಕರ್ನಾಟಕದಲ್ಲಿರುವವರು ಬಳಕೆ ಮಾಡಿಕೊಳ್ಳಬಹುದು. ಆದರೆ ಬಹುತೇಕ ಶಾಸಕರು ಆರ್ಥಿಕವಾಗಿ ಪ್ರಬಲವಾಗಿದ್ದು, ಬಸ್‍ನಲ್ಲಿ ಪ್ರಯಾಣಿಸುತ್ತಿಲ್ಲ ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಎಲ್ಲಾ ಸಾರಿಗೆ ನಿಗಮಗಳಲ್ಲಿ 24 ಸಾವಿರ ಬಸ್‍ಗಳಿದ್ದು, 1.58 ಲಕ್ಷ ಟ್ರಿಪ್‍ಗಳು ಸಂಚರಿಸುತ್ತಿವೆ. ಪ್ರತಿವರ್ಷ ಶೇ.10 ರಷ್ಟು ಬಸ್‍ಗಳನ್ನು ಸ್ಕ್ರಾಪ್ ಮಾಡಲಾಗುತ್ತಿದೆ. ಪ್ರತಿವರ್ಷ ಹೊಸ ಬಸ್‍ಗಳನ್ನು ಖರೀದಿಸಬೇಕು ಮತ್ತು ನಿವೃತ್ತರಾಗುವ ಶೇ.10 ರಷ್ಟು ಹುದ್ದೆಗಳಿಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಬೇಕಿದೆ. 2016 ರ ನಂತರ ಸಾರಿಗೆ ನಿಗಮಗಳಲ್ಲಿ ನೇಮಕವಾಗಿಲ್ಲ, 4 ವರ್ಷಗಳಿಂದಲೂ ಹೊಸ ಬಸ್‍ಗಳನ್ನೂ ಖರೀದಿಸಿಲ್ಲ ಎಂದು ತಿಳಿಸಿದರು.

ಮನರೇಗಾ ಯೋಜನೆ ಡಿಜಿಟಲಿಕರಣದ ಹಿಂದೆ ದುರುದ್ದೇಶ : ಜೈರಾಮ್ ರಮೇಶ್

ಬಜೆಟ್‍ನಲ್ಲಿ 500 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, 1,300 ಬಸ್‍ಗಳನ್ನು ಖರೀದಿಸಲಾಗುವುದು. ಮುಂದಿನ ನಾಲ್ಕೈದು ತಿಂಗಳಿನಲ್ಲಿ ಸಾರಿಗೆ ನಿಗಮಗಳಲ್ಲಿ 4,500 ಬಸ್‍ಗಳನ್ನು ಸೇರ್ಪಡೆ ಮಾಡಲಾಗುವುದು. 13,000 ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೆಲ್ಲವೂ ಸಾಧ್ಯವಾದ ಬಳಿಕ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಹಾಗೂ ರಾಜ್ಯದ ಪ್ರತಿಯೊಂದೂ ಕೊನೆ ಭಾಗಕ್ಕೂ ಸಾರಿಗೆ ಸೇವೆ ಒದಗಿಸಲು ಅನುಕೂಲವಾಗಲಿದೆ ಎಂದರು.

ಕರೊನ ಕಾಲದಲ್ಲಿ 2,800 ಸಂಚಾರ ಅವಧಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಅದನ್ನು ಮರು ಆರಂಭಿಸಬೇಕಿದೆ. 300 ರಿಂದ 400 ಕಿ.ಮೀ. ದೂರ ರಾತ್ರಿ ಪ್ರಯಾಣಿಸುವವರು ನಾನ್ ಎಸಿ ಬಸ್‍ಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ ಅಗತ್ಯಕ್ಕನುಗುಣವಾಗಿ ಅವುಗಳನ್ನು ಖರೀದಿಸಲಾಗುವುದು. ಎಕ್ಸ್‍ಪ್ರೆಸ್ ಬಸ್‍ಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದಾಖಲೆ 100 ಪದಕ ಸಾಧನೆ

ರಾಜ್ಯದ ಸಾರಿಗೆ ಸಂಸ್ಥೆಗಳು ಉತ್ತಮ ಹೆಸರು ಗಳಿಸಿವೆ. ಇದುವರೆಗೂ ಕೆಎಸ್‍ಆರ್‍ಟಿಸಿಗೆ 300, ಬಿಎಂಟಿಸಿಗೆ 145 ಪ್ರಶಸ್ತಿಗಳು ಬಂದಿವೆ. ಬೇರೆ ಯಾವುದೇ ರಾಜ್ಯದ ಸಾರಿಗೆ ನಿಗಮಗಳಿಗೆ ಇಷ್ಟು ಪ್ರಶಸ್ತಿಗಳು ಬಂದಿಲ್ಲ. ಶಕ್ತಿ ಯೋಜನೆ ಆರಂಭಿಸುವಾಗ ಹಲವು ಕೊರತೆಗಳಿದ್ದವು. ಆದರೂ ಧೈರ್ಯ ಮಾಡಿ ಯೋಜನೆ ಜಾರಿಗೊಳಿಸಿದ್ದು, ಸಾಧನೆಗಳಿಗೆ ಉತ್ತಮ ಉದಾಹರಣೆಯಾಗಿದೆ. ವಿರೋಧಪಕ್ಷದವರು ಈ ವಿಷಯದಲ್ಲಿ ಮಾಡಿದ ಟೀಕೆಗಳೆಲ್ಲವೂ ಸುಳ್ಳಾಗಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಬಸ್‍ಗಳನ್ನು ಉದ್ಘಾಟಿಸಿದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News